ಮಾ.20ರಿಂದ 25: ಕಾರ್ಕಳದಲ್ಲಿ ಮಾಗಿ- ಸುಗ್ಗಿ ನಾಟಕ ಹಬ್ಬ
ಉಡುಪಿ, ಮಾ.18: ವಿಶ್ವ ರಂಗಭೂು ದಿನಾಚರಣೆ ಪ್ರಯುಕ್ತ ಕಾರ್ಕಳದ ಯಕ್ಷರಂಗಾಯಣ, ರಂಗ ಸಂಸ್ಕೃತಿ ಕಾರ್ಕಳ ಇವರ ಸಹಯೋಗದಲ್ಲಿ ಮಾರ್ಚ್ 20ರಿಂದ 25ರವರೆಗೆ ಪ್ರತಿ ದಿನ ಸಂಜೆ 6:30ಕ್ಕೆ ಕಾರ್ಕಳದ ಮಂಜುನಾಥ ಪೈ ಬಯಲು ರಂಗಮಂದಿರದಲ್ಲಿ 11ನೇ ವರ್ಷದ ಬಿ.ಗಣಪತಿ ಪೈ ರಂಗೋತ್ಸವ ‘ಮಾಗಿ - ಸುಗ್ಗಿ’ ನಾಟಕ ಹಬ್ಬ ಆಯೋಜಿಸಿದೆ.
ನಾಟಕೋತ್ಸವವನ್ನು ಮಾರ್ಚ್ 20ರಂದು ಸಂಜೆ 6:30ಕ್ಕೆ ಕಾರ್ಕಳದ ನಿವೃತ್ತ ಲೆಕ್ಕ ಪರಿಶೋಧಕ ಕೆ.ಕಮಲಾಕ್ಷ ಕಾಮತ್ ಉದ್ಘಾಟಿಸಲಿದ್ದು, ಕಾರ್ಕಳ ಯಕ್ಷ ರಂಗಾಯಣ ನಿರ್ದೇಶಕ ಬಿ.ಆರ್. ವೆಂಕಟರಮಣ ಐತಾಳ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕಾರ್ಕಳ ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ರಂಗ ಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ, ರಂಗಸಂಸ್ಕೃತಿ ಕಾರ್ಯದರ್ಶಿ ರಾಜೇಶ್ ರೆಂಜಾಳ ಮತ್ತಿತರರು ಉಪಸ್ಥಿತರಿರುವರು.
ಪ್ರದರ್ಶನಗೊಳ್ಳುವ ನಾಟಕಗಳು: ಮಾರ್ಚ್ 20ರಂದು ಧಾರವಾಡ ರಂಗಾಯಣ ಪ್ರಸ್ತುತಪಡಿಸುವ ಸತ್ತವರ ನೆರಳು, ಮಾ.21ರಂದು ಸ್ಪಿನ್ನಿಂಗ್ ಟ್ರೀ ಥಿಯೇಟರ್ ಕಂಪನಿ ಪ್ರಸ್ತುತಪಡಿಸುವ ‘ಅನಾಮಿಕನ ಸಾವು’, ಮಾ. 22ರಂದು ಭೂಮಿಕಾ ಹಾರಾಡಿ ಪ್ರಸ್ತುತಪಡಿಸುವ ‘ಬರ್ಬರೀಕ’, ಮಾ. 23ರಂದು ಕುವೆಂಪು ವಿರಚಿತ ‘ರಾಮಾಯಣ ದರ್ಶನಂ’ ಆಧಾರಿತ ರಂಗ ಪ್ರಯೋಗ ಭಳಿರೇ ಚಿತ್ರಮ್ ತಂಡ ಪ್ರಸ್ತುತಪಡಿಸುವ ‘ದಶಾನನ ಸ್ವಪ್ನಸಿದ್ದಿ’, ಮಾ.24ರಂದು ಭೂಮಿಗೀತ ಸಾಂಸ್ಕೃತಿಕ ವೇದಿಕೆ ಪಟ್ಲ ಪ್ರಸ್ತುತಪಡಿಸುವ ‘ದಿ ಫೈಯರ್’ ಹಾಗೂ ಮಾ.25ರಂದು ಭೂಮಿಕಾ ಹಾರಾಡಿ ಪ್ರಸ್ತುತ ಪಡಿಸುವ ‘ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ’ ನಾಟಕಗಳು ಪ್ರದರ್ಶನಗೊಳ್ಳಲಿವೆ.
ಮಾ.25ರಂದು ನಾಟಕೋತ್ಸವದ ಸಮಾರೋಪ ಸಮಾರಂಭ ನಡೆಯ ಲಿದ್ದು, ಅಧ್ಯಕ್ಷತೆಯನ್ನು ರಂಗಸಂಸ್ಕೃತಿ ಅಧ್ಯಕ್ಷ ನಿತ್ಯಾನಂದ ಪೈ ವಹಿಸಲಿದ್ದಾರೆ. ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ ಸಮಾರೋಪ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಕಳ ತಾಲೂಕು ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ ಶೆಟ್ಟಿ ಭಾಗವಹಿಸಲಿದ್ದಾರೆ ಎಂದು ಯಕ್ಷ ರಂಗಾಯಣದ ವಿಶೇಷ ಕರ್ತವ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.