ನ.16ಕ್ಕೆ ಎಂ.ಗೋವಿಂದ ಪೈ ಸಂಶೋಧನಾ ಸಂಪುಟ-1 ಬಿಡುಗಡೆ
ಉಡುಪಿ, ನ.13: ಕರ್ನಾಟಕದ ಮೊತ್ತಮೊದಲ ರಾಷ್ಟ್ರಕವಿ ಎನಿಸಿದ ಮಂಜೇಶ್ವರ ಗೋವಿಂದಪೈ ಈ ನಾಡು ಕಂಡ ಅತ್ಯಂತಶ್ರೇಷ್ಠ ಸಂಶೋಧನಕರು. ಕಾವ್ಯ, ನಾಟಕ ರಚನೆ, ವಿಮರ್ಶೆ ಹೀಗೆ ಸಾಹಿತ್ಯದ ಹತ್ತು ಹಲವು ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಪೈ ಅವರು ಬರೆದ ಸಾವಿರಕ್ಕೂ ಅಧಿಕ ಸಂಶೋಧನಾ ಲೇಖನಗಳನ್ನು ಸಂಗ್ರಹಿಸಿ 1995ರಲ್ಲಿ ಪ್ರಕಟಿಸಿದ ಸಂಶೋಧನಾ ಸಂಪುಟದ ದ್ವಿತೀಯ ಆವೃತ್ತಿಯ ಮೊದಲ ಸಂಪುಟ ಇದೇ ನ.16ರ ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ಉಡುಪಿ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 1995ರಲ್ಲಿ 1400 ಪುಟಗಳ ಸಮಗ್ರ ಗೋವಿಂದ ಪೈ ಸಂಶೋಧನ ಸಂಪುಟವನ್ನು ಕೇಂದ್ರ ಪ್ರಕಟಿಸಿದ್ದು, ಪ್ರೊ.ಹೆರಂಜೆ ಕೃಷ್ಣ ಭಟ್ ಹಾಗೂ ಪ್ರೊ.ಮುರಳೀಧರ ಉಪಾಧ್ಯ ಇದರ ಸಂಪಾದಕರಾಗಿದ್ದರು. ಎಲ್ಲಾ ಕಾಲದ ಸಂಶೋಧಕರಿಗೂ ದಾರಿದೀಪದಂತಿರುವ ಈ ಕೃತಿಯಲ್ಲಿ ಹಳಗನ್ನಡ, ನಡುಗನ್ನಡ, ಹೊಸಗನ್ನಡ, ಮಾತ್ರವಲ್ಲದೇ ತುಳುನಾಡು, ಕರ್ನಾಟಕ ಹಾಗೂ ದೇಶದ ಚರಿತ್ರೆ, ಇತಿಹಾಸದ ಮೇಲೆ ಬೆಳಕು ಚೆಲ್ಲುವ ಹಲವು ಲೇಖನಗಳಿದ್ದವು ಎಂದು ಅವರು ವಿವರಿಸಿದರು.
ಬಹುಬೇಡಿಕೆಯ ಈ ಕೃತಿಯನ್ನು ಇದೀಗ ಮರುಮುದ್ರಣ ಮಾಡುತಿದ್ದು, ಇದನ್ನು ಎರಡು ಸಂಪುಟಗಳಾಗಿ ವಿಭಾಗಿಸಿ, ನಂತರ ದೊರೆತ ಪೈಗಳ ಹಲವು ಅಮೂಲ್ಯ ಲೇಖನಗಳನ್ನು ಇದರಲ್ಲಿ ಸೇರ್ಪಡೆ ಮಾಡಲಾಗುತ್ತಿದೆ. ರಾಜ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆರ್ಥಿಕ ಸಹಾಯದಿಂದ ಇದರ ಮರು ಮುದ್ರಣ ನಡೆಯುತ್ತಿದೆ ಎಂದರು.
ಎರಡು ಸಂಪುಟಗಳಲ್ಲಿ ಪ್ರಕಟಗೊಳ್ಳುವ ಇದಕ್ಕೆ ಪ್ರೊ.ಬಿ.ಎ.ವಿವೇಕ ರೈ ಗೌರವ ಸಂಪಾದಕರಾಗಿದ್ದು, ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ ಹಾಗೂ ಡಾ.ಪಾದೇಕಲ್ಲು ವಿಷ್ಣು ಭಟ್ಟ ಸಂಪಾದಕರಾಗಿದ್ದಾರೆ ಎಂದು ಡಾ.ಜಗದೀಶ್ ಶೆಟ್ಟಿ ತಿಳಿಸಿದರು.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ) ಹಾಗೂ ಕನ್ನಡ ಮತ್ತು ಸಂಸ್ಕತಿ ಇಲಾಖೆಗಳ ಆಶ್ರಯದಲ್ಲಿ ನಡೆಯಲಿರುವ ಕೃತಿ ಅನಾವರಣ ಸಮಾರಂಭ ನ.16ರ ಶನಿವಾರ ಎಂ.ಜಿ.ಎಂ ಕಾಲೇಜಿನ ಆವರಣದಲ್ಲಿರುವ ನೂತನ ರವೀಂದ್ರ ಮಂಟಪದಲ್ಲಿ ಪ್ರೊ.ಬಿ.ಎ.ವಿವೇಕ ರೈ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಕೃತಿ ಅನಾವರಣ ಗೊಳಿಸುವರು. ಎಂ. ಗೋವಿಂದ ಪೈ ಸಂಶೋಧನ ಸಂಪುಟದ ಕುರಿತು ಮೈಸೂರು ವಿವಿಯ ಕನ್ನಡ ವಿಭಾಗದ ವಿಶ್ರಾಂತ ಪ್ರಾಧ್ಯಾಪಕ ಡಾ. ಎನ್. ಎಸ್. ತಾರಾನಾಥ್ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕತಿ ಇಲಾಖೆಯ ನಿರ್ದೇಶಕರಾದ ಡಾ. ಧರಣೀದೇವಿ ಮಾಲಗತ್ತಿ, ಎಂ.ಜಿ.ಎಂ ಕಾಲೇಜಿನ ಪ್ರಾಚಾರ್ಯ ಪ್ರೊ. ಲಕ್ಷ್ಮೀನಾರಾಯಣ ಕಾರಂತ ಪಾಲ್ಗೊಳ್ಳುವರು.
ಪತ್ರಿಕಾಗೋಷ್ಠಿಯಲ್ಲಿ ಕೃತಿ ಸಂಪಾದಕರಾದ ಪ್ರೊ.ಮುರಳೀಧರ ಉಪಾಧ್ಯ ಹಾಗೂ ಡಾ.ಪಾದೇಕಲ್ಲು ವಿಷ್ಣು ಭಟ್ಟ ಅಲ್ಲದೇ ಆರ್‌ಆರ್‌ಸಿಯ ಸಹ ಸಂಶೋಧಕ ಡಾ. ಅರುಣಕುಮಾರ ಎಸ್. ಆರ್. ಉಪಸ್ಥಿತರಿದ್ದರು.