×
Ad

ಎ.30ರಂದು ಉಡುಪಿ ರಾಷ್ಟ್ರೋತ್ಥಾನ ವಿದ್ಯಾಸಂಸ್ಥೆಗಳ ಕಟ್ಟಡ ಲೋಕಾರ್ಪಣೆ

Update: 2025-04-28 21:50 IST

ಉಡುಪಿ: ಬ್ರಹ್ಮಾವರ ತಾಲೂಕು ಚೇರ್ಕಾಡಿ ಗ್ರಾಮದ ಕೇಶವ ನಗರದಲ್ಲಿ ನಿರ್ಮಾಣಗೊಳ್ಳುತ್ತಿ ರುವ ಉಡುಪಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ (ಸಿಬಿಎಸ್‌ಸಿ) ಹಾಗೂ ರಾಷ್ಟ್ರೋತ್ಥಾನ ಪದವಿಪೂರ್ವ ಕಾಲೇಜು ಕಟ್ಟಡಗಳ ಲೋಕಾರ್ಪಣೆ ಎ.30ರಂದು ನಡೆಯಲಿದೆ ಎಂದು ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿ ನಾ.ದಿನೇಶ್ ಹೆಗ್ಡೆ ತಿಳಿಸಿದ್ದಾರೆ.

ಕೇಶವನಗರದಲ್ಲಿ 20 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಶಾಲಾ ಕಟ್ಟಡದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಎ.30ರ ಬುಧವಾರ ಸಂಜೆ 4:30ಕ್ಕೆ ಲೋಕಾರ್ಪಣೆ ನಡೆಯಲಿದ್ದು, ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥರ ಉಪಸ್ಥಿತಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಕಾರ್ಯವಾಹರಾದ ದತ್ತಾತ್ರೇಯ ಹೊಸಬಾಳೆ ಹಾಗೂ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ನಿವೃತ್ತ ಅದ್ಯಕ್ಷ ಡಾ.ಎಸ್.ಸೋಮನಾಥ್ ಭಾಗವಹಿಸಲಿದ್ದಾರೆ ಎಂದರು.

ಇದಕ್ಕೂ ಮುನ್ನ ಎ.29ರಂದು ಸಂಜೆ ಪಡುಕುತ್ಯಾರು ಆನೆಗುಂದಿ ಮಹಾ ಸಂಸ್ಥಾನ ಸ್ವರಸ್ವತಿ ಪೀಠದ ಶ್ರೀಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿ ಹಾಗೂ ಅದಮಾರು ಮಠದ ಶ್ರೀವಿಶ್ವಪ್ರಿಯ ತೀರ್ಥರ ಉಪಸ್ಥಿತಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದೂ ನಾ.ದಿನೇಶ್ ಹೆಗ್ಡೆ ವಿವರಿಸಿದರು.

ಆಧುನಿಕ ಶಿಕ್ಷಣದೊಂದಿಗೆ, ಭಾರತೀಯ ಜ್ಞಾನಪರಂಪರೆಯ ಶಿಕ್ಷಣವನ್ನು ನೀಡುವ ಗುರಿಯೊಂದಿಗೆ ರಾಷ್ಟ್ರೋತ್ಥಾನ ಪರಿಷತ್ 1972ರಲ್ಲಿ ಹಗರಿಬೊಮ್ಮನ ಹಳ್ಳಿಯಲ್ಲಿ ಮೊದಲ ರಾಷ್ಟ್ರೋತ್ಥಾನ ಶಾಲೆಯನ್ನು ತೆರೆದಿದ್ದು, ಈಗ 9ಕ್ಕೂ ಅಧಿಕ ಶಾಲೆಗಳು ರಾಜ್ಯಾದ್ಯಂತ ಮಕ್ಕಳಿಗೆ ಜೀವನ ಕೌಶಲ್ಯ, ರಾಷ್ಟ್ರಭಕ್ತಿ ಯೊಂದಿಗೆ, ಮಣ್ಣಿನ ಸೊಗಡಿನ ಶಿಕ್ಷಣವನ್ನು ನೀಡುತ್ತಿದೆ ಎಂದರು.

2005-06ನೇ ಸಾಲಿನಿಂದ ಸಿಬಿಎಸ್‌ಸಿ ಶಾಲೆಗಳನ್ನು ತೆರೆಯಲಾಗುತಿದ್ದು, 17 ಇಂಥ ಶಾಲೆಗಳಲ್ಲಿ 18,000ಕ್ಕೂ ಅಧಿಕ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತಿದ್ದಾರೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸಿಬಿಎಸ್‌ಸಿ ರಾಷ್ಟ್ರೋತ್ಥಾನ ಶಾಲೆಗಳನ್ನು ತೆರೆಯುವ ಗುರಿ ಇದ್ದು, ಮಾರ್ಚ್ ತಿಂಗಳಲ್ಲಿ ಹಾಸನದಲ್ಲಿ ರಾಷ್ಟ್ರೋತ್ಥಾನ ಶಾಲೆಯನ್ನು ತೆರೆಯಲಾಗಿದೆ. ಅಲ್ಲೀಗ 700ಕ್ಕೂ ಅಧಿಕ ಮಕ್ಕಳು ಈಗಾಗಲೇ ನೊಂದಣಿ ಗೊಂಡಿದ್ದಾರೆ. ಇದೀಗ ಉಡುಪಿಯಲ್ಲಿ ಸ್ಥಾಪನೆಗೊಂಡಿದ್ದು, ಮೇ ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಇಲ್ಲಿ ಪ್ರಾರಂಭಗೊಳ್ಳಲಿದೆ ಎಂದರು.

ದಾವಣಗೆರೆ ಹಾಗೂ ಧಾರವಾಡಗಳಲ್ಲಿ ಪದವಿಪೂರ್ವ ಕಾಲೇಜುಗಳಿದ್ದು, ಉಡುಪಿಯಲ್ಲೂ ಇದೇ ಶೈಕ್ಷಣಿಕ ವರ್ಷದಿಂದ ಮೊದಲ ಪಿಯುಸಿ ತರಗತಿಗಳು ಪ್ರಾರಂಭಗೊಳ್ಳಲಿದೆ ಎಂದು ದಿನೇಶ್ ಹೆಗ್ಡೆ ತಿಳಿಸಿದರು.

ರಾಷ್ಟ್ರೋತ್ಥಾನದ ಚೇರ್ಕಾಡಿ ಕ್ಯಾಂಪಸ್‌ನಲ್ಲಿ ಸಿಬಿಎಸ್‌ಸಿ ಶಾಲೆ ಹಾಗೂ ಪದವಿ ಪೂರ್ವ ಕಾಲೇಜು ಗಳಿದ್ದು, ಮೇ ತಿಂಗಳಿನಿಂದ ಪ್ರಿ ಕೇಜಿಯಿಂದ ಎಂಟನೇ ತರಗತಿವರೆಗೆ ಹಾಗೂ ಪ್ರಥಮ ಪಿಯುಸಿ (ಸಾಯನ್ಸ್, ಕಾಮರ್ಸ್) ಕ್ಲಾಸ್‌ಗಳು ಪ್ರಾರಂಭಗೊಳ್ಳಲಿವೆ. 20 ಎಕರೆ ಪ್ರದೇಶದಲ್ಲಿ ವಿಶಾಲವಾದ ಕ್ರೀಡಾಂಗಣ, ಸುಸಜ್ಜಿತ ಹಾಸ್ಟೆಲ್‌ಗಳು ನಿರ್ಮಾಣಗೊಳ್ಳುತ್ತಿವೆ. ಸಿಬಿಎಸ್‌ಸಿ ಶಾಲೆಗೆ 600 ಮಂದಿ ಹಾಗೂ ಪಿಯುಸಿಗೆ 200 ಮಂದಿ ಈಗಾಗಲೇ ಹೆಸರು ನೊಂದಾಯಿಸಿದ್ದಾರೆ ಎಂದು ಅವರು ವಿವರಿಸಿದರು.

ಚೇರ್ಕಾಡಿಯಂಥ ಗ್ರಾಮೀಣ ಪ್ರದೇಶದ ಸುಂದರ ಪ್ರಾಕೃತಿಕ ಪರಿಸರದ ನಡುವೆ ತಲೆ ಎತ್ತಿರುವ ಇಲ್ಲಿ ಜಿಲ್ಲೆಯ ಎಲ್ಲಾ ಕಡೆಗಳಿಂದಲೂ ಶಾಲಾ ಬಸ್ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ವಿಶೇಷ ತರಬೇತಿ ನೀಡಲಾಗುತ್ತದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೋತ್ಥಾನ ಸಂಸ್ಥೆಯ ಸಾಧು ಸಾಲಿಯಾನ್, ಋಷಿರಾಜ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಭಾಗ್ಯಶ್ರೀ ಐತಾಳ್, ಶಾಲೆಯ ಪ್ರಾಂಶುಪಾಲೆ ಪೂರ್ಣಿಮಾ ಎಸ್.ಟಿ., ಆಡಳಿತಾಧಿಕಾರಿ ಸುರೇಶ್ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News