ಉಡುಪಿ ಜಿಲ್ಲೆಯ ಎಲ್ಲಾ 51 ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಅಣುಕು ಪರೀಕ್ಷೆ: ಡಿಡಿಪಿಐ

Update: 2025-03-19 21:13 IST
ಉಡುಪಿ ಜಿಲ್ಲೆಯ ಎಲ್ಲಾ 51 ಕೇಂದ್ರಗಳಲ್ಲಿ ಪರೀಕ್ಷಾರ್ಥಿಗಳಿಗೆ ಅಣುಕು ಪರೀಕ್ಷೆ: ಡಿಡಿಪಿಐ
  • whatsapp icon

ಉಡುಪಿ, ಮಾ.19: ಪ್ರತಿಯೊಬ್ಬರ ವಿದ್ಯಾರ್ಥಿ ಜೀವನದ ನಿರ್ಣಾಯಕ ಕಾಲಘಟ್ಟವಾದ ಎಸೆಸೆಲ್ಸಿ ಪರೀಕ್ಷೆ ಈ ಬಾರಿ ಮಾ.21ರಿಂದ ಎ.4ರವರೆಗೆ ನಡೆಯಲಿದ್ದು, ಉಡುಪಿ ಜಿಲ್ಲೆ ಕಳೆದ ಬಾರಿ ಪಡೆದ ರಾಜ್ಯದ ಅಗ್ರಸ್ಥಾನವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನಗಳನ್ನು ನಡೆಸಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಹಾಗೂ ಡಿಡಿಪಿಐ ಗಣಪತಿ ಕೆ. ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಈ ಬಾರಿ ಹೊಸದಾಗಿ ಎಸೆಸೆಲ್ಸಿ ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಅವರು ಪರೀಕ್ಷೆ ಬರೆಯಲಿರುವ ಆಯಾ ಪರೀಕ್ಷಾ ಕೇಂದ್ರಗಳಲ್ಲಿ ಒಂದು ದಿನದ ಅಣುಕುಪರೀಕ್ಷೆಯನ್ನು ನಡೆಸಲಾಗಿದೆ. ಜಿಲ್ಲೆಯ ಎಲ್ಲಾ 51 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಈ ಅಣುಕು ಪರೀಕ್ಷೆಯಲ್ಲಿ ಕೈಬೆರಳೆಣಿಕೆ ವಿದ್ಯಾರ್ಥಿ ಗಳನ್ನು ಹೊರತು ಪಡಿಸಿದರೆ ಉಳಿದೆಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು ಎಂದು ಗಣಪತಿ ತಿಳಿಸಿದರು.

ವಿದ್ಯಾರ್ಥಿಗಳಿಗೆ ಪರೀಕ್ಷಾ ಭಯದ ನಿವಾರಣೆ ಜೊತೆಗೆ ಅವರು ಪರೀಕ್ಷೆ ಬರೆಯಲಿರುವ ಹೊಸ ಪರಿಸರದ ಪರಿಚಯ, ಕೇಂದ್ರ ಹಾಗೂ ಕೊಠಡಿಗಳ ಮಾಹಿತಿಯನ್ನು ಮೊದಲೇ ಪಡೆದುಕೊಳ್ಳಲು ಇದು ಸಹಕಾರಿ ಯಾಗಿದೆ. ಹೀಗಾಗಿ ಪರೀಕ್ಷೆ ಆರಂಭಕ್ಕೆ ಮೊದಲಿನ ಅವರ ಮೇಲಿನ ಒತ್ತಡ ಕಡಿಮೆ ಯಾಗಲಿದೆ ಎಂದವರು ಅಭಿಪ್ರಾಯ ಪಟ್ಟರು.

ಒಟ್ಟು ನಾಲ್ಕು ವಿಷಯಗಳಲ್ಲಿ -ಇಂಗ್ಲೀಷ್, ಸಮಾಜ ವಿಜ್ಞಾನ, ಗಣಿತ ಹಾಗೂ ವಿಜ್ಞಾನ- ತಲಾ 20 ಅಂಕಗಳ ಪ್ರಶ್ನೆಪತ್ರಿಕೆಯನ್ನು ನೀಡಿದ್ದು, ಪರೀಕ್ಷೆ ಬಳಿಕ ವಿದ್ಯಾರ್ಥಿಗಳಿಂದಲೇ ಅಲ್ಲಿ ಮೌಲ್ಯಮಾಪನ ಮಾಡಿಸಲಾಗಿದೆ. ಇದರಿಂದ ಅವರಿಗೆ ತಮ್ಮ ತಪ್ಪುಗಳನ್ನು, ಸರಿಯಾದ ಉತ್ತರಗಳನ್ನು ತಿಳಿದುಕೊಳ್ಳಲು ಸಾಧ್ಯವಾಗಿದೆ ಎಂದು ಡಿಡಿಪಿಐ ತಿಳಿಸಿದರು.

ಅಣುಕು ಪರೀಕ್ಷೆ ನಡೆದ ಎಲ್ಲಾ 51 ಕೇಂದ್ರಗಳಲ್ಲೂ ಸಿಸಿಟಿವಿ ಅಳವಡಿಸಿದ್ದು, ಅದು ಸಹ ಅಂದು ಕಾರ್ಯಾ ಚರಿಸಿತ್ತು.ಇದರ ವೆಬ್‌ಕಾಸ್ಟಿಂಗ್ ಮೇಲ್ತುಸುವಾರಿಯನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಡಲಾಗಿದೆ. ಇದು ವಿದ್ಯಾರ್ಥಿಗಳಿಗೂ ಒಂದು ಅನುಭವವಾಗಿದೆ ಎಂದವರು ಹೇಳಿದರು.

ಪರೀಕ್ಷೆ ಪ್ರತಿದಿನ ಬೆಳಗ್ಗೆ 10:00ರಿಂದ ಅಪರಾಹ್ನ 1:00ಗಂಟೆಯವರೆಗೆ ನಡೆಯಲಿದೆ. ಪರೀಕ್ಷೆಯ ದಿನ ಗಳಂದು ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳು ಒಂದು ಗಂಟೆ ಮುಂಚಿತವಾಗಿ ಕೇಂದ್ರಕ್ಕೆ ಬಂದು, ನೊಂದಣಿ ಸಂಖ್ಯೆ ಹಾಗೂ ಕೊಠಡಿ ಸಂಖ್ಯೆಯನ್ನು ಪರಿಶೀಲಿಸಬೇಕು. ಪರೀಕ್ಷಾ ಕೇಂದ್ರ ಗಳಿಗೆ ಪರೀಕ್ಷಾ ಸಿಬ್ಬಂದಿಗಳನ್ನು ಹೊರತುಪಡಿಸಿ ಸಾರ್ವಜನಿಕರು, ಪೋಷಕರು ಸೇರಿದಂತೆ ಯಾರಿಗೂ ಪ್ರವೇಶವಿರುವುದಿಲ್ಲ ಎಂದರು.

ಪರೀಕ್ಷಾ ಕೇಂದ್ರಕ್ಕೆ ಮೊಬೈಲ್/ಸೆಲ್ಯೂಲಾರ್ ಫೋನ್, ಟ್ಯಾಬ್ಲೆಟ್, ಪೆನ್‌ಡ್ರೈವ್, ಬ್ಲೂಟೂತ್ ಡಿವೈಸ್, ಸ್ಮಾರ್ಟ್ ವಾಚ್, ಕ್ಯಾಲ್ಕುಲೇಟರ್ ಮತ್ತು ಇತರೆ ಯಾವುದೇ ರೀತಿಯ ಎಲೆಕ್ಟ್ರಾನಿಕ್ ಉಪಕರಣಗಳು ಅಥವಾ ಲಾಗ್ ಟೇಬಲ್ಸ್, ಕೈಚೀಲ, ಪರ್ಸ್, ನೋಟುಗಳು, ಚಾರ್ಜರ್, ಬಿಡಿ ಹಾಳೆಗಳು ಅಥವಾ ರೆಕಾರ್ಡಿಂಗ್ ವಸ್ತುಗಳು ಸೇರಿದಂತೆ ಇನ್ನಿತರೆ ಯಾವುದೇ ರೀತಿಯ ಉಪಕರಣಗಳನ್ನು ಪರೀಕ್ಷಾ ಕೇಂದ್ರದೊಳಗೆ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.

ಹಿಯರಿಂಗ್ ಏಡ್ ಉಪಕರಣ ಧರಿಸಿರುವ ಅಭ್ಯರ್ಥಿಗಳು ವೈದ್ಯಕೀಯ ದಾಖಲೆಗಳೊಂದಿಗೆ ಪರೀಕ್ಷೆ ಪ್ರಾರಂಭವಾಗುವ ಎರಡು ಗಂಟೆ ಮುಂಚಿತ ವಾಗಿ ಸಂಪೂರ್ಣ ವಿಶೇಷ ತಪಾಸಣೆಗೆ ಒಳಪಡುವುದು ಕಡ್ಡಾಯವಾಗಿದೆ. ಮೆಟಲ್ ವಾಟರ್ ಬಾಟಲ್ಸ್ ಅಥವಾ ನಾನ್ ಟ್ರಾನ್ಸ್‌ಪರೆಂಟ್ ವಾಟರ್ ಬಾಟಲ್‌ಗಳನ್ನು ಪರೀಕ್ಷಾ ಕೊಠಡಿಯೊಳಗೆ ತೆಗೆದುಕೊಂಡು ಹೋಗುವುದನ್ನು ಸಹ ನಿಷೇಧಿಸಲಾಗಿದೆ.

ಪ್ರತಿಯೊಂದು ಪರೀಕ್ಷಾ ಕೇಂದ್ರದ ಸುತ್ತ 200ಮೀ. ವ್ಯಾಪ್ತಿಯಲ್ಲಿ 144ರ ಪ್ರತಿಬಂಧಕಾಜ್ಞೆಯನ್ನು ಪರೀಕ್ಷಾ ದಿನಗಳಲ್ಲಿ ಹೊರಡಿಸಲಾಗಿದೆ. ಅಲ್ಲದೇ ಎಲ್ಲಾ ಪರೀಕ್ಷಾ ಕೇಂದ್ರಗಳ 200ಮೀ. ವ್ಯಾಪ್ತಿಯಲ್ಲಿ ಬರುವ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಬುಕ್‌ಸ್ಟಾಲ್, ಫೋಟೋ ಕಾಪಿಯರ್‌ಗಳನ್ನು ಸಹ ಮುಚ್ಚಲು ಆದೇಶಿಸಲಾಗಿದೆ. ಅಭ್ಯರ್ಥಿಗಳ ಪ್ರವೇಶ ಪತ್ರದಲ್ಲಿ ತಿಳಿಸಿರುವ ವಸ್ತ್ರ ಸಂಹಿತೆಯನ್ನು ಅಭ್ಯರ್ಥಿಗಳು ಕಡ್ಡಾಯವಾಗಿ ಪಾಲಿಸಬೇಕು.

‘ಕಳೆದ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ಉಡುಪಿ ಜಿಲ್ಲೆ ಶೇ.97 ಫಲಿತಾಂಶದೊಂದಿಗೆ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿತ್ತು. ಈ ಬಾರಿ ಈ ಸ್ಥಾನವನ್ನು ಉಳಿಸಿಕೊಳ್ಳುವ ಜೊತೆಗೆ ಪ್ರತಿಶತ ಶೇ.100 ಫಲಿತಾಂಶ ತರುವುದು ಗುರಿಯಾಗಿದೆ.’

-ಡಾ.ಕೆ.ವಿದ್ಯಾಕುಮಾರಿ, ಉಡುಪಿ ಜಿಲ್ಲಾದಿಕಾರಿ.

ಎಸೆಸೆಲ್ಸಿಯಲ್ಲಿ ಉಡುಪಿ ಜಿಲ್ಲೆಯ ಸಾಧನೆ

ವರ್ಷ ಫಲಿತಾಂಶ ಶೇ. ರಾಜ್ಯದಲ್ಲಿ ಸ್ಥಾನ

2015 93.37 1

2016 89.64 2

2017 84.23 1

2018 88.30 1

2019 89.49 5

2020 86.48 9

2021 100 -

2022 89.46 13

2023 91 17

2024 94 1

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News