ಸೆ.29ಕ್ಕೆ ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್‌ ವತಿಯಿಂದ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಣೆ

Update: 2024-09-27 14:16 GMT

ಉಡುಪಿ, ಸೆ.27: ಉಡುಪಿ ಯಕ್ಷಗಾನ ಕಲಾರಂಗದ ಅಂಗಸಂಸ್ಥೆಯಾದ ವಿದ್ಯಾಪೋಷಕ್‌ನ 20ನೇ ವರ್ಷದ ವಿನಮ್ರ ಸಹಾಯಧನ ವಿತರಣಾ ಸಮಾರಂಭ ಸೆ.29ರ ರವಿವಾರ ಶ್ರೀಕೃಷ್ಣಮಠದ ರಾಜಾಂಗಣದಲ್ಲಿ ನಡೆಯಲಿದ್ದು, ಈ ಬಾರಿ ಜಿಲ್ಲೆಯ ಒಟ್ಟು 1182 ಬಡ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ 1.15 ಕೋಟಿ ರೂ.ಮೊತ್ತದ ವಿದ್ಯಾರ್ಥಿ ವೇತನವನ್ನು ವಿತರಿಸ ಲಾಗುವುದು ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಥಮ ವರ್ಷದ ಪಿಯುಸಿಯಿಂದ ಹಿಡಿದು ಪದವಿ, ಇಂಜಿನಿಯರಿಂಗ್, ಮೆಡಿಕಲ್ ಸೇರಿದಂತೆ 15 ಬೇರೆ ಬೇರೆ ಪದವಿ, ವೃತ್ತಿಪರ ಕೋರ್ಸ್‌ಗಳಲ್ಲಿ ಕಲಿಯುತ್ತಿರುವ 1110 ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ 1.09 ಕೋಟಿ ರೂ.ಗಳನ್ನು ವಿತರಿಸಿದರೆ, ಯಕ್ಷಗಾನ ಕ್ಷೇತ್ರದ ಕಲಾವಿದರ 72 ವಿದ್ಯಾರ್ಥಿ ಮಕ್ಕಳಿಗೆ 6.12 ಲಕ್ಷ ರೂ.ಗಳನ್ನು ವಿತರಿಸಲಾಗುವುದು.

ಈ ಮೂಲಕ ಒಟ್ಟು 1118 ವಿದ್ಯಾರ್ಥಿಗಳಿಗೆ ಈ ಬಾರಿ 1,15,50,000 ರೂ.ಗಳನ್ನು ಸೆ.29ರಂದು ರಾಜಾಂಗಣದಲ್ಲಿ ವಿತರಿಸಲಾಗುವುದು. ಇವುಗಳಲ್ಲಿ 331 ಮಂದಿ ವಿದ್ಯಾರ್ಥಿಗಳಾದೆ, 851 ಮಂದಿ ವಿದ್ಯಾರ್ಥಿನಿಯರಿದ್ದಾರೆ. ಗರಿಷ್ಠ ಮೊತ್ತದ ವಿದ್ಯಾರ್ಥಿವೇತನ 54.46ಲಕ್ಷ ರೂ. 228 ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸಂದಾಯವಾಗಲಿದೆ. ಇವರಿಗೆ ವಾರ್ಷಿಕ ಗರಿಷ್ಠ 75,000 ರೂ. ನೀಡಲಾಗುತ್ತಿದೆ ಎಂದರು.

ಮುರಲಿ ಕಡೆಕಾರ್ ಅವರು ಮಾತನಾಡಿ, ಕರಾವಳಿಯ ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಯಕ್ಷಗಾನ ಕಲಾರಂಗಕ್ಕೆ ಇದು ಸುವರ್ಣ ವರ್ಷದ ಹಾಗೂ ವಿದ್ಯಾಪೋಷಕ್‌ಗೆ ವಿಂಶತಿ ವರ್ಷದ ಸಂಭ್ರಮವಾಗಿದೆ. ಈ ಬಾರಿ 10 ಮಂದಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಿಸಲಾಗುತ್ತಿದೆ ಎಂದರು.

ಯಕ್ಷಗಾನ ಕಲಾರಂಗ ವಿವಿಧ ದಾನಿಗಳ ನೆರವಿನಿಂದ ವಿದ್ಯಾಪೋಷಕ್‌ನ ಮನೆ ಇಲ್ಲದ ಬಡ ವಿದ್ಯಾರ್ಥಿಗಳಿಗೆ ಸುಸಜಿಜತ ಮನೆಗಳನ್ನು ನಿರ್ಮಿಸಿಕೊಡು ತಿದ್ದು ಈವರೆಗೆ 54 ಮನೆಗಳನ್ನು ನಿರ್ಮಿಸಿ ಫಲಾನುಭವಿ ಕುಟುಂಬಕ್ಕೆ ಹಸ್ತಾಂತರಿಸಲಾ ಗಿದೆ. ಇನ್ನು ಐದು ಮನೆಗಳು ನಿರ್ಮಾಣ ಹಂತದಲ್ಲಿವೆ. ಅಲ್ಲದೇ ಇನ್ನೂ ಹತ್ತು ಮಂದಿಗೆ ಮನೆಗಳ ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದರು.

ಯಕ್ಷಗಾನ ಕಲಾರಂಗದ ವಿದ್ಯಾಪೋಷಕ್ ವಿನಮ್ರ ಸಹಾಯಧನ ವಿತರಣಾ ಸಮಾರಂಭ ಸೆ.29ರಂದು ಬೆಳಗ್ಗೆ 9 ರಿಂದ ಸಂಜೆ 4:30ರವರೆಗೆ ನಡೆಯಲಿದೆ. ಬೆಳಗ್ಗೆ 10:00 ಗಂಟೆಗೆ ಪರ್ಯಾಯ ಪುತ್ತಿಗೆ ಮಠಾಧೀಶ ರಾದ ಶ್ರೀಸುಗುಣೇಂದ್ರ ತೀರ್ಥರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಹೆಗ್ಗುಂಜೆ ರಾಜೀವ ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷ ಡಾ.ಎಚ್.ಎಸ್.ಶೆಟ್ಟಿ ವಹಿಸಲಿದ್ದಾರೆ.

ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ.ನಿ.ಬೀ.ವಿಜಯ ಬಲ್ಲಾಳರು ಶುಭಾಶಂಸನೆಗೈಯಲಿದ್ದಾರೆ. ಮುಖ್ಯ ಅತಿಥಿ ಗಳಾಗಿ ಮಣಿಪಾಲ ಮಾಹೆಯ ಕುಲಪತಿ ಲೆ. ಜ. (ಡಾ.) ಎಂ. ಡಿ. ವೆಂಕಟೇಶ್, ವೈದ್ಯರಾದ ಡಾ.ಜೆ. ಎನ್. ಭಟ್, ಲೇಖಕ-ಚಿಂತಕರಾದ ಡಾ.ಬಿ.ಭಾಸ್ಕರ ರಾವ್, ಉದ್ಯಮಿ ಕೃಷ್ಣಪ್ರಸಾದ್ ಅಡ್ಯಂತಾಯ, ಡಾ.ಜಿ.ಎಸ್.ಚಂದ್ರಶೇಖರ, ಮಾಜಿ ಶಾಸಕ ಕೆ.ರಘುಪತಿ ಭಟ್ ಹಾಗೂ ಇತರರು ಭಾಗವಹಿಸಲಿದ್ದಾರೆ.

ಅಪರಾಹ್ನ 2:30ಕ್ಕೆ ಸಹಾಯಧನ ವಿತರಣೆ ನಡೆಯಲಿದ್ದು, ಪರ್ಯಾಯ ಶ್ರೀಗಳಾದ ಶ್ರೀಸುಗುಣೇಂದ್ರತೀರ್ಥರು ಹಾಗೂ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಲಿದ್ದಾರೆ. ಉದ್ಯಮಿ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿ ದ್ದಾರೆ. ಧಾರವಾಡ ವಿದ್ಯಾಪೋಷಕ್‌ನ ಸ್ಥಾಪಕ ವಿಶ್ವಸ್ಥರಾದ ಪ್ರಮೋದ್ ಕುಲಕರ್ಣಿ ಉಪಸ್ಥಿತರಿರುವರು.

ಪತ್ರಿಕಾಗೋಷ್ಠಿಯಲ್ಲಿ ಯಕ್ಷಗಾನ ಕಲಾರಂಗದ ಉಪಾಧ್ಯಕ್ಷರಾದ ಪಿ.ಕಿಶನ್ ಹೆಗ್ಡೆ, ಎಸ್.ವಿ.ಭಟ್, ವಿ.ಜಿ.ಶೆಟ್ಟಿ, ಪ್ರೊ.ಸದಾಶಿವ ರಾವ್ ಹಾಗೂ ಪ್ರೊ. ನಾರಾಯಣ ಎಂ.ಹೆಗಡೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News