ಉಡುಪಿ ಜಿಲ್ಲೆಯಲ್ಲಿ ಗಾಳಿ-ಮಳೆಗೆ 5 ಲಕ್ಷ ರೂ.ಗಳಿಗೂ ಅಧಿಕ ಹಾನಿ

Update: 2025-04-28 22:25 IST
ಉಡುಪಿ ಜಿಲ್ಲೆಯಲ್ಲಿ ಗಾಳಿ-ಮಳೆಗೆ 5 ಲಕ್ಷ ರೂ.ಗಳಿಗೂ ಅಧಿಕ ಹಾನಿ
  • whatsapp icon

ಉಡುಪಿ, ಎ.28: ಜಿಲ್ಲೆಯಲ್ಲಿ ಶನಿವಾರ ಹಾಗೂ ರವಿವಾರ ಬೀಸಿದ ಗಾಳಿ-ಮಳೆ ಹಾಗೂ ಸಿಡಿಲಿಗೆ ಜಿಲ್ಲೆಯಾದ್ಯಂತ ವ್ಯಾಪಕ ಹಾನಿ ಸಂಭವಿಸಿದ್ದು, 5 ಲಕ್ಷ ರೂ.ಗಳಿಗೂ ಅಧಿಕ ನಷ್ಟದ ಅಂದಾಜು ಮಾಡಲಾ ಗಿದೆ. ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿ ಈ ಬಗ್ಗೆ ಮಾಹಿತಿ ನೀಡಿದೆ.

ಕಾರ್ಕಳ ತಾಲೂಕು ದುರ್ಗಾ ಗ್ರಾಮದ ಗಂಗಾಧರ ಕೋಟ್ಯಾನ್ ಎಂಬವರಿಗೆ ಸೇರಿದ ವಾಸ್ತವ್ಯದ ಮನೆ, ಕೋಳಿ ಫಾರ್ಮ್ ಹಾಗೂ ತೋಟಕ್ಕೆ ಭಾರೀ ಹಾನಿ ಸಂಭವಿಸಿದೆ. ಮನೆಗೆ ಭಾಗಶ: ಹಾನಿಯಾಗಿದ್ದರೆ, 4000ಕ್ಕೂ ಅಧಿಕ ಕೋಳಿಗಳು ಮೃತಪಟ್ಟಿವೆ. ಮನೆಯ ತೋಟದಲ್ಲಿದ್ದ 50ಕ್ಕೂ ಅಧಿಕ ಅಡಿಕೆ ಮರಗಳು ಧರಾಶಾಹಿಯಾಗಿವೆ. ಪ್ರಾಥಮಿಕ ಅಂದಾಜಿನಂತೆ ಒಂದು ಲಕ್ಷ ರೂ.ಗಳಿಗೂ ಅಧಿಕ ಹಾನಿ ಸಂಭವಿಸಿದೆ.

ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಸರಿತಾ ಪೂಜಾರ್ತಿ ಎಂಬವರಿಗೆ ಸೇರಿದ ಮನೆಯೂ ಗಾಳಿ-ಮಳೆಗೆ ಹಾನಿಗೊಂಡಿದ್ದು, ಒಂದು ಲಕ್ಷ ರೂ. ನಷ್ಟದ ಅಂದಾಜು ಮಾಡಲಾಗಿದೆ. ಅದೇ ಗ್ರಾಮದ ನರ ಸಿಂಹ ನಾಯಕರ ಮನೆಗೆ 40ಸಾವಿರ ಹಾಗೂ ಪ್ರತಿಮಾ ಎಂಬವರ ಮನೆಗೆ 30 ಸಾವಿರ ರೂ.ಗಳಷ್ಟು ಹಾನಿಯ ಅಂದಾಜು ಮಾಡಲಾಗಿದೆ.

ಕಾರ್ಕಳ ತಾಲೂಕಿನ ಮಿಯ್ಯಾರು ಗ್ರಾಮದ ಗಫೂರ್ ಶೇಖ್ ಸಾಹೇಬ್, ಹಸನ್ ಶೇಖ್ ಸಾಬ್, ನಲ್ಲೂರು ಗ್ರಾಮದ ನಿತ್ಯಾನಂದ ಶೆಟ್ಟಿ, ಸುಶೀಲ ಹೆಗ್ಡೆ ಅವರ ಮನೆಗೂ ಗಾಳಿ-ಮಳೆಯಿಂದ ಭಾರೀ ಹಾನಿ ಸಂಭವಿಸಿದೆ ಎಂದು ಇಲ್ಲಿಗೆ ಮಾಹಿತಿ ಬಂದಿದೆ.

ಉಡುಪಿ ತಾಲೂಕು ಮೂಡುಬೈಲು ಬೆಳ್ಳಂಪಳ್ಳಿ ಗ್ರಾಮದ ಸುಂದರ ಪೂಜಾರಿ, ರವಿ ನಾಯ್ಕ್, ಮೋಹಿನಿ ನಾಯಕ್ ಎಂಬವರ ಮನೆಗೂ ಬೀಸಿದ ಗಾಳಿಗೆ ಅಪಾರ ಹಾನಿ ಸಂಭವಿಸಿದೆ.

ಸಿಡಿಲು ಬಡಿದು ಹಾನಿ: ಬೈಂದೂರು ತಾಲೂಕು ತಗ್ಗರ್ಸೆ ಗ್ರಾಮದ ಅಬ್ಬಕ್ಕ ಎಂಬವರ ಮನೆಗೆ ನಿನ್ನೆ ಸಂಜೆ ಸಿಡಿಲು ಬಡಿದು ವಾಸ್ತವ್ಯದ ಮನೆಗೆ ಹಾನಿ ಸಂಭವಿಸಿದೆ. ಉಳಿದಂತೆ ಬ್ರಹ್ಮಾವರ ತಾಲೂಕು ಆರೂರು ಗ್ರಾಮದ ವಸಂತಿ ರಾವ್, ಚೇರ್ಕಾಡಿ ಗ್ರಾಮದ ಪ್ರವೀಣ ಡೇಸ ಅವರ ಮನೆಯೂ ಗಾಳಿ-ಮಳೆಯಿಂದ ಭಾಗಶ: ಹಾನಿಗೊಳಗಾಗಿದೆ.

ರವಿವಾರ ಸಂಜೆ ಮುಂಗಾರು ಪೂರ್ವ ಮಳೆ ಜಿಲ್ಲೆಯ ಎಲ್ಲಾ ತಾಲೂಕು ಗಳಲ್ಲೂ ಅಲ್ಪಪ್ರಮಾಣದಲ್ಲಿ ಸುರಿದಿದೆ. ಹೆಬ್ರಿಯಲ್ಲಿ 12.2ಮಿ.ಮೀ., ಕಾರ್ಕಳದಲ್ಲಿ 10.6, ಬೈಂದೂರಿನಲ್ಲಿ 9.6, ಕುಂದಾಪುರದಲ್ಲಿ 4.5, ಉಡುಪಿಯಲ್ಲಿ 3.3, ಕಾಪುವಿನಲ್ಲಿ 2.1 ಹಾಗೂ ಬ್ರಹ್ಮಾವರದಲ್ಲಿ 1.4ಮಿ.ಮೀ. ಮಳೆಯಾದ ವರದಿ ಬಂದಿದೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News