"ನ್ಯಾಯಕ್ಕಾಗಿ 9 ವರ್ಷಗಳಿಂದ ಕಾಯುತ್ತಿರುವ ಕಡೂರಿನ 57ಸಾವಿರ ಎಲ್ಲೈಸಿ ಗ್ರಾಹಕರು"

ಡಾ. ರವೀಂದ್ರನಾಥ ಶಾನುಭಾಗ್
ಉಡುಪಿ, ಮಾ.14: ಭಾರತೀಯ ಜೀವವಿಮಾ ನಿಗಮದ ಉಡುಪಿ ವಿಭಾಗಕ್ಕೆ ಸೇರಿದ 57 ಸಾವಿರಕ್ಕೂ ಅಧಿಕ ಪಾಲಿಸಿದಾರರು ಕಟ್ಟಿದ್ದ ಕೋಟ್ಯಾಂತರ ರೂಪಾಯಿಗಳನ್ನು ಎಲ್ಲೈಸಿಯೇ ನೇಮಿಸಿದ್ದ ಮಧ್ಯ ವರ್ತಿಗಳು ಕಬಳಿಸಿದ ಘಟನೆಯಲ್ಲಿ ನ್ಯಾಯ ಪಡೆಯಲು ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಬಡಪಾಲಿಸಿದಾರರು ಕಳೆದ 9ವರ್ಷಗಳಿಂದ ಚಾತಕ ಪಕ್ಷಿಗಳಂತೆ ಕಾಯುತಿದ್ದಾರೆ.
ಮತ್ತೊಂದು ವಿಶ್ವ ಗ್ರಾಹಕ ದಿನಾಚರಣೆಯನ್ನು ಶನಿವಾರ ನಾಡಿನಾದ್ಯಂತ ಆಚರಿಸಲಾಗುತ್ತಿದೆ. ಆದರೆ ಕಡೂರಿನ 57 ಸಾವಿರಕ್ಕೂ ಅಧಿಕ ಜೀವನ ಮಧುರ ಪಾಲಿಸಿದಾರರ ಇವರ ಪಾಲಿಗೆ ಇದು ಈ ಸಂಭ್ರಮ ವ್ಯಂಗ್ಯದಂತೆ ಬಾಸವಾಗುತ್ತಿದೆ.
ಜೀವವಿಮಾ ನಿಗಮದ ಉಡುಪಿ ವಿಭಾಗಕ್ಕೆ ಸೇರಿದ ಕಡೂರು ತಾಲೂಕಿನ ಸುಮಾರು 200ಕ್ಕೂ ಅಧಿಕ ಗ್ರಾಮಗಳಲ್ಲಿ ಎಲ್ಲೈಸಿ ಪರವಾಗಿ ಪಾಲಿಸಿದಾರ ರಿಂದ ಹಣ ಸಂಗ್ರಸಿದ ಅಮಾಯಕ ಅಂಗನವಾಡಿ ಕಾರ್ಯಕರ್ತೆಯರು ಪಾಲಿಸಿದಾರರ ಆಕ್ರೋಶಕ್ಕೆ ಬಲಿಯಾಗಿದ್ದಾರೆ. ಆಯಾ ಗ್ರಾಮಗಳಲ್ಲಿದ್ದ ಪಾಲಿಸಿ ದಾರರಿಂದ ಸಂಗ್ರಹಿಸಿದ ಕೋಟ್ಯಾಂತರ ರೂ. ಪ್ರೀಮಿಯಮ್ ಹಣವನ್ನು ಎಲ್ಲೈಸಿಯೇ ನೇಮಿಸಿದ್ದ ಪ್ರತಿನಿಧಿಗಳಿಗೆ ಹಸ್ತಾಂತರಿಸಿ ಅಧಿಕೃತ ರಸೀದಿಯನ್ನು ಪಡೆದಿರುವ ಅಂಗನವಾಡಿ ಕಾರ್ಯಕರ್ತೆಯರು ಇದೀಗ ಸರ್ವಸ್ವವನ್ನೂ ಕಳೆದುಕೊಂಡಿದ್ದು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ತಲುಪಿದ್ದಾರೆ ಎಂದು ಇವರಿಗೆ ನ್ಯಾಯಕೊಡಿಸಲು ಹೋರಾಟ ನಡೆಸುತ್ತಿರುವ ಉಡುಪಿ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಇಂದು ಇಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಪ್ರಕರಣದ ಹಿನ್ನೆಲೆ: 2005ರಲ್ಲಿ ದೇಶದ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ನಿರ್ದೇಶನಾಲಯದ ಮಾರ್ಗದರ್ಶನದಲ್ಲಿ ಎಲ್ಲೈಸಿ ಮೈಕ್ರೊ ಇನ್ಶೂರೆನ್ಸ್ ಯೋಜನೆಯನ್ನು ಜಾರಿಗೊಳಿಸಿತು. ಹಳ್ಳಿಯಲ್ಲಿರುವ ಬಡಜನರಿಗೆ ನೆರವಾಗುವ ಈ ಯೋಜನೆಯ ಪ್ರಕಾರ 15 ವರ್ಷಗಳ ಅವಧಿಗೆ 15 ಸಾವಿರ ಮೊತ್ತ ಸಿಗುವ ಜೀವನ ಮಧುರ ಪಾಲಿಸಿಗೆ ಅತೀ ಕಡಿಮೆ ವಾರ್ಷಿಕ ಪ್ರೀಮಿಯಂ ನಿಗದಿಗೊಳಿಸಲಾಗಿತ್ತು. ಪಾಲಿಸಿಗೆ ವರ್ಷಕ್ಕೆ 600ರೂ. ಪ್ರೀಮಿಯಂ ಕಟ್ಟಬೇಕಾಗಿದ್ದು, ಅಸಾಧ್ಯವಾದವರಿಗೆ 50 ರೂ ಮಾಸಿಕ ಕಂತುಗಳನ್ನೂ ನಿಗದಿಗೊಳಿಸಲಾುತು.
ಎಲ್ಲೈಸಿ ಪರವಾಗಿ ಆಯಾ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆ ಯರು ಈ ಪ್ರೀಮಿಯಂ ಹಣವನ್ನು ಸ್ವೀಕರಿಸಿ ಎಲ್ಲೈಸಿ ಆಯಾ ಜಿಲ್ಲೆಯಲ್ಲಿ ನೇಮಿಸಿದ ವಿಮಾ ಪ್ರತಿನಿಧಿಗಳಿಗೆ ಹಸ್ತಾಂತರಿಸಬೇಕಿತ್ತು. 2009-10ರ ವರ್ಷದಲ್ಲಿ ಪ್ರಾರಂಭಿಸಿದ ಈ ಯೋಜನೆಯಲ್ಲಿ ಉಡುಪಿ ವಿಭಾಗಕ್ಕೆ ಸೇರಿದ ಕಡೂರು, ಚಿಕ್ಕಮಗಳೂರು, ಅರಸಿಕೆರೆ, ತರೀಕೆರೆ, ಮೂಡಿಗೆರೆ, ಎನ್.ಆರ್.ಪುರ ಮುಂತಾದ ತಾಲೂಕುಗಳ 200ಕ್ಕೂ ಹೆಚ್ಚು ಗ್ರಾಮಗಳಿಂದ 58000ಕ್ಕೂ ಹೆಚ್ಚಿನ ಬಡಜನರು ಈ ವಿಮಾ ಯೋಜನೆಗೆ ಸೇರಿ ಪಾಲಿಸಿ ಖರೀದಿಸಿದರು.
ಪ್ರತೀ ತಿಂಗಳು ಇವರಿಂದ ಪ್ರೀಮಿಯಂ ಹಣ ಸಂಗ್ರಹಿಸುತಿದ್ದ ಅಂಗನವಾಡಿ ಕಾರ್ಯಕರ್ತೆಯರು ನಿಯಮಿತವಾಗಿ ಎಲ್ಲೈಸಿ ನೇಮಿಸಿದ ಪ್ರತಿನಿಧಿಗಳಿಗೆ ನೀಡಿ ರಸೀದಿ ಪಡೆಯುತಿದ್ದರು. ಆದರೆ 2013ರ ಜುಲೈ ತಿಂಗಳಲ್ಲಿ ಪಾಲಿಸಿದಾರರೊಬ್ಬರು ನಿಧನರಾದಾಗ ಸಲ್ಲಿಸಿದ್ದ ಕ್ಲೈಮ್‌ಪಾಲಿಸಿ ಜೀವಂತವಾಗಿ ಉಳಿದಿಲ್ಲ ಎಂಬ ಕಾರಣಕ್ಕೆ ತಿರಸ್ಕರಿಸಲ್ಪಟ್ಟಾಗ ಸುಮಾರು 19 ಕೋಟಿಯ ಈ ಹಗರಣ ಬಹಿರಂಗ ಗೊಂಡಿತ್ತು ಎಂದು ಡಾ.ಶ್ಯಾನುಭಾಗ್ ತಿಳಿಸಿದರು.
ಈ ಪಾಲಿಸಿಯಲ್ಲಿ ಜೀವಮಾ ನಿಗಮ ಕೇವಲ ಒಂದೇ ಪ್ರೀಮಿಯಂ ಕಂತನ್ನು ಸ್ವೀಕರಿಸಿರುವುದನ್ನು ಗಮನಿಸಲಾಯಿತು. ಪಾಲಿಸಿದಾರರು ಕಟ್ಟಿದ್ದ ಹಣವನ್ನು ಎಲ್ಲೈಸಿ ಪ್ರತಿನಿಧಿಗಳು ಲಪಟಾಯಿಸಿದ್ದು ಅಂದು ಮೊದಲ ಬಾರಿಗೆ ಬೆಳಕಿಗೆ ಬಂತು.
ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಹಲ್ಲೆ: ಈ ಸುದ್ದಿಯ ಬೆನ್ನಲ್ಲೇ ಈ ಪ್ರದೇಶದ 50,000ಕ್ಕೂ ಅಧಿಕ ಪಾಲಿಸಿಗೆ ಇದೇ ಗತಿ ಬಂದಿರುವುದು ಬಹಿರಂಗಗೊಂಡಿತ್ತು. ಇದರಿಂದ ಆಕ್ರೋಶಗೊಂಡ ಪಾಲಿಸಿ ದಾರರು ತಮ್ಮಿಂದ ಪ್ರತಿತಿಂಗಳು 50ರೂ. ಪ್ರೀಮಿಯಂ ಹಣ ಪಡೆಯುತಿದ್ದ ಅಂಗನವಾಡಿ ಕಾರ್ಯ ಕರ್ತರ ಮೇಲೆ ಹಲ್ಲೆ ನಡೆಸಿ ಅವರ ಮನೆಗೆ ನುಗ್ಗಿ ಸೊತ್ತುಗಳನ್ನು ಲೂಟಿ ಮಾಡಿದ್ದರು ಎಂದು ಡಾ.ಶಾನುಭಾಗ್ ವಿವರಿಸಿದರು.
ಆದರೂ ಎಲ್ಲೈಸಿ ಎಚ್ಚೆತ್ತುಕೊಳ್ಳದೇ ಪಾಲಿಸಿದಾರರಿಗೆ ಯಾವುದೇ ನ್ಯಾಯ ನೀಡಲಿಲ್ಲ. ಕೊನೆಗೆ 60 ಮಂದಿ ಗ್ರಾಹಕರು ಸೇರಿ ಚಿಕ್ಕಮಗಳೂರು ಜಿಲ್ಲಾ ಬಳಕೆದಾರರ ಆಯೋಗದಲ್ಲಿ ಗುಂಪು ದಾವೆ ಹೂಡಿದ್ದು, ವಿಚಾರಣೆಯ ವೇಳೆ ಎಲ್ಲೈಸಿ ತನ್ನ ತಪ್ಪನ್ನು ಒಪ್ಪಿಕೊಂಡು ಎಲ್ಲಾ 60ಮಂದಿಗೂ ಅವರ ಹಣವನ್ನು ದಂಡ ಸಹಿತ ಹಿಂದಿರುಗಿಸಿತ್ತು.
ಆದರೆ ಉಳಿದ 50 ಸಾವಿರಕ್ಕೂ ಅಧಿಕ ಪಾಲಿಸಿದಾರರಿಗೆ ಇಂದು ನ್ಯಾಯ ಎಂಬುದು ಮರೀಚಿಕೆ ಯಂತಾಗಿದೆ. 2019ರಲ್ಲಿ ಎಲ್ಲೈಸಿಯನ್ನು ಪ್ರತಿವಾದಿ ಯಾಗಿ ಮಾಡಿ ರಾಜ್ಯ ಬಳಕೆದಾರರ ಆಯೋಗದಲ್ಲಿ ದಾವೆ ಹೂಡಿದ್ದು ಆರು ವರ್ಷಗಳಾದರೂ ಇನ್ನೂ ನ್ಯಾಯ ಸಿಕ್ಕಿಲ್ಲ. ಇದರಲ್ಲಿ ಮೂರು ವರ್ಷ ಕೋವಿಡ್ ಕಾರಣಕ್ಕಾಗಿ ವಿಚಾರಣೆ ನಡೆಯದಿದ್ದರೆ, ಆ ಬಳಿಕವೂ ಪ್ರಕರಣದ ವಿಚಾರಣೆ ಇನ್ನೂ ಪ್ರಾರಂಭಗೊಂಡಿಲ್ಲ ಎಂದವರು ಹೇಳಿದರು.
ಸದ್ಯ ಆಯೋಗಕ್ಕೆ ಅಧ್ಯಕ್ಷರ ನೇಮಕಾತಿಯಾಗಿಲ್ಲ. ಅಧ್ಯಕ್ಷರ ನೇಮಕಕ್ಕಾಗಿ ಹೂಡಿದ ಪಿಐಎಲ್ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಇಚಾರಣೆಗೆ ಬಂದಿದ್ದು, ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿದೆ ಎಂದು ರಾಜ್ಯ ಸರಕಾರ ಕಳೆದ ಫೆ.10ರಂದು ಹೇಳಿದ ಹಿನ್ನೆಲೆಯಲ್ಲಿ ಕೋರ್ಟ್ ದಾವೆಯನ್ನು ವಜಾಗೊಳಿಸಿದೆ. ಆದರೆ ಸರಕಾರ ಇನ್ನೂ ನ್ಯಾಯಾಧೀಶರ ನೇಮಕಾತಿ ಮಾಡಿಲ್ಲ ಎಂದು ನುಡಿದರು.
ಬಡ ಗ್ರಾಹಕರಿಗೆ, ಬಡ ಪಾಲಿಸಿದಾರರಿಗೆ 9 ವರ್ಷ ಕಳೆದರೂ ನ್ಯಾಯ ಸಿಗದ ಹಿನ್ನೆಲೆಯಲ್ಲಿ ಬಳಕೆದಾರರ ರಕ್ಷಣೆಯ ಬಗ್ಗೆ ಮಾತನಾಡುವುದೇ ಆತ್ಮವಂಚನೆಯಾಗುತ್ತದೆ. ಇಂಥ ಸ್ಥಿತಿಯಲ್ಲಿ ಬಳಕೆದಾರರ ದಿನಾಚರಣೆಗೆ ಏನಾದರೂ ಅರ್ಥವಿದೆಯೇ ಎಂದು ಡಾ.ರವೀಂದ್ರನಾಥ ಶ್ಯಾನುಭಾಗ್ ಖಾರವಾಗಿ, ಆಕ್ರೋಶದಿಂದ ಪ್ರಶ್ನಿಸಿದರು.
