ಉಡುಪಿ: 9ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಗೆ ಚಾಲನೆ
ಉಡುಪಿ, ಎ.11: ವಿದ್ಯಾರ್ಥಿಗಳು ಹಾಗೂ ವಕೀಲರಲ್ಲಿ ಕಠಿಣ ಪರಿಶ್ರಮ, ಪ್ರಾಮಾಣಿಕತೆ, ಸಮಗ್ರತೆ ಹಾಗೂ ಸಮಾಜದ ಪರ ಕಳಕಳಿ ಇದ್ದರೆ ವೃತ್ತಿ ಬದುಕಿನಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಹೈಕೋರ್ಟು ನ್ಯಾಯಮೂರ್ತಿ ಇ.ಎಸ್. ಇಂದಿರೇಶ್ ಹೇಳಿದ್ದಾರೆ.
ಕುಂಜಿಬೆಟ್ಟು ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಮೂರು ದಿನಗಳ ಕಾಲ ನಡೆಯುವ ನ್ಯಾಯ ವಾದಿ ಪಿ.ಶಿವಾಜಿ ಶೆಟ್ಟಿ ಸ್ಮಾರಕ ರಾಷ್ಟ್ರೀಯ ಮಟ್ಟದ 9ನೇ ಅಣಕು ನ್ಯಾಯಾಲಯ ಸ್ಪರ್ಧೆ-2025ನ್ನು ಶುಕ್ರವಾರ ಸಂಜೆ ಉದ್ಘಾಟಿಸಿ ಅವರು ಮಾತನಾಡುತಿದ್ದರು.
ವಕೀಲರಿಗೆ ಒಳ್ಳೆಯ ಮಾರ್ಗದರ್ಶನ ಮಾಡುವ ಹಿರಿಯ ವಕೀಲರು ಸಿಕ್ಕರೆ ವೃತ್ತಿ ಬದುಕಿನಲ್ಲಿ ಅರ್ಧ ಯಶಸ್ಸು ಸಿಕ್ಕಂತೆ ಎಂದ ನ್ಯಾ. ಇಂದಿರೇಶ್, ಎಲ್ಲಾ ಕ್ಷೇತ್ರಗಳಲ್ಲೂ, ಸಂಸ್ಥೆಗಳಿಗೂ ಇಂದು ಕಾನೂನು ಸಲಹೆಗಾರರ ಅಗತ್ಯವಿದೆ. ಹೀಗಾಗಿ ವಕೀಲರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಅಧ್ಯಯನದ ಜೊತೆ ತಂತ್ರಜ್ಞಾನ ಬಳಸಬೇಕು. ಆದರೆ ತಂತ್ರಜ್ಞಾನಕ್ಕೆ ಶರಣಾಗಬಾರದು. ವಕೀಲರು ಶೇ.50ರಷ್ಟಾದರೂ ಸಾಮಾನ್ಯ ಜ್ಞಾನವನ್ನು ಬಳಸಬೇಕು ಎಂದು ಯುವ ವಕೀಲರಿಗೆ ಕಿವಿಮಾತು ಹೇಳಿದರು.
ಮದ್ರಾಸ್ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಾ.ಪಿ.ಜ್ಯೋತಿ ಮಣಿ, ಜಯಂತಿ ಪಿ.ಶೆಟ್ಟಿ, ವಿಬಿಸಿಎಲ್ ನಿರ್ದೇಶಕಿ ಡಾ.ನಿರ್ಮಲಾ ಕುಮಾರಿ, ವಿಬಿಸಿಎಲ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪಿ.ಶ್ರೀಧರ್, ಪ್ರಾಧ್ಯಾಪಕಿ ಸುರೇಖಾ ಕೆ., ಅಣಕು ನ್ಯಾಯಾಲಯ ಕಾರ್ಯದರ್ಶಿಗಳಾದ ಕೌಶಲ್ ಕಾಮತ್ ಮತ್ತು ನಜ್ಮಾ ಉಪಸ್ಥಿತರಿದ್ದರು.
ಸಿಮ್ರಾನ್ ಶೇಖ್, ಸಂಜನಾ ತೋಳಾರ್, ದಿಯೋನ್ ಕ್ವಾಡ್ರಸ್ ಅತಿಥಿ ಗಳನ್ನು ಪರಿಚಯಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ರಘುನಾಥ್ ಕೆ.ಎಸ್.ಸ್ವಾಗತಿಸಿದರು. ಸೈರಮ್ಯ ಆರ್. ಬೆಲ್ಲೂರು ಕಾರ್ಯಕ್ರಮ ನಿರೂಪಿಸಿ ಸಹಾಯಕ ಪ್ರಾಧ್ಯಾಪಕ ಪ್ರೊ.ಅಮೋಘ ಘಡ್ಕರ್ ವಂದಿಸಿದರು.