ಕೊರಗ ಜನಾಂಗದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಲಭ್ಯಕ್ಕೆ ಕ್ರಮ: ಅಧಿಕಾರಿಗಳಿಗೆ ಉಡುಪಿ ಡಿಸಿ ಸೂಚನೆ
ಉಡುಪಿ, ಆ.28: ಬುಡಕಟ್ಟು ಸಮುದಾಯಗಳ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪರಿಸ್ಥಿತಿ ಸುಧಾರಿಸಲು ಅವರು ಗಳ ಕಲ್ಯಾಣಕ್ಕೆ ಸರಕಾರಗಳು ಜಾರಿಗೆ ತಂದಿರುವ ಅನೇಕ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವ ಮೂಲಕ ಅವರುಗಳ ಸವಾರ್ಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ನಡೆದ ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಯ ಕಾರ್ಯಕ್ರಮ ಅನುಷ್ಠಾನ ಕುರಿತ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಹಾಡಿಗಳಲ್ಲಿ ವಾಸವಿರುವ ಕೊರಗ ಜನಾಂಗದ ಪ್ರತಿಯೊಬ್ಬರಿಗೂ ಆಧಾರ್ ಕಾರ್ಡ್ ಲಭ್ಯವಾಗುವಂತೆ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಸಾಧ್ಯವಾದಲ್ಲಿ ಅವರುಗಳು ವಾಸವಿರುವ ಹಾಡಿಗಳಲ್ಲಿಯೇ ಶಿಬಿರಗಳನ್ನು ನಡೆಸು ವಂತೆ ಅವರು ಸಲಹೆ ನೀಡಿದರು.
ದುರ್ಬಲ ಬುಡಕಟ್ಟು ಜನರಿಗೆ ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ, ರಸ್ತೆ, ಟೆಲಿಕಾಂ ಸಂಪರ್ಕ ಸೇರಿದಂತೆ ಸುಸ್ಥಿರ ಜೀವನೋಪಾಯದ ಅವಕಾಶಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಪ್ರಧಾನಮಂತ್ರಿ ಜನ್‌ಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಇದು ಸಮರ್ಪಕವಾಗಿ ಅನುಷ್ಠಾನ ಗೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಜಿಲ್ಲೆಯಲ್ಲಿ ಬುಡಕಟ್ಟು ಜನಾಂಗದ ಸಾಮಾಜಿಕ, ಶೈಕ್ಷಣಿಕ, ಉದ್ಯೋಗ, ಭೂಮಿಯ ಮಾಲಕತ್ವ, ಬೆಳೆಯುವ ಬೆಳೆಗಳು, ಆಯುಷ್ಮಾನ್, ಆಧಾರ್ ಕಾರ್ಡ್, ರೇಶನ್ ಕಾರ್ಡ್ ಸೇರಿದಂತೆ ವಿವಿಧ ಸರಕಾರಿ ಸೌಲಭ್ಯ ಪಡೆದಿರುವ ಬಗ್ಗೆ ಸರ್ವೇ ಮಾಡಿ ಮಾಹಿತಿಗಳನ್ನು ಪಡೆದುಕೊಂಡಲ್ಲಿ ಅವರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ಬುಡಕಟ್ಟು ಜನಾಂಗದ ಜನರಿಗೆ ಜೀವನೋಪಾಯದ ಅವಕಾಶಗಳು ಮತ್ತು ಉದ್ಯಮ ಶೀಲತೆಯನ್ನು ಸುಗಮಗೊಳಿಸಲು, ಉತ್ತೇಜಿಸಲು ಅವರ ಉತ್ಪನ್ನ ಗಳಿಗೆ ಉತ್ಪಾದನೆ, ಸಂಗ್ರಹಣೆ, ಸಂಸ್ಕರಣೆ ಮತ್ತು ಮಾರುಕಟ್ಟೆ ಸಾಮರ್ಥ್ಯ ವನ್ನು ಕಲ್ಪಿಸಬೇಕು ಎಂದರು.
ಪ್ರಧಾನಮಂತ್ರಿ ಅವಾಸ್ ಯೋಜನೆಯಡಿ ಬುಡಕಟ್ಟು ಸಮುದಾಯದ ವಸತಿ ರಹಿತರಿಗೆ ಹಾಗೂ ಕಚ್ಚಾ ಮನೆ ಹೊಂದಿದ ವರಿಗೆ ಪಕ್ಕಾ ಮನೆಗಳನ್ನು ನಿರ್ಮಾಣ ಮಾಡಿಕೊಡಲು ಮುಂದಾಗಬೇಕು. ಜಲಜೀವನ್ ಮಿಶನ್ ಯೋಜನೆಯಡಿ ಜಿಲ್ಲೆ ಯಲ್ಲಿ ಬುಡಕಟ್ಟು ಜನಾಂಗದವರು ವಾಸವಿರುವ 186 ವಸತಿ ಪ್ರದೇಶಗಳಿಗೆ ಕುಡಿಯುವ ನೀರಿನ ಅವಶ್ಯಕತೆಗಳ ಬಗ್ಗೆ ಸರ್ವೇ ನಡೆಸಿ, ಅಗತ್ಯವಿರುವವರಿಗೆ ನಳ್ಳಿ ನೀರಿನ ಸಂಪರ್ಕ ಕಲ್ಪಿಸಬೇಕು ಎಂದರು.
ಸಮುದಾಯದಲ್ಲಿ ವಾಸವಿರುವ ಜನವಸತಿ ಪ್ರದೇಶಗಳಿಗೆ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ರಸ್ತೆ ಸಂಪರ್ಕ ಕಲ್ಪಿಸಬೇಕು. ಅಲ್ಲಿ ಮೊಬೈಲ್ ಟವರ್‌ಗಳ ನಿರ್ಮಾಣಕ್ಕೆ ಸೂಚನೆ ನೀಡಿದ ಜಿಲ್ಲಾಧಿಕಾರಿ, ಮೊಬೈಲ್ ಆರೋಗ್ಯ ತಪಾಸಣೆಯನ್ನು ಅವರು ವಾಸವಿರುವ ಹಾಡಿಗಳಲ್ಲಿಯೇ ಆಗಿಂದಾಗ್ಗೆ ನಡೆಸಬೇಕು. ಅವರಿಗೆ ಔಷಧೋಪಚಾರಗಳನ್ನು ನೀಡಬೇಕು. ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ಅನುದಾನ ಅರ್ಹ ಪ್ರತಿಯೊಬ್ಬ ರಿಗೂ ತಲುಪುವಂತೆ ನೋಡಿ ಕೊಳ್ಳಬೇಕು ಎಂದರು.
ಕೇಂದ್ರ ಸರಕಾರದ ಯೋಜನೆಗಳಾದ ಪಿಎಂ ಜನ್‌ಧನ್ ಯೋಜನೆ, ಜೀವನ್ ಜ್ಯೋತಿ ಭೀಮಾ ಯೋಜನಾ, ಪಿ.ಎಂ ಸುರಕ್ಷಾ ಭೀಮಾ ಯೋಜನೆ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಅವರಿಗೆ ಅರಿವು ಮೂಡಿಸಿ ಫಲಾನುಭವಿಗಳಾಗಿ ಮಾಡ ಬೇಕು ಎಂದರು.
ಸಭೆಯಲ್ಲಿ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ನಾರಾಯಣ ಸ್ವಾಮಿ ಎಂ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಐ.ಪಿ ಗಡಾದ್ ಮತ್ತಿತರ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.