ಅಖಿಲ ಭಾರತ ಅಂತರ ವಿವಿ ಪುರುಷರ ಖೋ-ಖೋ: ಸತತ 3 ಜಯದೊಂದಿಗೆ ಮಂಗಳೂರು, ಮುಂಬೈ ವಿವಿ ಕ್ವಾ.ಫೈನಲಿಗೆ

ಉಡುಪಿ, ಎ.10: ನಗರದ ಪೂರ್ಣಪ್ರಜ್ಞ ಕಾಲೇಜಿನ ಮೈದಾನದಲ್ಲಿ ಜರ್ಮನ್ ಹ್ಯಾಂಗರ್ ತಂತ್ರಜ್ಞಾನ ದಲ್ಲಿ ನಿರ್ಮಾಣಗೊಂಡಿರುವ ಶ್ರೀವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿವಿ ಪುರುಷರ ಖೋ-ಖೋ ಟೂರ್ನಿಯಲ್ಲಿ ಕಳೆದ ಬಾರಿಯ ಜಂಟಿ ಮೂರನೇ ಸ್ಥಾನಿ ತಂಡಗಳಾದ ಆತಿಥೇಯ ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ಬಲಿಷ್ಠ ಮುಂಬೈ ವಿವಿ ತಂಡ ಗಳು ಸತತ ಮೂರು ಜಯದೊಂದಿಗೆ ತಮ್ಮ ಗುಂಪುಗಳಲ್ಲಿ ಅಗ್ರಸ್ಥಾನ ಪಡೆದು ಅಂತಿಮ ಎಂಟರ ಹಂತಕ್ಕೆ ತೇರ್ಗಡೆಗೊಂಡಿವೆ.
ಚಾಂಪಿಯನ್‌ಷಿಪ್‌ನ ಮೊದಲ ದಿನದಂದು ನಾಲ್ಕು ತಂಡಗಳ ‘ಬಿ’ ಗುಂಪಿನಲ್ಲಿ ಮೊದಲು ದಿಲ್ಲಿ ವಿವಿ ಹಾಗೂ ರಾತ್ರಿ ಛತ್ತೀಸ್‌ಗಢದ ಹೇಮಚಂದ ಯಾದವ್ ವಿವಿಯನ್ನು ಆರಾಮವಾಗಿ ಸೋಲಿಸಿದ್ದ, ಈ ಬಾರಿಯ ದಕ್ಷಿಣ ವಲಯ ಚಾಂಪಿಯನ್ ಮಂಗಳೂರು ವಿವಿ ಇಂದು ಬೆಳಗ್ಗೆ ತನ್ನ ಕೊನೆಯ ಲೀಗ್ ಪಂದ್ಯ ದಲ್ಲಿ ಮಹಾರಾಷ್ಟ್ರ ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯನ್ನು ತೀವ್ರ ಜಿದ್ದಾಜಿದ್ದಿನ ಹೋರಾಟದಲ್ಲಿ 17-13ರ ಅಂತರದಿಂದ ಹಿಮ್ಮೆಟ್ಟಿಸಿ ಗುಂಪಿನಲ್ಲಿ ಅಜೇಯವಾಗುಳಿದು ಅಗ್ರಸ್ಥಾನದೊಂದಿಗೆ ಅಂತಿಮ ಎಂಟರ ಹಂತ ತಲುಪಿದೆ.
ಮತ್ತೊಂದೆಡೆ ‘ಡಿ’ಗುಂಪಿನಲ್ಲಿ ಮುಂಬಯಿ ವಿವಿ ಸಹ ಗುಂಪಿನ ತನ್ನೆಲ್ಲಾ ಮೂರು ಪಂದ್ಯಗಳಲ್ಲೂ ಜಯ ಗಳಿಸಿ ಅಜೇಯವಾಗುಳಿಯಿತು. ನಿನ್ನೆ ಕರ್ನಾಟಕದ ದಾವಣಗೆರೆ ವಿವಿಯನ್ನು ಸೋಲಿಸಿದ್ದ ಮುಂಬೈ ವಿವಿ, ಇಂದು ಪಂಜಾಬ್ ಅಮೃತಸರದ ಜಿಎನ್‌ಡಿ ವಿವಿಯನ್ನು 16-13ರ ಅಂತರದಿಂದ ಸೋಲಿಸಿತ ಲ್ಲದೇ, ಸಂಜೆ ಭುವನೇಶ್ವರದ ಕೆಐಐಟಿಯನ್ನು 13-12ರ ಅಂತರದಿಂದ ಅತ್ಯಂತ ರೋಮಾಂಚಕಾರಿಯಾಗಿ ಹಿಮ್ಮೆಟ್ಟಿಸಿತು.
ಇದೇ ಡಿ ಗುಂಪಿನಲ್ಲಿ ತನ್ನ ಮೊದಲ ಪಂದ್ಯವನ್ನು ಸೋತಿದ್ದ ದಾವಣಗೆರೆ ವಿವಿ, ಇಂದು ಬೆಳಗ್ಗೆ ಭುವನೇಶ್ವರದ ಕೆಐಐಟಿಯನ್ನು 20-17ರ ಅಂತರದಿಂದ ಪರಾಭವಗೊಳಿಸಿತಲ್ಲದೇ, ಸಂಜೆ ಅಮೃತ ಸರದ ಜಿಎನ್‌ಡಿ ವಿವಿಯನ್ನು 16-15ರ ಏಕೈಕ ಅಂಕದಿಂದ ಹಿಂದೆ ಹಾಕಿ ಎರಡನೇ ಜಯ ದಾಖಲಿಸಲು ಯಶಸ್ವಿಯಾಯಿತು. ಈ ಮೂಲಕ ಅದು ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಮುಂದಿನ ಕ್ವಾರ್ಟರ್ ಫೈನಲ್ ಹಂತಕ್ಕೆ ಭಡ್ತಿ ಪಡೆಯಿತು.
ಬಿ ಗುಂಪಿನಲ್ಲಿ ನಿನ್ನೆ ಮಂಗಳೂರು ವಿವಿಗೆ ಮಣಿದ ದಿಲ್ಲಿ ವಿವಿ, ರಾತ್ರಿ ನಡೆದ ಕೊನೆಯ ಪಂದ್ಯದಲ್ಲಿ ಪುಣೆಯ ಸಾವಿತ್ರಿಬಾಯಿ ಪುಲೆ ವಿವಿಯನ್ನು 18-15 ಅಂಕಗಳ ಅಂತರದಿಂದ ಸೋಲಿಸಿತು. ಅಲ್ಲದೇ ಇಂದು ಹೇಮಚಂದ ಯಾದವ್ ವಿಶ್ವವಿದ್ಯಾನಿಲಯ ತಂಡವನ್ನು 16-14ರ ಅಂತರದಿಂದ ಮಣಿಸಿ ಎರಡನೇ ಜಯದೊಂದಿಗೆ ಗುಂಪಿನಲ್ಲಿ ಎರಡನೇ ಸ್ಥಾನ ಪಡೆದು ಅಂತಿಮ ಎಂಟರ ಹಂತಕ್ಕೇರುವಲ್ಲಿ ಯಶಸ್ವಿಯಾಯಿತು.
ಎರಡನೇ ದಿನದ ಉಳಿದ ಪಂದ್ಯಗಳಲ್ಲಿ ಕಳೆದ ಬಾರಿಯ ರಾಷ್ಟ್ರೀಯ ರನ್ನರ್ ಅಪ್ ತಂಡವಾದ ನಂದೇಡ್‌ನ ಎಸ್‌ಆರ್‌ಟಿಎಂ ವಿವಿ, ಸಿ ಗುಂಪಿನಲ್ಲಿ ಕೊಯಮತ್ತೂರಿನ ಭಾರತಿಯಾರ್ ವಿವಿಯನ್ನು 16-12ರಿಂದ ಸೋಲಿಸಿದರೆ, ಅದೇ ಗುಂಪಿನಲ್ಲಿ ಜಲಂಧರ್‌ನ ಲವ್ಲೀ ಪ್ರೊಪೇಷನಲ್ ವಿವಿ, ಒರಿಸ್ಸಾದ ಗಂಗಾಧರ್ ಮೆಹರ್ ವಿವಿಯನ್ನು 22-5ರ ಅಂತರದಿಂದ ಏಕಪಕ್ಷೀಯವಾಗಿ ಸೋಲಿಸಿತು.
ಎ ಗುಂಪಿನ ಪಂದ್ಯದಲ್ಲಿ ಮಹಾರಾಷ್ಟ್ರ ಸಂಭಾಜಿ ನಗರದ ಡಾ.ಬಿಎಎಂ ವಿವಿ ತಂಡ, ಕಾನ್ಪುರದ ಸಿಎಸ್‌ಜೆಎಂ ತಂಡವನ್ನು 15-14ರ ಅಂತರದಿಂದ ರೋಚಕವಾಗಿ ಸೋಲಿಸಿದರೆ, ಕೇರಳ ವಿವಿ, ಛತ್ತೀಸ್‌ಗಢದ ಪಂಡಿತ್ ರವಿಶಂಕರ್ ಶುಕ್ಲಾ ವಿವಿಯನ್ನು 13-12ರಿಂದ ಹಿಮ್ಮೆಟ್ಟಿಸಿತು.
ಮಂಗಳೂರು ವಿವಿಗೆ ಕಾನ್ಪುರ ಸಿಎಸ್‌ಜೆಎಂ ಎದುರಾಳಿ
ಚಾಂಪಿಯನ್‌ಷಿಪ್‌ನ ಲೀಗ್ ಪಂದ್ಯಗಳು ಇಂದು ಮುಕ್ತಾಯಗೊಂಡಿದ್ದು, ನಾಳೆ ಬೆಳಗ್ಗೆ ಕ್ವಾರ್ಟರ್ ಫೈನಲ್ ಪಂದ್ಯಗಳು ನಡೆಯಲಿವೆ. ಮೂರು ಪಂದ್ಯಗಳನ್ನು ಜಯಿಸಿ ಅಜೇಯವಾಗಿ ಕ್ವಾರ್ಟರ್ ಪೈನಲ್‌ಗೇರಿರುವ ಆತಿಥೇಯ ಮಂಗಳೂರು ವಿವಿ ನಾಳೆ ಬೆಳಗ್ಗೆ 9:30ಕ್ಕೆ ಕಾನ್ಪುರದ ಸಿಎಸ್‌ಜೆಎಂ ವಿವಿಯನ್ನು ಎದುರಿಸಿ ಆಡಲಿದೆ. ಕ್ವಾರ್ಟರ್ ಫೈನಲ್ ಪಂದ್ಯಗಳ ವಿವರ ಹೀಗಿದೆ.
ಬೆಳಗ್ಗೆ 8:30ಕ್ಕೆ ಮಹಾರಾಷ್ಟ್ರದ ಡಾ.ಬಿಎಎಂ ವಿವಿ ಹಾಗೂ ಪಂಜಾಬ್‌ನ ಲವ್ಲೀ ಪ್ರೊಪೇಷನಲ್ ವಿವಿ, 9:30ಕ್ಕೆ ಮಂಗಳೂರು ವಿವಿ ಹಾಗೂ ಕಾನ್ಪುರದ ಸಿಎಸ್‌ಜೆಎಂ ವಿವಿ, 10:30ಕ್ಕೆ ನಂದೇಡ್‌ನ ಎಸ್‌ಆರ್‌ಟಿಎಂ ವಿವಿ ಹಾಗೂ ದಾವಣಗೆರೆ ವಿವಿ, 11:30ಕ್ಕೆ ಮುಂಬಯಿ ವಿವಿ ಹಾಗೂ ದಿಲ್ಲಿ ವಿವಿ.
ಈ ಪಂದ್ಯಗಳಲ್ಲಿ ಜಯಗಳಿಸಿ ಎರಡೆರಡು ತಂಡಗಳು ಸಂಜೆ 6:30 ಹಾಗೂ 7:30ಕ್ಕೆ ನಡೆಯುವ ಎರಡು ಸೆಮಿಫೈನಲ್ ಪಂದ್ಯಗಳಲ್ಲಿ ಸೆಣಸಲಿವೆ. ಫೈನಲ್ ಪಂದ್ಯ ಎ.12ರ ಶನಿವಾರ ಬೆಳಗ್ಗೆ 8:30ಕ್ಕೆ ನಡೆಯಲಿದೆ.
