15 ದಿನದಲ್ಲಿ ಸರ್ವಿಸ್ ರಸ್ತೆ ಕೆಲಸ ಪ್ರಾರಂಭಗೊಳ್ಳದಿದ್ದರೆ ಉಗ್ರ ಪ್ರತಿಭಟನೆ: ಬ್ರಹ್ಮಾವರ ಫ್ಲೈಓವರ್ ಹೋರಾಟ ಸಮಿತಿ ಎಚ್ಚರಿಕೆ

Update: 2025-04-29 21:28 IST
15 ದಿನದಲ್ಲಿ ಸರ್ವಿಸ್ ರಸ್ತೆ ಕೆಲಸ ಪ್ರಾರಂಭಗೊಳ್ಳದಿದ್ದರೆ ಉಗ್ರ ಪ್ರತಿಭಟನೆ: ಬ್ರಹ್ಮಾವರ ಫ್ಲೈಓವರ್ ಹೋರಾಟ ಸಮಿತಿ ಎಚ್ಚರಿಕೆ
  • whatsapp icon

ಬ್ರಹ್ಮಾವರ, ಎ.29: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಪ್ರಮುಖ ‘ಬ್ಲ್ಯಾಕ್‌ಸ್ಪಾಟ್’ ಎನಿಸಿರುವ ಬ್ರಹ್ಮಾವರದ ಮೇಹಶ್ ಆಸ್ಪತ್ರೆ ಎದುರಿನಿಂದ ದೂಪದಕಟ್ಟೆಯವರೆಗೆ ತುರ್ತು ಸರ್ವಿಸ್ ರಸ್ತೆ ನಿರ್ಮಾಣ ಕಾಮಗಾರಿ ಮುಂದಿನ 15 ದಿನದೊಳಗೆ ಪ್ರಾರಂಭಗೊಳ್ಳದಿದ್ದರೆ ಬ್ರಹ್ಮಾವರ ಬಂದ್ ಸೇರಿದಂತೆ, ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಬ್ರಹ್ಮಾವರ ಫ್ಲೈಓವರ್ ಹೋರಾಟ ಸಮಿತಿ ಜಿಲ್ಲಾಡಳಿತ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೇರಿದಂತೆ ಸಂಬಂಧಿತ ಎಲ್ಲರಿಗೂ ಎಚ್ಚರಿಕೆ ನೀಡಿದೆ.

ಬ್ರಹ್ಮಾವರ ಪರಿಸರದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸುತ್ತಿರುವ ಮಾರಕ ಅಫಘಾತ ಹಾಗೂ ಜೀವಹಾನಿಗಳ ವಿರುದ್ಧ ಸಿಡಿದೆದ್ದಿರುವ ಬ್ರಹ್ಮಾವರ ಆಸುಪಾಸಿನ ಜನತೆ ಇಂದು ಸಮಿತಿಯ ನೇತೃತ್ವದಲ್ಲಿ 50ಕ್ಕೂ ಅಧಿಕ ಸಂಘಸಂಸ್ಥೆಗಳು, ಸಮಾನ ಮನಸ್ಕ ಸಂಘಟನೆಗಳ ಹಾಗೂ ಜವಾಬ್ದಾರಿ ಯುತ ನಾಗರಿ ಕರೊಂದಿಗೆ ಎಸ್‌ಎಂಎಸ್ ಕಾಂಪ್ಲೆಕ್ಸ್ ಎದುರು ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಈ ಎಚ್ಚರಿಕೆಯನ್ನು ನೀಡಲಾಗಿದೆ.

ಸದ್ಯ ತುರ್ತಾಗಿ ಸಿಟಿ ಸೆಂಟರ್‌ನಿಂದ ಸಕ್ಕರೆ ಕಾರ್ಖಾನೆ ಸಮೀಪದ ದೂಪದಕಟ್ಟೆಯವರೆಗೆ ರಸ್ತೆಯ ಎರಡೂ ಪಕ್ಕದಲ್ಲಿ ಸರ್ವಿಸ್ ರಸ್ತೆಯನ್ನು ನಿರ್ಮಿಸಲು ಕೆಲಸ ತಕ್ಷಣ ಪ್ರಾರಂಭಗೊಳ್ಳಬೇಕು. ಇದಕ್ಕೆ 15 ದಿನಗಳ ಕಾಲಾವಕಾಶ ನೀಡಲಾಗುತ್ತದೆ. ತಪ್ಪಿದರೆ ತೀವ್ರ ರೀತಿಯ ಪ್ರತಿಭಟನೆಯನ್ನು ಬ್ರಹ್ಮಾವರದ ಸಮಸ್ತ ಜನತೆಯ ಸಹಕಾರದೊಂದಿಗೆ ಹಮ್ಮಿಕೊಳ್ಳಲಾಗುವುದು ಎಂದು ಪ್ರತಿಭಟನಾ ಸಭೆಯಲ್ಲಿ ಮಾತನಾಡಿದವರು ಎಚ್ಚರಿಸಿದರು.

ಇದರೊಂದಿಗೆ ಬ್ರಹ್ಮಾವರದಲ್ಲಿ ಫ್ಲೈಓವರ್ ನಿರ್ಮಾಣ, ದೂಪದಕಟ್ಟೆ ಯಿಂದ ಉಪ್ಪಿನಕೋಟೆವರೆಗೆ ಸರ್ವಿಸ್ ರಸ್ತೆಯ ವಿಸ್ತರಣೆ ಮಾಡುವುದು ತಮ್ಮ ಇತರ ಬೇಡಿಕೆಗಳಾಗಿವೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಭರವಸೆ ನೀಡಿದರೂ ಪ್ರತಿಭಟನೆಯನ್ನು ಹಿಂದೆಗೆದುಕೊಳ್ಳುವುದಿಲ್ಲ. ನಮಗೆ ಕೇವಲ ಭರವಸೆಗಳಲ್ಲ, ಬೇಡಿಕೆಯಂತೆ ಕೆಲಸವಾಗಬೇಕು ಎಂದು ಸಮಿತಿಯ ಪ್ರಮುಖ ಸದಸ್ಯ ಆಲ್ವಿನ್ ಅಂದ್ರಾದೆ ಹೇಳಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಂ. ಡೇವಿಡ್ ಕ್ರಾಸ್ತಾ, ಇತ್ತೀಚಿನ ಜೀವಹಾನಿಯ ಬಳಿಕವೂ ರಸ್ತೆ ನಿರ್ಮಾಣ ಪ್ರಾರಂಭಗೊಳ್ಳದಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ನಮ್ಮನ್ನು ಸಮಾಧಾನಪ ಡಿಸಲು ಕೆಲವು ಸಾಂಕೇತಿಕ ಪ್ರಯತ್ನಗಳನ್ನು ಮಾಡಲಾಯಿತು. ಪ್ರತಿದಿನ 6,000 ಕ್ಕೂ ಹೆಚ್ಚು ವಿದ್ಯಾರ್ಥಿ ಗಳು ಈ ಮಾರ್ಗವನ್ನು ದಾಟುತ್ತಾರೆ. ಅವರು ನಮ್ಮ ದೇಶದ ಭವಿಷ್ಯ. ಆದರೆ ನಾವು ಅವರ ಸುರಕ್ಷತೆ ಯನ್ನು ಖಚಿತಪಡಿಸಿಕೊಳ್ಳುವಲ್ಲಿ ವಿಫಲರಾಗಿದ್ದೇವೆ ಎಂದರು.

ವಾರಂಬಳ್ಳಿ ಗ್ರಾಪಂನ ಮಾಜಿ ಅಧ್ಯಕ್ಷ ಹಾಗೂ ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಸೊಸೈಟಿ ಅಧ್ಯಕ್ಷ ಬಿರ್ತಿ ರಾಜೇಶ್ ಶೆಟ್ಟಿ ಮಾತನಾಡಿ, ಒಂದು ತಿಂಗಳ ಹಿಂದೆ ಇದೇ ರಸ್ತೆಯಲ್ಲಿ ಒಬ್ಬ ಪುಟ್ಟ ಬಾಲಕನ ಜೀವ ಬಲಿಯಾಯಿತು. ಆತನ ಹೆತ್ತವರು ಇನ್ನೂ ದುಃಖದಲ್ಲಿದ್ದಾರೆ. ಆದರೆ ಅಧಿಕಾರಿಗಳಿಗೆ ಆ ನೋವು ಅರ್ಥವಾಗುತ್ತಿಲ್ಲ. ಒಂದು ತಿಂಗಳೊಳಗೆ ಸರ್ವಿಸ್ ರಸ್ತೆ ನಿರ್ಮಿಸುವುದಾಗಿ ಭರವಸೆ ನೀಡಿದ್ದರು. ಆದರೆ ತಿಂಗಳ ನಂತರವೂ ಅವರು ಸ್ಥಳ ಪರಿಶೀಲನೆ ಮಾಡುತಿದ್ದಾರೆ ಎಂದರು.

15 ದಿನಗಳಲ್ಲಿ ಅಧಿಕಾರಿಗಳು ಸರ್ವಿಸ್ ರಸ್ತೆಯನ್ನು ನಿರ್ಮಿಸಲು ವಿಫಲವಾದರೆ, ಮುಖ್ಯ ಹೆದ್ದಾರಿಯ ಒಂದು ಭಾಗವನ್ನು ನಾವೇ ಸರ್ವಿಸ್ ರಸ್ತೆಯನ್ನಾಗಿ ಪರಿವರ್ತಿಸುವುದನ್ನು ಬಿಟ್ಟು ನಮಗೆ ಬೇರೆ ದಾರಿ ಯಿಲ್ಲ. ಅವರು ಕ್ರಮ ಕೈಗೊಳ್ಳದಿದ್ದರೆ, ನಾವು ವಿಷಯಗಳನ್ನು ನಮ್ಮ ಕೈಗೆ ತೆಗೆದುಕೊಳ್ಳುತ್ತೇವೆ ಎಂದು ಸಾಸ್ತಾನದ ರಾಷ್ಟ್ರೀಯ ಹೆದ್ದಾರಿ ಆಂದೋಲನ ಸಮಿತಿಯ ಅಧ್ಯಕ್ಷ ಶ್ಯಾಮ್‌ಸುಂದರ್ ನಾಯರಿ ಎಚ್ಚರಿಸಿದರು.

ದಸಂಸ ಮುಖಂಡ ಶ್ಯಾಮರಾಜ್ ಬರ್ತಿ ಕೂಡ ತಮ್ಮ ವೈಯಕ್ತಿಕ ದುರಂತ ಹಂಚಿಕೊಂಡು ಪ್ರತಿ ಪೊಲೀಸ್ ಸಭೆಯಲ್ಲಿ ಅಧಿಕಾರಿಗಳ ಗಮನ ಸೆಳೆದಿದ್ದೇನೆ. ಆದರೆ ಜನರಿಗೆ ಸ್ವಂತ ಕುಟುಂಬದಲ್ಲಿ ದುರಂತ ಸಂಭವಿಸಿದಾಗ ಮಾತ್ರ ನೋವು ಅರ್ಥವಾಗುತ್ತದೆ ಎಂದರು.

ಸಮಿತಿಯ ಪ್ರಮುಖ ಸದಸ್ಯ ವಸಂತ್ ಗಿಳಿಯಾರ್, ಅಧಿಕಾರಿಗಳು ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ, ನಾವು ಹೆಚ್ಚು ತೀವ್ರವಾದ ಪ್ರತಿಭಟನೆಗಳನ್ನು ಪ್ರಾರಂಭಿಸುತ್ತೇವೆ. ಇಲ್ಲಿ ಸರ್ವಿಸ್ ರಸ್ತೆ ನಿರ್ಮಿಸದಿದ್ದರೆ, ನಾವು ನಿಮ್ಮ ಮನೆ ಬಾಗಿಲಿಗೆ ಬರುತ್ತೇವೆ ಎಂದು ಎಚ್ಚರಿಸಿದರು.

ಮುಖಂಡರಾದ ಬಿ.ಭುಜಂಗ ಶೆಟ್ಟಿ, ಜ್ಞಾನ ವಸಂತ ಮುಂತಾದವರು ಸಭೆಯನ್ನುದ್ದೇಶಿಸಿ ಮಾತನಾಡಿ ದರು. ಆಲ್ವಿನ್ ಅಂದ್ರಾದೆ ಕಾರ್ಯಕ್ರಮ ನಿರೂಪಿಸಿದರೆ, ಉದಯಕುಮಾರ್ ವಂದಿಸಿದರು.





Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News