ಉಡುಪಿ: ನ.30ರಂದು ಕಿಶೋರ ಯಕ್ಷಗಾನ ಉದ್ಘಾಟನೆ
ಉಡುಪಿ, ನ.29: ಯಕ್ಷಶಿಕ್ಷಣ ಟ್ರಸ್ಟ್ ಆಯೋಜಿಸುವ ಕಿಶೋರ ಯಕ್ಷಗಾನ ಸಂಭ್ರಮ - 2024ರ ಉದ್ಘಾಟನಾ ಸಮಾರಂಭ ನ.30ರ ಶನಿವಾರ ಅಪರಾಹ್ನ 3:30ಕ್ಕೆ ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಜರಗಲಿದೆ.
ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥರು ಜ್ಯೋತಿ ಬೆಳಗಿಸಿ ಶಾಲಾ ವಿದ್ಯಾರ್ಥಿಗಳ ಯಕ್ಷಗಾನ ಪ್ರದರ್ಶನ ವನ್ನು ಉದ್ಘಾಟಿಸಲಿರುವರು. ಕಿರಿಯ ಯತಿಗಳಾದ ಶ್ರೀ ಸುಶ್ರೀಂದ್ರತೀರ್ಥರು ಉಪಸ್ಥಿತರಿರುವರು. ಉಡುಪಿ ಶಾಸಕ ಯಶ್‌ಪಾಲ್ ಸುವರ್ಣರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ. ವಿಜಯ ಬಲ್ಲಾಳ್ ಶುಭಾಶಂಸನೆ ಮಾಡುವರು.
ಕರ್ನಾಟಕ ಯಕ್ಷಗಾನ ಅಕಾಡೆಮಿಯ ಅಧ್ಯಕ್ಷ ಡಾ. ತಲ್ಲೂರು ಶಿವರಾಮ ಶೆಟ್ಟಿ, ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್, ಡಿಡಿಪಿಐ ಕೆ.ಗಣಪತಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಯಲ್ಲಮ್ಮ ಅತಿಥಿಗಳಾಗಿ ಉಪಸ್ಥಿತರಿರುವರು.
ಉಡುಪಿಯ 27 ಪ್ರೌಢಶಾಲೆಗಳ ಪ್ರದರ್ಶನವು ನವೆಂಬರ್ 30ರಿಂದ ಡಿಸೆಂಬರ್ 14ರವರೆಗೆ ರಾಜಾಂಗಣದಲ್ಲಿ ಜರಗಲಿದೆ ಎಂದು ಯಕ್ಷಶಿಕ್ಷಣ ಟ್ರಸ್ಟ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.