ಎ.1: ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಬೃಹತ್ ಪ್ರತಿಭಟನೆ; ಎಪ್ರಿಲ್ ಫೂಲ್ ದಿನಾಚರಣೆ
ಉಡುಪಿ, ಮಾ.17: ಕೇಂದ್ರ ಸರಕಾರ, ಜಿಲ್ಲೆಯ ಸಂಸದರು, ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆಗಳು ಸುಳ್ಳಿನ ಮೇಲೆ ಸುಳ್ಳುಗಳನ್ನು ಹೇಳುತ್ತಾ ಉಡುಪಿ ಜಿಲ್ಲೆಯ ಜನರನ್ನು ಮೂರ್ಖರನ್ನಾಗಿಸು ತ್ತಿರುವ ನಗರದ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬವನ್ನು ಖಂಡಿಸಿ ಎ.1ರಂದು ಬೃಹತ್ ಪ್ರತಿಭಟನೆ ಹಾಗೂ ಎಪ್ರಿಲ್ ಫೂಲ್ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗುವುದು ಎಂದು ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಅಮೃತ ಶೆಣೈ ಹೇಳಿದ್ದಾರೆ.
ಮಲ್ಪೆಯಿಂದ ತೀರ್ಥಹಳ್ಳಿ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 169ಎ ಚತುಷ್ಪಥ ಕಾಮಗಾರಿಯ ಭಾಗ ವಾಗಿ ಇಂದ್ರಾಳಿಯ ರೈಲ್ವೆ ಮೇಲ್ಸೇತುವೆ ಕಾಮಗಾರಿ ಕಳೆದ 9 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಕಾಮಗಾರಿ ಇನ್ನೂ ಕುಂಟುತ್ತಾ ಸಾಗುತ್ತಿದೆ. ಇದರಿಂದ ಉಡುಪಿ ಜಿಲ್ಲೆಯ ಅದರಲ್ಲೂ ವಿಶೇಷವಾಗಿ ಉಡುಪಿ-ಮಣಿಪಾಲ ನಡುವೆ ಓಡಾಡುವ ಜನತೆಗೆ ಆಗಿರುವ ತೊಂದರೆ, ಎದುರಿಸುತ್ತಿರುವ ಸಮಸ್ಯೆಗಳತ್ತ ಗಮನ ಸೆಳೆಯಲು ಅಸ್ತಿತ್ವಕ್ಕೆ ಬಂದಿರುವ ಉಡುಪಿ ನಗರ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ ಇದೀಗ ಜನರ ಪರವಾಗಿ ಭಾರೀ ಹೋರಾಟಕ್ಕೆ ಸಜ್ಜಾಗಿದೆ.
ಇಂದ್ರಾಳಿಯಲ್ಲಿ ಕಾಮಗಾರಿ ನಡೆದಿರುವ ಸ್ಥಳದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಎಪ್ರಿಲ್ ಫೂಲ್ ದಿನವಾದ ಎ.1ರಂದು ನಡೆಸಲಿರುವ ಹೋರಾಟದ ರೂಪುರೇಷೆಗಳನ್ನು ಸಮಿತಿಯ ಪರವಾಗಿ ಅವರು ತೆರೆದಿಟ್ಟರು. ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ಜನರ ಹೋರಾಟ, ಪ್ರತಿಭಟನೆಗೆ ಒಂದು ತಾರ್ಕಿಕ ಅಂತ್ಯ ನೀಡಲು ನಿರ್ಧರಿಸಿದ್ದು, ಮಾಡು-ಮಡಿ ರೀತಿಯ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಅಮೃತ ಶೆಣೈ ತಿಳಿಸಿದರು.
ಎ.1ರಂದು ಅಪರಾಹ್ನ 2:30ರಿಂದ ಕಾಮಗಾರಿ ನಡೆಯುವ ಸ್ಥಳದಲ್ಲಿ ನಮ್ಮ ಬೃಹತ್ ಪ್ರತಿಭಟನೆ ನಡೆಯಲಿದೆ. ಇದಕ್ಕೆ ಮುನ್ನ ಕಲ್ಸಂಕದಿಂದ ಇಂದ್ರಾಳಿಯವರೆಗೆ 5ರಿಂದ 6 ಸಾವಿರ ಮಂದಿ ಭಾಗವಹಿ ಸುವ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಇದರೊಂದಿಗೆ ಇಂದ್ರಾಳಿಯಲ್ಲಿ ಜಿಲ್ಲೆಯ ಸಂಸದರು, ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಜಿಲ್ಲೆಯ ಜನರನ್ನು ನಿರಂತರವಾಗಿ ಮೂರ್ಖರನ್ನಾಗಿಸು ತ್ತಿರುವುದನ್ನು ಜನತೆಗೆ ವಿವರಿಸಲು ಎಪ್ರಿಲ್ ಫೂಲ್ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಗುವುದು ಎಂದರು.
ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರಂತೆ ಕೋಟ ಶ್ರೀನಿವಾಸ ಪೂಜಾರಿ ಅವರು ಸಂಸದರಾಗಿ ಆಯ್ಕೆಯಾದ ಬಳಿಕ ಸಮಸ್ಯೆಯನ್ನು ಬಗೆಹರಿಸುವ ಬದಲು ಒಂದರ ನಂತರ ಒಂದರಂತೆ ದಿನಾಂಕವನ್ನು ನೀಡುತ್ತಾ ಹೋಗುತಿದ್ದಾರೆ. ಡಿಸೆಂಬರ್ ಕೊನೆ, ಜನವರಿ ಕೊನೆ, ಮಾರ್ಚ್ ಕೊನೆಯ ಗಡುವನ್ನು ಅವರು ನೀಡುತ್ತಾ ಹೋಗುತಿದ್ದಾರೆ. ಜನ ಮೂರ್ಖರಾಗುವುದು ಬಿಟ್ಟು, ಕಾಮಗಾರಿ ಮುಗಿಯುವ ಯಾವ ಸೂಚನೆಗಳೂ ಇಲ್ಲಿ ಸಿಗುವುದಿಲ್ಲ. ಹೀಗಾಗಿ ಬೃಹತ್ ಪ್ರತಿಭಟನೆಗೆ ನಿರ್ಧರಿಸಿದ್ದೇವೆ ಎಂದರು.
ಜಿಲ್ಲೆಯ ಸಾರ್ವಜನಿಕರೂ, ಕಾಮಗಾರಿ ವಿಳಂಬದಿಂದ ನಿತ್ಯ ಸಮಸ್ಯೆ ಎದುರಿಸುತ್ತಿರುವವರು ಈ ಪ್ರತಿಭಟನೆಯಲ್ಲಿ ಕೈಜೋಡಿಸುವಂತೆ ಅಮೃತ ಶೆಣೈ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ಅಧ್ಯಕ್ಷ ಕೀರ್ತಿ ಶೆಟ್ಟಿ ಅಂಬಲಪಾಡಿ, ವಿವಿಧ ಪದಾಧಿಕಾರಿಗಳಾದ ಹರಿಪ್ರಸಾದ್ ರೈ, ಅನ್ಸಾರ್ ಅಹಮ್ಮದ್, ಕುಶಲ ಶೆಟ್ಟಿ, ಮಹಾಬಲ ಕುಂದರ್, ಚಾರ್ಲ್ಸ್ ಅಂಬ್ಲರ್, ಅಬ್ದುಲ್ ಅಝೀಝ್, ಮೀನಾಕ್ಷಿ ಮಾಧವ ಬನ್ನಂಜೆ, ಸುರೇಶ್ ಶೆಟ್ಟಿ ಬನ್ನಂಜೆ, ರಫೀಕ್ ಕರಂಬಳ್ಳಿ, ಯಾದವ್ ಅಮೀನ್ ಮುಂತಾದವರು ಉಪಸ್ಥಿತರಿದ್ದರು.