ವಿಬಿಸಿಎಲ್‌ನಲ್ಲಿ 9ನೇ ರಾ.ಅಣಕು ನ್ಯಾಯಾಲಯ ಸ್ಪರ್ಧೆ: ದೇಶದ 22 ಕಾನೂನು ಕಾಲೇಜುಗಳು ಭಾಗಿ

ಉಡುಪಿ, ಎ.10: ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯವು ಪಿ.ಶಿವಾಜಿ ಶೆಟ್ಟಿ ಸ್ಮಾರಕ 9ನೇ ರಾಷ್ಟ್ರೀಯ ಅಣಕು ನ್ಯಾಯಾಲಯ ಸ್ಪರ್ಧೆಯನ್ನು ಎ.11ರಿಂದ 13ರವರೆಗೆ ಕಾಲೇಜಿನಲ್ಲಿ ಆಯೋಜಿಸಿದೆ ಎಂದು ಕಾಲೇಜಿನ ನಿರ್ದೇಶಕಿ ಪ್ರೊ.(ಡಾ.) ನಿರ್ಮಲಾ ಕುಮಾರಿ ಕೆ. ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಳೆ ಸಂಜೆ 5:00ಗಂಟೆಗೆ ಸ್ಪರ್ಧೆಯ ಉದ್ಘಾಟನಾ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಲಿದ್ದು, ರಾಜ್ಯ ಉಚ್ಛನ್ಯಾಯಾಲಯದ ನ್ಯಾಯಮೂರ್ತಿಗಳಾದ ಜ. ಇ.ಎಸ್.ಇಂದಿರೇಶ್ ಅವರು ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ. ಮದ್ರಾಸ್ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಜ.(ಡಾ.) ಪಿ.ಜ್ಯೋತಿಮಣಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪಿ.ಶಿವಾಜಿ ಶೆಟ್ಟಿ ಅವರ ಪತ್ನಿ ಜಯಂತಿ ಎಸ್. ಶೆಟ್ಟಿ ಅವರು ಉಪಸ್ಥಿತರಿರುವರು.
ಸಮಾರೋಪ ಸಮಾರಂಭ ಎ.13ರ ಅಪರಾಹ್ನ 2:00ಗಂಟೆಗೆ ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಜ.ಎಚ್.ಪಿ.ಸಂದೇಶ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಜಸ್ಟೀಸ್ ಇ.ಎಸ್.ಇಂದಿರೇಶ್, ಜಸ್ಟೀಸ್ ಡಾ.ಪಿ.ಜ್ಯೋತಿಮಣಿ ಅವರು ಉಪಸ್ಥಿತರಿರುವರು. ಬೆಂಗಳೂರಿನ ಕರ್ನಾಟಕ ಕಾನೂನು ಮತ್ತು ಸಂದೀಯ ಸುಧಾರಣಾ ಸಂಸ್ಥೆಯ ಸಂಶೋಧನಾ ನಿರ್ದೇಶಕ ಪ್ರೊ.ಡಾ.ಚಿದಾನಂದ ರೆಡ್ಡಿ ಎಸ್.ಪಾಟೀಲ್ ಗೌರವ ಅತಿಥಿಯಾಗಿ ಉಪಸ್ಥಿತರಿರುವರು.
ಕೇರಳ, ಮಹಾರಾಷ್ಟ್ರ ಸೇರಿದಂತೆ ದೇಶದ ವಿವಿಧ ರಾಜ್ಯಗಳ ಕಾನೂನು ಕಾಲೇಜುಗಳ 22 ತಂಡಗಳು ಈ ಸ್ಪರ್ಧೆಯಲ್ಲಿ ಭಾಗವಹಿಸಲಿವೆ. ಸ್ಪರ್ಧೆ ಮೂರು ಹಂತದಲ್ಲಿ ನಡೆಯಲಿವೆ. ಆಯ್ದ ಎಂಟು ತಂಡಗಳ ನಡುವೆ ಸೆಮಿಫೈನಲ್ ನಡೆಯಲಿದ್ದು, ಅಗ್ರ ಎರಡು ತಂಡಗಳು ಫೈನಲ್‌ನಲ್ಲಿ ಸೆಣಸಲಿವೆ ಎಂದು ಡಾ.ನಿರ್ಮಲಕುಮಾರಿ ತಿಳಿಸಿದರು.
ಸ್ಪರ್ಧೆಯ ವಿಜೇತ ತಂಡಕ್ಕೆ 20,000ರೂ.ನಗದು ಹಾಗೂ ಟ್ರೋಫಿ, ರನ್ನರ್ ಅಪ್ ತಂಡಕ್ಕೆ 10,000 ರೂ., ಟ್ರೋಫಿ ನೀಡಲಾಗುವುದು. ಹಲವು ವೈಯಕ್ತಿಕ ಪ್ರಶಸ್ತಿಗಳಿದ್ದು, ಉತ್ತಮ ವಕೀಲ, ವಕೀಲೆ, ಉತ್ತಮ ತೀರ್ಪು ಬರೆಯುವ ಸ್ಪರ್ಧಾ ವಿಜೇತರಿಗೂ ನಗದು ಬಹುಮಾನಗಳಿವೆ ಎಂದು ಅವರು ಹೇಳಿದರು.
ರಾ.ವಿಚಾರಸಂಕಿರಣ: ಮುಂದಿನ ಮೇ 3ರಂದು ವೈಕುಂಠ ಬಾಳಿಗಾ ಕಾನೂನು ಕಾಲೇಜು, ಬೆಂಗಳೂರಿನ ನ್ಯಾಶನಲ್ ಲಾ ಸ್ಕೂಲ್ ಮತ್ತು ಕೇರಳ ಲಾ ಅಕಾಡೆಮಿ ತಿರುವನಂತಪುರ ಇವುಗಳ ಸಹಯೋಗದಲ್ಲಿ ‘ತಾಪಮಾನ ಏರಿಕೆಯಾಗುತ್ತಿರುವ ಜಗತ್ತಿನಲ್ಲಿ ಹವಾಮಾನ ನ್ಯಾಯ’ ಕುರಿತು ಒಂದು ದಿನದ ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸಲಾಗುವುದು ಎಂದರು.
ಒಂದು ದಿನದ ಈ ಕಾರ್ಯಾಗಾರದಲ್ಲಿ ಜರ್ಮನ್ ಮತ್ತಿತರ ದೇಶಗಳ ರಾಷ್ಟ್ರೀಯ ಹಾಗೂ ಅಂತಾ ರಾಷ್ಟ್ರೀಯ ಪರಿಸರ ಕಾನೂನು ತಜ್ಞರು, ಭಾರತದ ಇಸ್ರೋ ಸಂಸ್ಥೆಯ ವಿಜ್ಞಾನಿಗಳು ಭಾಗವಹಿಸಲಿದ್ದಾರೆ ಎಂದು ಡಾ.ನಿರ್ಮಲ ಕುಮಾರಿ ತಿಳಿಸಿದರು.
ಮೇ 10ರಂದು ಕಾಲೇಜಿನ ಸಂಸ್ಥಾಪಕರ ದಿನಾಚರಣೆ ಹಾಗೂ ವಾರ್ಷಿಕೋತ್ಸವ ನಡೆಯಲಿದೆ. ಇದರಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ ಉಪಕುಲಪತಿಗಳಾದ ಪ್ರೊ.ಡಾ.ಸಿ.ಬಸವರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದರಲ್ಲಿ ಮೂವರು ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಹಾಗೂ 48 ಮಂದಿಗೆ ದತ್ತಿ ಬಹುಮಾನ ವಿತರಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ.ರಘುನಾಥ್ ಕೆ.ಎಸ್., ಹಳೆವಿದ್ಯಾರ್ಥಿ ಸಂಘದ ಶ್ರೀಧರ್ ಪಿ.ಎಸ್., ಸುರೇಖ ಕೆ. ಉಪಸ್ಥಿತರಿದ್ದರು.