ಉಡುಪಿ ಜಿಲ್ಲೆಯಲ್ಲಿ 53.65 ಕೋಟಿ ರೂ. ಸಾಲ ವಿತರಣೆ: ಸಂಸದ ಕೋಟ

Update: 2025-04-29 19:48 IST
ಉಡುಪಿ ಜಿಲ್ಲೆಯಲ್ಲಿ 53.65 ಕೋಟಿ ರೂ. ಸಾಲ ವಿತರಣೆ: ಸಂಸದ ಕೋಟ
  • whatsapp icon

ಕೋಟ, ಎ.29: ಉಡುಪಿ ಜಿಲ್ಲೆಯಲ್ಲಿ ವಿಶ್ವಕರ್ಮ ಯೋಜನೆಯಡಿ 53.65 ಕೋಟಿ ರೂ. ಕಡಿಮೆ ಬಡ್ಡಿಯಲ್ಲಿ ಸಾಲ ವಿತರಿಸಲಾಗಿದ್ದು, ರಾಜ್ಯದಲ್ಲಿ ಮೂರನೇ ಅತಿ ಹೆಚ್ಚು ಸಾಲ ಸೌಲಭ್ಯ ವಿತರಿಸಿದ ಜಿಲ್ಲೆಯಾಗಿ ಉಡುಪಿ ಹೆಗ್ಗಳಿಕೆ ಹೊಂದಿದೆ ಎಂದು ಉಡುಪಿ ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬ್ರಹ್ಮಾವರ ತಾಲೂಕಿನ ಕೋಟದ ಅಂಚೆ ಕಚೇರಿಯ ಆವರಣದಲ್ಲಿ ನಡೆದ ವಿಶ್ವಕರ್ಮ ಯೋಜನೆಯಡಿ ತರಬೇತಿ ಪಡೆದವರಿಗೆ ವಿವಿಧ ಸಲಕರಣೆ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಜಿಲ್ಲೆಯಲ್ಲಿ ಒಟ್ಟು 6,890 ಫಲಾನುಭವಿಗಳು ವಿಶ್ವಕರ್ಮ ಯೋಜನೆಗೆ ಆಯ್ಕೆಯಾಗಿದ್ದು, ಇವರ ಪೈಕಿ 6,129 ಮಂದಿಗೆ ಅವರವರ ಉದ್ಯೋಗದಲ್ಲಿ ತರಬೇತಿ ನೀಡಲಾಗಿದೆ. ಈವರೆಗೆ 3,153 ಮಂದಿಗೆ 53.65 ಕೋಟಿ ರೂ. ಸಾಲ ಒದಗಿಸಲಾಗಿದೆ ಎಂದೂ ಲೋಕಸಭಾ ಸದಸ್ಯರು ತಿಳಿಸಿದರು.

ಯೋಜನೆಗೆ ಆಯ್ಕೆಯಾದವರ ಪೈಕಿ ಇನ್ನೂ 713 ಯುವಕರಿಗೆ ತರಬೇತಿ ನೀಡಬೇಕಾಗಿದೆ ಎಂದ ಕೋಟ ಶ್ರೀನಿವಾಸ ಪೂಜಾರಿ, ಮುಂದಿನ ದಿನಗಳಲ್ಲಿ ಆಯಾಯ ಗ್ರಾಮ ಪಂಚಾಯತ್‌ನ ಅಂಚೆ ಕಚೇರಿಯ ಮೂಲಕ ವಿಶ್ವಕರ್ಮ ಸವಲತ್ತು ವಿತರಣೆ ಕಾರ್ಯಕ್ರಮ ನಡೆಸಲಾಗುವುದು ಎಂದರು.

ಸಭೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದ ಸ್ಥಳೀಯ ಶಾಸಕ ಕಿರಣ್ ಕುಮಾರ್ ಕೊಡ್ಗಿ, ವಿಶ್ವಕರ್ಮ ಯೋಜನೆಯಲ್ಲಿ ವಿತರಿಸಿದ ಸವಲತ್ತಿನ ಕಿಟ್‌ಗಳು ಉತ್ತಮ ಗುಣಮಟ್ಟದ್ದಾಗಿದ್ದು, ಈ ಯೋಜನೆ ಫಲಪ್ರದವಾದರೆ ವಿವಿಧ ಕುಶಲಕರ್ಮಿಗಳಿಗೆ ಅನುಕೂಲವಾಗಲಿದೆ. ಫಲಾನುಭವಿಗಳು ಇವುಗಳ ಸಂಪೂರ್ಣ ಸದುಪಯೋಗ ಪಡೆಯಬೇಕೆಂದು ಮನವಿ ಮಾಡಿದರು.

ಸಭೆಯಲ್ಲಿ ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಭರತ್ ಕುಮಾರ್, ಉಪಾಧ್ಯಕ್ಷ ಪಾಂಡು ಪೂಜಾರಿ, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಬಾರಿಕೆರೆ ಸೇರಿದಂತೆ ಅಂಚೆ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News