ಕೋಟೇಶ್ವರ: ವಿದ್ಯಾಪೋಷಕ್‌ನ 67ನೇ ಮನೆ ಉದ್ಘಾಟನೆ

ಉಡುಪಿ, ಎ.11: ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ಮೂಲಕ ಕುಂದಾಪುರ ತಾಲೂಕಿನ ಕೋಟೇಶ್ವರದ ಕುಂಬ್ರಿಯಲ್ಲಿ ಪ್ರಥಮ ಬಿ.ಕಾಂ ವಿದ್ಯಾರ್ಥಿನಿ ಪೃಥ್ವಿ ಅವರ ಬಡ ಕುಟುಂಬಕ್ಕೆ 6 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿಕೊಟ್ಟ ಮನೆಯ ಉದ್ಘಾಟನೆ ಗುರುವಾರ ಜರಗಿತು.
ಹಿರಿಯ ಪತ್ರಕರ್ತರಾದ ಪ್ರಕೃತ ಬೆಂಗಳೂರಿನಲ್ಲಿರುವ ಹಾರ್ಯಾಡಿ ಮಂಜುನಾಥ ಭಟ್ಟರು ಮಕ್ಕಳ ಸಹಕಾರದೊಂದಿಗೆ ತಮ್ಮ ತಾಯಿ ಗಂಗಾ ಲಕ್ಷ್ಮೀನಾರಾಯಣ ಭಟ್ಟ ಮತ್ತು ಅತ್ತೆ ಐರೋಡಿ ಭಾಗೀರಥಿ ನಾಗಪ್ಪಯ್ಯ ಅಲ್ಸೆ ಇವರ ಸ್ಮರಣಾರ್ಥ ಈ ಮನೆಯನ್ನು ಪ್ರಾಯೋಜಿಸಿದ್ದರು.
ಹಿರಿಯರಾದ ಬೆದ್ರಾಡಿ ಗಣಪತಿ ಭಟ್ಟರು ‘ಗಂಗಾ ಭಾಗೀರಥಿ’ ಮನೆ ಯನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ದರು. ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ದಾನಿ ಎಚ್.ಮಂಜುನಾಥ ಭಟ್ ಮಾತನಾಡಿ, ತಾಯಿ ಗಂಗಾ ಮತ್ತು ಅತ್ತೆ ಭಾಗೀರಥಿ ಪ್ರತಿಕೂಲ ಪರಿಸ್ಥಿತಿಯಲ್ಲೂ ಸಂಸಾರವನ್ನು ಮುನ್ನಡೆಸಿದ ಕಷ್ಟ ಜೀವಿಗಳು. ಶಿಕ್ಷಣಕ್ಕಾಗಿ ನಾವು ಪಟ್ಟ ಪಾಡು ಉಳಿದವರಿಗೆ ಬಾರದಿರಲಿ ಎಂಬ ನೆಲೆಯಲ್ಲಿ ಮಕ್ಕಳ ಸಹಕಾರದೊಂದಿಗೆ ವಿದ್ಯಾಪೋಷಕ್‌ಗೆ ನಿರಂತರವಾಗಿ ಆರ್ಥಿಕ ನೆರವನ್ನು ನೀಡುತ್ತಾ ಬಂದಿರುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ಯಕ್ಷಶಿಕ್ಷಣ ಟ್ರಸ್ಟಿಗೆ ಕೊಲ್ಲೂರು ದೇವಳದಿಂದ ಕೊಡಮಾಡಿದ 5 ಲಕ್ಷ ರೂ. ಅನುದಾನದ ಚೆಕ್ಕನ್ನು ದೇವಳದ ಟ್ರಸ್ಟಿ ಸುರೇಂದ್ರ ಶೆಟ್ಟಿ ಸಂಸ್ಥೆಗೆ ಹಸ್ತಾಂತರಿಸಿದರು.
ಹಾರ್ಯಾಡಿ ಶಿವರಾಮ ಭಟ್, ಐರೋಡಿ ಶ್ರೀನಿವಾಸ ಅಲ್ಸೆ, ಯಜ್ಞನಾರಾಯಣ ಅಲ್ಸೆ, ಮಂಜುನಾಥ ಅಲ್ಸೆ, ರಾಘವೇಂದ್ರ ರಾವ್, ಶ್ರೀಧರ ಭಟ್ ಹಾಗೂ ಮಂಜುನಾಥ ಭಟ್ಟರ ಕುಟುಂಬಿಕರು ಕಾರ್ಯಕ್ರಮ ದಲ್ಲಿ ಭಾಗವಹಿಸಿದರು. ಉದ್ಯಮಿ ಅರುಣ್‌ಕುಮಾರ್ ಶೆಟ್ಟಿ, ಅಮೇರಿಕಾದ ಶ್ರೀವತ್ಸ ಬಲ್ಲಾಳ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.
ಯಕ್ಷಗಾನ ಕಲಾರಂಗದ ಎಸ್. ವಿ ಭಟ್, ಕೆ. ಸದಾಶಿವ ರಾವ್, ಯು. ವಿಶ್ವನಾಥ ಶೆಣೈ, ಯು.ಎಸ್. ರಾಜಗೋಪಾಲ ಆಚಾರ್ಯ, ಭುವನ ಪ್ರಸಾದ ಹೆಗ್ಡೆ, ವಿಜಯ ಕುಮಾರ ಮುದ್ರಾಡಿ, ಅನಂತರಾಜ ಉಪಾಧ್ಯಾಯ ಕೆ. ಅಜಿತ್ ಕುಮಾರ್ ಪಾಲ್ಗೊಂಡಿದ್ದರು.
ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿ, ನಾರಾಯಣ ಎಂ. ಹೆಗಡೆ ವಂದಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯಕ್ರಮ ನಿರೂಪಿಸಿದರು.