ಆವೆ ಮಣ್ಣು ಪೂರೈಕೆ ಸಮಸ್ಯೆ: 4 ಸಾವಿರ ಹಂಚು ಕಾರ್ಖಾನೆ ಕಾರ್ಮಿಕರ ಭವಿಷ್ಯ ಅತಂತ್ರ

Update: 2025-03-18 21:28 IST
ಆವೆ ಮಣ್ಣು ಪೂರೈಕೆ ಸಮಸ್ಯೆ: 4 ಸಾವಿರ ಹಂಚು ಕಾರ್ಖಾನೆ ಕಾರ್ಮಿಕರ ಭವಿಷ್ಯ ಅತಂತ್ರ

ಸಾಂದರ್ಭಿಕ ಚಿತ್ರ

  • whatsapp icon

ಕುಂದಾಪುರ, ಮಾ.18: ಆವೆ ಮಣ್ಣಿನ (ಕುಂದಾಪುರ ಕನ್ನಡದಲ್ಲಿ ಕೊಜೆ ಮಣ್ಣು) ಅಲಭ್ಯತೆಯಿಂದ ಹಂಚು ಉತ್ಪಾದನೆಗೆ ಭಾರೀ ಸಮಸ್ಯೆಯಾಗುತ್ತಿದ್ದು ತಾಲೂಕಿನ 11 ಹಂಚಿನ ಕಾರ್ಖಾನೆಗಳ 4 ಸಾವಿರ ಕಾರ್ಮಿಕರ ಭವಿಷ್ಯ ಅತಂತ್ರವಾಗಿದೆ. ಇದರ ಪರಿಣಾಮ ಕಾರ್ಖಾನೆಗಳು ಮುಚ್ಚುವ ಭೀತಿಯಲ್ಲಿದೆ.

ಸಾಮಾನ್ಯವಾಗಿ ಒಂದು ತಿಂಗಳಲ್ಲಿ 50 ಲಕ್ಷ ರೂ. ಹೆಂಚುಗಳು ಮಾರಾಟ ವಾಗುತ್ತವೆ. ತಿಂಗಳಿಗೆ 4ರಿಂದ 5ಲಕ್ಷ ರೂ. ಜಿಎಸ್‌ಟಿಯನ್ನು ಸರಕಾರಕ್ಕೆ ಪಾವತಿಸಲಾಗುತ್ತದೆ. ಆದರೆ ಕಾರ್ಖಾನೆಗಳ ಸಂಕಟ ಕೇಳುವವರೇ ಇಲ್ಲ ಎಂದಾಗಿದೆ. ಇದೀಗ ಹಂಚಿನ ಉತ್ಪಾದನೆ ಶೇ.23ಕ್ಕೆ ಇಳಿದಿದೆ. ಬೇಡಿಕೆ ಕಡಿಮೆ ಯಾದರೆ ಕಾರ್ಮಿಕರಿಗೆ ವೇತನ ನೀಡುವುದು ಕಷ್ಟವಾಗಿದೆ. ಅದಕ್ಕಾಗಿ ಅಲಂಕಾರಿಕ ಹೆಂಚು ಸೇರಿದಂತೆ ವೈವಿಧ್ಯಮಯ ಉತ್ಪನ್ನಗಳನ್ನು ತಯಾರಿಸ ಲಾಗುತ್ತದೆ. ಈಗಲೂ ಕರಾವಳಿಯ ಸೆಖೆಗೆ, ಹೆಚ್ಚು ಮಳೆ ಬೀಳುವಲ್ಲಿಗೆ, ಬಡವರ ಮನೆಗೆ, ಐಷಾರಾಮಿ ಮನೆ ಅಲಂಕಾರಕ್ಕೆ ಹಂಚೇ ಆಪದ್ಬಾಂಧವ.

ಉದ್ಯಮದಲ್ಲಿ ಕುಸಿತ: ಸಾಮಾನ್ಯ ಕಾರ್ಖಾನೆಗಳ ವಾರ್ಷಿಕ ವಹಿವಾಟು 4.5ಕೋಟಿ ರೂ. ಇದ್ದರೆ ಇದರಲ್ಲಿ ಶೇ.60ರಷ್ಟು ವೇತನಕ್ಕೆ ವ್ಯಯವಾಗುತ್ತದೆ.

ಉಳಿಕೆ ಮೊತ್ತ ಕಚ್ಚಾವಸ್ತು ಸಹಿತ ಇತರ ಖರ್ಚಿಗೆ ಬೇಕು. ಹಾಗೆಂದು ಕಾರ್ಖಾನೆ ಮುಚ್ಚುವುದಾದರೆ 3-4ಕೋಟಿ ರೂ. ಕಾರ್ಮಿಕರಿಗೆ ಪರಿಹಾರ ಧನ ಒದಗಿಸಲು ಬೇಕಾಗುತ್ತದೆ. ಕೆಲವು ಕಾರ್ಖಾನೆಗಳು ಸಿಆರ್‌ಝೆಡ್. ವ್ಯಾಪ್ತಿಯಲ್ಲಿದ್ದು ಭೂಮಿಯನ್ನೂ ಮಾರಾಟ ಮಾಡುವಂತಿಲ್ಲ. ಹಾಗಾಗಿ ಕಾನೂನು ಸಮರವಷ್ಟೇ ಅಂತಿಮ ಹಾದಿಯಾಗಿದೆ.

ಹೆಂಚು ಉದ್ಯಮ ಪ್ರಸಿದ್ಧಿ: ಮಂಗಳೂರು ಹಂಚು ಎಂದೇ ಪ್ರಸಿದ್ಧವಾದ ಹಂಚು ಉದ್ಯಮಕ್ಕೆ ಈಗ ಮಣ್ಣಿನ ಕೊರತೆ ಉಂಟಾಗಿದೆ. 1865ರಲ್ಲಿ ಮಂಗಳೂರಿನಲ್ಲಿ ಸ್ಥಾಪನೆಯಾಗಿ, ಮಂಗಳೂರು ಹೆಂಚು ಎಂದೇ ದೇಶಾದ್ಯಂತ ಮಾತ್ರವಲ್ಲದೇ ವಿದೇಶಗಳಲ್ಲೂ ಪ್ರಸಿದ್ದಿ ಪಡೆದಿದೆ.

ಅಂದು ಮಂಗಳೂರಿನಲ್ಲಿ 80, ಕುಂದಾಪುರದಲ್ಲಿ 17, ಉತ್ತರ ಕನ್ನಡ ಜಿಲ್ಲೆಯಲ್ಲಿ 16 ಕಾರ್ಖಾನೆಗಳು ಕಾರ್ಯಾಚರಿಸುತ್ತಿದ್ದವು. ಆದರೆ ಇಂದು ಆವೆ ಮಣ್ಣು ಹಾಗೂ ಕಾರ್ಮಿಕರ ಕೊರತೆಯಿಂದಾಗಿ ಉ.ಕ. ಜಿಲ್ಲೆಯ ಎಲ್ಲ ಕಾರ್ಖಾನೆಗಳು ಮುಚ್ಚಲ್ಪಟ್ಟಿವೆ. ಕುಂದಾಪುರದಲ್ಲಿ ಕೇವಲ 10, ಮಂಗಳೂರಿನಲ್ಲಿ 4 ಕಾರ್ಖಾನೆಗಳು ಮಾತ್ರ ಕಾರ್ಯಾಚರಿಸುತ್ತಿವೆ. ಸದ್ಯ ಕೇರಳ ದೊಡ್ಡ ಮಾರುಕಟ್ಟೆಯಾಗಿದ್ದು ಬೆಳಗಾವಿ, ಪುಣೆ, ಮುಂಬಯಿ ಹಾಗೂ ಕರ್ನಾಟಕದ ವಿವಿಧಡೆಗೆ ಇಲ್ಲಿನ ಹಂಚು ರವಾನೆಯಾಗುತ್ತದೆ.

ಆವೆ ಮಣ್ಣಿನ ಸಮಸ್ಯೆ: ಹೆಚ್ಚಿನ ಹೆಂಚಿನ ಕಾರ್ಖಾನೆಗಳು ಕುಂದಾಪುರ ಹಾಗೂ ಬೈಂದೂರು ತಾಲೂಕು ವ್ಯಾಪ್ತಿಯ ಖಾಸಗಿ ಜಾಗ ಖರೀದಿಸಿ ಆವೆ ಮಣ್ಣು ತೆಗೆಯುತ್ತವೆ.

ಕೋಟ, ತೆಕ್ಕಟ್ಟೆ ಭಾಗದಲ್ಲಿ ಅತೀ ಹೆಚ್ಚು ಆವೆ ಮಣ್ಣು ತೆಗೆಯಲಾಗುತ್ತದೆ. ಮಳೆಗಾಲದಲ್ಲಿ ಗಣಿಗಾರಿಕೆ ಸಾಧ್ಯವಿಲ್ಲ. ನೀರಿನ ಮಟ್ಟ ಇಳಿಕೆ ಕಂಡ ಜನವರಿಯಿಂದ ಜೂನ್ವರೆಗೆ ನಡೆಯುತ್ತದೆ. ಖಾಸಗಿ ಯವರೊಂದಿಗೆ ಸೆಂಟ್ಸ್‌ಗೆ ಇಂತಿಷ್ಟು ಎಂದು 3 ವರ್ಷಕ್ಕೆ ಒಪ್ಪಂದ ಅಥವಾ ಜಾಗ ಖರೀದಿಸಲಾಗುತ್ತದೆ.

ಆದರೆ ಸಮೀಪದ ಜಾಗದವರು ಭೂಕುಸಿತದ ಭೀತಿ ಎಂದು ದೂರು ನೀಡುತ್ತಾರೆ. ಮಣ್ಣು ಸಾಗಾಟಕ್ಕೆ ಅಡ್ಡಿ ಮಾಡುತ್ತಾರೆ. ಹಾಗಾಗಿ ಪೊಲೀಸರು ತಡೆಯುತ್ತಾರೆ. ಕೃಷಿಗೆ ಯೋಗ್ಯವಲ್ಲದ ಜಾಗದಿಂದ ಕೃಷಿ ಇಲಾಖೆಯ ಪ್ರಮಾಣಪತ್ರದ ಆಧಾರದಲ್ಲಿ ಅನುಮತಿ ನೀಡಲಾಗುತ್ತದೆ.

ಮುಖ್ಯಮಂತ್ರಿಗೆ ಮನವಿ: ಭೂವಿಜ್ಞಾನ ಇಲಾಖೆಯ ಅವೈಜ್ಞಾನಿಕ ನಿಯಮಾವಳಿಗಳಿಂದಾಗಿ ಅಳಿದುಳಿದ ಕಾರ್ಖಾನೆಗಳು ಕೂಡ ಸಂಕಷ್ಟಕ್ಕೀಡಾಗಿವೆ. ಈ ಬಗ್ಗೆ ಮುಖ್ಯಮಂತ್ರಿಗೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆ ಸಚಿವರು, ಕಾರ್ಮಿಕ ಇಲಾಖೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು, ಜಿಲ್ಲಾ ಕಾರ್ಮಿಕ ಅಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ. 10 ವರ್ಷಗಳಲ್ಲಿ ಸರಕಾರಕ್ಕೆ ರಾಯಧನ ಇರಲಿಲ್ಲ. ಬಳಿಕ 3 ಲಕ್ಷ ರೂ. ರಾಯಲ್ಟಿ ವಿಧಿಸಲಾಯಿತು.

ಕಳೆದ 3 ವರ್ಷಗಳಿಂದ ಈ ರಾಯಲ್ಟಿ ಧನ ಸ್ವೀಕರಿಸಲು ಇಲಾಖಾಕಾರಿಗಳು ಒಪ್ಪುತ್ತಿಲ್ಲ. ಈಗ ಲೋಡಿಗೆ ಇಷ್ಟು ಎಂದು ಪಾವತಿಸಲು ಸಿದ್ಧರಿದ್ದರೂ ಅನುಮತಿ ನೀಡುತ್ತಿಲ್ಲ ಎಂದು ಕುಂದಾಪುರ ಹೆಂಚು ಮಾಲಕರ ಸಂಘದ ಅಧ್ಯಕ್ಷ ಪ್ರಕಾಶ್ ಟಿ.ಸೋನ್ಸ್, ಸೀತಾರಾಮ ನಕ್ಕತ್ತಾಯ ತಿಳಿಸಿದ್ದಾರೆ.

"ಮರಳು, ಜಲ್ಲಿಕಲ್ಲಿನ ಗಣಿಗಾರಿಕೆಯಂತೆ ಆವೆ ಮಣ್ಣಿನ ಗಣಿಗಾರಿಕೆ ಪರಿಗಣಿಸುವುದು ಸರಿಯಲ್ಲ. ಸರಕಾರಕ್ಕೆ ಪಾವತಿಸಬೇಕಾದ ಎಲ್ಲ ರಾಯಧನ ನೀಡಲು ಸಿದ್ಧವಿದ್ದರೂ ಅನುಮತಿ ದೊರೆಯುತ್ತಿಲ್ಲ. ಇದು ಸಾವಿರಾರು ಹಂಚು ಕಾರ್ಮಿಕರ ಕುಟುಂಬದ ಭವಿಷ್ಯದ ಪ್ರಶ್ನೆ".

-ಬಿ.ಎಂ. ಸುಕುಮಾರ ಶೆಟ್ಟಿ, ಮೂಕಾಂಬಿಕಾ ಟೈಲ್ಸ್ ಮಾಲಕರು

"ಹಂಚು ಕಾರ್ಖಾನೆ ಮಾಲಕರು ಮನವಿ ನೀಡಿದ್ದಾರೆ. ಕೃಷಿ ಇಲಾಖೆಯ ಅಭಿಪ್ರಾಯ ಆಧರಿಸಿ, ಸತಾಯಿ ಸದೇ ಅನುಮತಿ ನೀಡಲಾಗುವುದು. ಪರವಾನಗಿಗೆ ಕೇವಲ 2 ಅರ್ಜಿ ಸಲ್ಲಿಸಿದ್ದು ಅವರಿಗೆ ನೀಡಲಾಗಿದೆ. ಇತರರು ಅರ್ಜಿಯೇ ಸಲ್ಲಿಸಿಲ್ಲ. ಖರೀದಿಸಿದ, ಲೀಸ್‌ಗೆ ಪಡೆದ ಜಾಗದಲ್ಲಿ ಮಣ್ಣು ತೆಗೆಯಲು ಆಕ್ಷೇಪ ಇಲ್ಲ. ಸರಕಾರಿ ಜಾಗದಿಂದ ತೆಗೆಯುವಂತಿಲ್ಲ. 20-30 ಅಡಿ ಆಳ ಮಣ್ಣು ತೆಗೆದಾಗ ಸ್ಥಳೀಯರು ದೂರು ನೀಡಿದ್ದಾರೆ".

-ಡಾ.ವಿದ್ಯಾಕುಮಾರಿ, ಉಡುಪಿ ಜಿಲ್ಲಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News