ಮಾ.23: ಯಕ್ಷ ಸ್ತ್ರೀಪಾತ್ರಧಾರಿ ಸಂತೋಷ್ ಹಿಲಿಯಾಣಗೆ ಮಂದಾರ್ತಿಯಲ್ಲಿ ಸಾರ್ವಜನಿಕ ಅಭಿನಂದನೆ

Update: 2025-03-19 21:38 IST
ಮಾ.23: ಯಕ್ಷ ಸ್ತ್ರೀಪಾತ್ರಧಾರಿ ಸಂತೋಷ್ ಹಿಲಿಯಾಣಗೆ ಮಂದಾರ್ತಿಯಲ್ಲಿ ಸಾರ್ವಜನಿಕ ಅಭಿನಂದನೆ
  • whatsapp icon

ಉಡುಪಿ: ಯಕ್ಷಗಾನ ರಂಗದಲ್ಲಿ 25 ವರ್ಷಗಳ ಕಲಾ ಸೇವೆಯನ್ನು ಪೂರ್ಣಗೊಳಿಸಿರುವ ಹನುಮಗಿರಿ ಮೇಳದ ಪ್ರದಾನ ಸ್ತ್ರೀವೇಷಧಾರಿ ಸಂತೋಷ್ ಹಿಲಿಯಾಣ ಇವರಿಗೆ ಅವರ ಅಭಿಮಾನಿ ಬಳಗ ಇದೇ ಮಾ.23ರ ರವಿವಾರ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಸಹ ಕಲಾವಿದ ಪ್ರಸಾದ್ ಸವಣೂರು ತಿಳಿಸಿದ್ದಾರೆ.

ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಹಿಲಿಯಾಣ ಬೆಳ್ಳಿಯಾನ’ ಶೀರ್ಷಿಕೆಯಲ್ಲಿ ಈ ಸಾರ್ವಜನಿಕ ಅಭಿನಂದನಾ ಸಮಾರಂಭ 23ರಂದು ಅಪರಾಹ್ನ 2.30ರಿಂದ ಮಂದಾರ್ತಿ ಶೇಡಿಕೊಡ್ಲು ಶ್ರೀದುರ್ಗಾ ಸನ್ನಿಧಿ ಸಭಾಭವನದಲ್ಲಿ ನಡೆಯಲಿದೆ ಎಂದರು.

ಸಂಜೆ 5 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಎಡನೀರು ಮಠಾಧೀಶರಾದ ಶ್ರೀಸಚ್ಚಿದಾನಂದ ಭಾರತಿ ಸ್ವಾಮೀಜಿ ಅವರು ಆಶೀರ್ವಚನ ನೀಡಲಿದ್ದಾರೆ. ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಡಾ.ಟಿ. ಶ್ಯಾಮ್ ಭಟ್ ಅಧ್ಯಕ್ಷತೆಯಲ್ಲಿ ಉಡುಪಿ ಡಾ.ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ.ಜಿ. ಶಂಕರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಉದ್ಯಮಿ ಮಾರಣಕಟ್ಟೆಯ ಕೃಷ್ಣಮೂರ್ತಿ ಮಂಜ ಅವರು ಸಂತೋಷ್ ಹಿಲಿಯಾಣರನ್ನು ಸನ್ಮಾನಿಸಲಿದ್ದಾರೆ ಎಂದರು.

ಕುಂದಾಪುರ ಶಾಸಕ ಕಿರಣ್‌ಕುಮಾರ್ ಕೊಡ್ಗಿ, ಉದ್ಯಮಿಗಳಾದ ಆನಂದ್ ಸಿ. ಕುಂದರ್, ಮಂದಾರ್ತಿ ದೇವಸ್ಥಾನದ ಮೊಕ್ತೇಸರರಾದ ಎಚ್.ಧನಂಜಯ ಶೆಟ್ಟಿ, ಕಲಾಪೋಷಕ ಎಚ್.ವಿಠಲ ಶೆಟ್ಟಿ ಶೇಡಿಕೊಡ್ಲು ಹಾಗೂ ಇತರರು ಉಪಸ್ಥಿತರಿರುವರು ಎಂದರು.

ಅಪರಾಹ್ನ 2 ಗಂಟೆಯಿಂದ ಬಡಗಿನ ಪ್ರಸಿದ್ಧ ಕಲಾವಿದರಿಂದ ‘ರತ್ನಾವತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನ ವಿದೆ. ಕಾಯಕ್ರಮದ ಬಳಿಕ ರಾತ್ರಿ ೭:೪೫ರಿಂದ ತೆಂಕುತಿಟ್ಟು ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಮೇಳದಿಂದ ‘ಸಾಕೇತ ಸಾಮ್ರಾಜ್ಞಿ’ ಯಕ್ಷಗಾನ ಪ್ರದರ್ಶನ ನಡೆಯಲಿದೆ ಎಂದು ಪ್ರಸಾದ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮೋದ್ ತಂತ್ರಿ ಹಾಗೂ ರಾಘವೇಂದ್ರ ರಾಜ್ ಸಾಸ್ತಾನ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News