ಎ.30ರಿಂದ 17ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಉಡುಪಿ, ಎ.28: ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ 17ನೇ ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಎ.30 ಹಾಗೂ ಮೇ 1ರಂದು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ ಎಂದು ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ತಿಳಿಸಿದ್ದಾರೆ.
ಉಡುಪಿ ಪ್ರೆಸ್‌ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಹಿರಿಯ ವಿದ್ವಾಂಸ ಹಾಗೂ ನಿವೃತ್ತ ಪ್ರಾಚಾರ್ಯ ಡಾ.ಪಾದೇಕಲ್ಲು ವಿಷ್ಣು ಭಟ್ಟ ಅವರು ಸಮ್ಮೇಳನಾಧ್ಯಕ್ಷರಾಗಿ ಈಗಾಗಲೇ ಆಯ್ಕೆಯಾಗಿದ್ದಾರೆ. ಪರ್ಯಾಯ ಪುತ್ತಿಗೆ ಮಠದ ಆಶ್ರಯದಲ್ಲಿ ಎರಡು ದಿನಗಳ ಈ ಸಮ್ಮೇಳನ ನಡೆಯಲಿದೆ ಎಂದರು.
ಎ.30ರ ಬುಧವಾರ ಬೆಳಗ್ಗೆ 8:30ಕ್ಕೆ ಧ್ವಜಾರೋಹಣ ನೆರವೇರಲಿದೆ. 9ರಿಂದ ಮಣಿಪಾಲ ವಿಪಂಚಿ ಬಳಗದಿಂದ ವೀಣಾವಾದನ ನಡೆಯಲಿದ್ದು, 9:45ಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥ ಶ್ರೀಪಾದರು ದೀಪ ಬೆಳಗಿಸುವ ಮೂಲಕ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ರಾಜ್ಯ ಕಸಾಪ ಅಧ್ಯಕ್ಷ ಮಹೇಶ್ ಜೋಷಿ ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದು ಆಶಯ ನುಡಿಗಳನ್ನಾ ಡುವರು. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸಾಂಸ್ಕೃತಿಕ ಕಾರ್ಯಕ್ರಮ ಅನಾವರಣ ಗೊಳಿಸಿದರೆ, ಶಾಸಕ ಯಶಪಾಲ್ ಸುವರ್ಣ ಪುಸ್ತಕ ಮಳಿಗೆ ಉದ್ಘಾಟಿಸುವರು ಎಂದರು.
ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಅವರು ಸಮ್ಮೇಳನದಲ್ಲಿ ಮೂರು ಪುಸ್ತಕಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಉದ್ಯಮಿ ಡಾ.ಜಿ.ಶಂಕರ್, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮುಂತಾದವರು ಉಪಸ್ಥಿತರಿರುವರು.
ಬೆಳಗ್ಗೆ 11:30ಕ್ಕೆ ಭಾಷಾ ಸೌಹಾರ್ದತೆ ಕುರಿತಾಗಿ ಮೊದಲ ವಿಚಾರಗೋಷ್ಠಿ ನಡೆಯಲಿದ್ದು, ರಾಜ್ಯದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಸಾಹಿತಿ ಎಂ.ವೀರಪ್ಪ ಮೊಯ್ಲಿ, ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಮುಂತಾ ದವರು ವಿಚಾರ ಮಂಡನೆ ಮಾಡಲಿದ್ದಾರೆ. ಶಿಕ್ಷಣ ಕ್ಷೇತ್ರದಿಂದ ಕೊರಗ ಸಮಾಜದ ಡಾ.ಸವಿತಾ ಕೊರಗ ಹಾಗೂ ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಲಕ್ಷ್ಮೀನಾರಾಯಣ ಕಾರಂತರನ್ನು ಸನ್ಮಾನಿಸಲಾಗುವುದು ಎಂದು ನೀಲಾವರ ತಿಳಿಸಿದರು.
12:30ಕ್ಕೆ ಜಿಲ್ಲೆಯ ಶತಮಾನದ ಸಾಧಕರು ವಿಷಯದ ಕುರಿತು ಪ್ರೊ.ಎಸ್.ವಿ.ಕೃಷ್ಣಯ್ಯ ಉಪನ್ಯಾಸ ನೀಡಲಿದ್ದಾರೆ. ಅಪರಾಹ್ಮನ 2:30ಕ್ಕೆ ಕರಾವಳಿಯಲ್ಲಿ ಸಾಹಿತ್ಯ ಪರಿಷತ್ತು ಕುರಿತು ಅವಲೋಕನ ನಡೆಯಲಿದೆ. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಮೇ1ರ ಗುರುವಾರ 10ಗಂಟೆಗೆ ಕವಯಿತ್ರಿ ಜ್ಯೋತಿ ಗುರುಪ್ರಸಾದ್ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. 11:15ರಿಂದ ನಮ್ಮ ಉಡುಪಿ ವಿಷಯದಲ್ಲಿ ವಿಚಾರಗೋಷ್ಠಿ ನಡೆಯಲಿದೆ. ಅಪರಾಹ್ನ 1ಗಂಟೆಗೆ ಮಂಗಳೂರು ವಿವಿ ಉಪಕುಲಪತಿಗಳೊಂದಿಗೆ ವಿದ್ಯಾರ್ಥಿಗಳ ಮಾತುಕತೆ, 2:00ರಿಂದ ಸಮ್ಮೇಳನಾಧ್ಯಕ್ಷರೊಂದಿಗೆ ಮಾತುಕತೆ ನಡೆಯಲಿದೆ.
ಅಪರಾಹ್ನ 3:00ರಿಂದ ಬಹಿರಂಗ ಅಧಿವೇಶನ ನಡೆಯಲಿದ್ದು, ಸಂಜೆ 4:00ರಿಂದ ಸಮ್ಮೇಳನದ ಸಮಾರೋಪ ಪರ್ಯಾಯ ಪುತ್ತಿಗೆ ಮಠದ ಯತಿ ಧ್ವಯರ ಉಪಸ್ಥಿತಿಯಲ್ಲಿ ನಡೆಯಲಿದ್ದು, ಡಾ.ಗಣನಾಥ ಎಕ್ಕಾರು ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಜಿಲ್ಲೆಯ ಸಾಧಕರು ಹಾಗೂ ಸಂಘಸಂಸ್ಥೆಗಳನ್ನು ಸನ್ಮಾನಿಸಲಾಗುವುದು ಎಂದು ನೀಲಾವರ ಸುರೇಂದ್ರ ಅಡಿಗ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಸಾಪ ಉಡುಪಿ ಜಿಲ್ಲೆಯ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ನರೇಂದ್ರಕುಮಾರ್ ಕೋಟ, ಬ್ರಹ್ಮಾವರ ತಾಲೂಕು ಅಧ್ಯಕ್ಷ ರಾಮಚಂದ್ರ ಐತಾಳ್, ನರಸಿಂಹ ಮೂರ್ತಿ ಮಣಿಪಾಲ ಉಪಸ್ಥಿತರಿದ್ದರು.