ಆ.22 - 23ರಂದು ಎಂಜಿಎಂ ಕಾಲೇಜಿನಲ್ಲಿ ‘ಕೃತಕ ಬುದ್ಧಿಮತ್ತೆ’ ಬಗ್ಗೆ ಅಂ.ರಾ. ವಿಚಾರಸಂಕಿರಣ
ಉಡುಪಿ, ಆ.17: ಉಡುಪಿ ಎಂಜಿಎಂ ಕಾಲೇಜಿನ ಕಂಪ್ಯೂಟರ್ ವಿಜ್ಞಾನ ವಿಭಾಗವು, ಕಾಲೇಜಿನ ಐಕ್ಯೂಎಸಿಯ ಸಹಯೋಗದೊಂದಿಗೆ ಆ.22 ಹಾಗೂ 23ರಂದು ‘ಕೃತಕ ಬುದ್ಧಿಮತ್ತೆ: ಸಿದ್ಧಾಂತರಿಂದ ಪರಿಣಾಮದತ್ತ’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಹಮ್ಮಿಕೊಂಡಿದೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಲಕ್ಷ್ಮೀನಾರಾಯಣ ಕಾರಂತ ತಿಳಿಸಿದ್ದಾರೆ.
ಕಾಲೇಜಿನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನಗಳ ಈ ಸಮ್ಮೇಳನ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯಲಿದೆ. ಇಂದಿನ ಪ್ರಚಲಿತ ವಿಷಯಗಳಾದ ಎಐ ಹಾಗೂ ಎಂಎಲ್ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು ಹಾಗೂ ಅವುಗಳ ಉಪಯೋಗಗಳ ಕುರಿತು ಸಮ್ಮೇಳನ ಬೆಳಕು ಚೆಲ್ಲಲಿದೆ ಎಂದರು.
ಕಾಲೇಜಿನ ಕಂಪ್ಯೂಟರ್ ಸಾಯನ್ಸ್ ವಿಭಾಗದ ಮುಖ್ಯಸ್ಥ ಹಾಗೂ ಸಮ್ಮೇಳನದ ಸಂಚಾಲಕ ಡಾ.ವಿಶ್ವನಾಥ ಪೈ ಅವರು ಸಮ್ಮೇಳನದ ಕುರಿತು ಮಾತನಾಡಿ, ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಸಿಂಗಾಪುರ ಸೇರಿದಂತೆ ಸುಮಾರು ಎಂಟು ದೇಶಗಳ ಹಾಗೂ ತಮಿಳುನಾಡು, ಗೋವಾ, ಮಹಾರಾಷ್ಟ್ರ, ಅಸ್ಸಾಂ ಸೇರಿದಂತೆ 10 ರಾಜ್ಯಗಳ 150ಕ್ಕೂ ಅಧಿಕ ಪ್ರತಿನಿಧಿ ಗಳು ಈ ಸಮ್ಮೇಳನದಲ್ಲಿ ಹೈಬ್ರಿಡ್ ಮಾದರಿಯಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಮ್ಮೇಳನದಲ್ಲಿ 40ಕ್ಕೂ ಅಧಿಕ ಸಂಶೋಧನಾ ಪ್ರಬಂಧಗಳು ಮಂಡನೆ ಯಾಗಲಿವೆ. ನಾಡಿನ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳೂ ಇದರಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನವನ್ನು ಆ.22ರ ಬೆಳಗ್ಗೆ 9:30ಕ್ಕೆ ಮಾಹೆಯ ರಿಜಿಸ್ಟ್ರಾರ್ ಡಾ.ಪಿ.ಗಿರಿಧರ ಕಿಣಿ ಉದ್ಘಾಟಿಸಲಿದ್ದಾರೆ. ಕೃತಕ ಬುದ್ಧಿಮತ್ತೆಯ ವಿಶೇಷಜ್ಞರಾಗಿರುವ ಜಯರಾಮ ಬಿ.ಕೆ. ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಡಾ.ಪೈ ತಿಳಿಸಿದರು.
ವಿಶ್ವದ ಪ್ರಮುಖ ಕಂಪೆನಿಗಳಲ್ಲಿ ದುಡಿದಿರುವ ಎಐ, ಎಂಎಲ್, ಸೆಮಿ ಕಂಡಕ್ಟರ್ ವಿನ್ಯಾಸಗಳ ತಜ್ಞರು ಎರಡು ದಿನಗಳ ಕಾಲ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭವು ಆ.23ರ ಅಪರಾಹ್ನ 2:30ಕ್ಕೆ ನಡೆಯಲಿದೆ ಎಂದು ಅವರು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಎಂಜಿಎಂ ಕಾಲೇಜಿನ ವಿವಿಧ ವಿಭಾಗಗಳ ಪ್ರಾಧ್ಯಾಪಕರಾದ ಪ್ರೊ.ಶೈಲಜಾ, ರಾಜಮೂರ್ತಿ ರಾವ್, ಪವಿತ್ರಾ ಕೆ., ಜ್ಯೋತಿ ಅಲ್ಫೋನ್ಸೊ ಉಪಸ್ಥಿತರಿದ್ದರು.