ಅಖಿಲ ಭಾರತ ಅಂತರ ವಿವಿ ಖೋಖೋ: ಫೈನಲ್‌ಗೆ ನೆಗೆದ ಮಂಗಳೂರು ವಿವಿ

Update: 2025-04-11 21:46 IST
ಅಖಿಲ ಭಾರತ ಅಂತರ ವಿವಿ ಖೋಖೋ: ಫೈನಲ್‌ಗೆ ನೆಗೆದ ಮಂಗಳೂರು ವಿವಿ
  • whatsapp icon

ಉಡುಪಿ, ಎ.11: ಕಳೆದ ಬಾರಿಯ ರಾಷ್ಟ್ರೀಯ ರನ್ನರ್‌ಅಪ್ ತಂಡವಾದ ಮಹಾರಾಷ್ಟ್ರ ನಂದೇಡ್‌ನ ಎಸ್‌ಆರ್‌ಟಿಎಂ ವಿವಿ ತಂಡವನ್ನು 21-17 ಅಂಕಗಳ ಅಂತರದಿಂದ ಸುಲಭವಾಗಿ ಸೋಲಿಸಿದ ಆತಿಥೇಯ ಮಂಗಳೂರು ವಿವಿ, ನಗರದ ಪೂರ್ಣಪ್ರಜ್ಞ ಕಾಲೇಜಿನ ಶ್ರೀವಿಬುಧೇಶತೀರ್ಥ ಸ್ವಾಮೀಜಿ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿವಿ ಪುರುಷರ ಖೋ-ಖೋ ಟೂರ್ನಿಯ ಫೈನಲ್‌ಗೆ ತೇರ್ಗಡೆಗೊಂಡಿದೆ. ಮದ್ಯಂತರದ ವೇಳೆಗೆ ಮಂಗಳೂರು ವಿವಿ 10-8ರ ಮುನ್ನಡೆಯಲ್ಲಿತ್ತು.

ನಾಳೆ ಬೆಳಗ್ಗೆ ನಡೆಯುವ ಫೈನಲ್ ಪಂದ್ಯದಲ್ಲಿ ಮಂಗಳೂರು ವಿವಿ, ಕಳೆದ ಬಾರಿ ತನ್ನೊಂದಿಗೆ ಜಂಟಿ ಯಾಗಿ ಮೂರನೇ ಸ್ಥಾನವನ್ನು ಹಂಚಿಕೊಂಡಿದ್ದ ಮುಂಬಯಿ ವಿವಿಯನ್ನು ಎದುರಿಸಲಿದೆ. ದಿನದ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಮುಂಬಯಿ ವಿವಿ, ಮಹಾರಾಷ್ಟ್ರ ಸಾಂಭಾಜಿ ನಗರದ ಡಾ.ಬಿಎಎಂ ವಿವಿ ತಂಡವನ್ನು 14-13 ಅಂತರದಿಂದ ಅತ್ಯಂತ ರೋಮಾಂಚಕಾರಿಯಾಗಿ ಹಿಮ್ಮೆಟ್ಟಿಸಿತು.

ಕಳೆದ ಸಂಜೆ ಸುರಿದ ಮಳೆಯಿಂದಾಗಿ ಪಿಪಿಸಿ ಮೈದಾನದಲ್ಲಿ ತಾತ್ಕಾಲಿಕವಾಗಿ ನೂತನವಾಗಿ ಜರ್ಮನ್ ಹ್ಯಾಂಗರ್ ತಂತ್ರಜ್ಞಾನದಲ್ಲಿ ನಿರ್ಮಾಣಗೊಂಡಿದ್ದ ಕೋರ್ಟ್ ಒದ್ದೆಯಾಗಿದ್ದು, ಇದರಿಂದ ಬೆಳಗ್ಗೆ ನಡೆಯ ಬೇಕಿದ್ದ ಕ್ವಾರ್ಟರ್ ಫೈನಲ್ ಪಂದ್ಯಗಳು ನಿಗದಿತ ಅವಧಿಗೆ ಪ್ರಾರಂಭ ಗೊಂಡಿರಲಿಲ್ಲ. ಇದರಿಂದ ನಾಲ್ಕೂ ಪಂದ್ಯಗಳನ್ನು ಅಪರಾಹ್ನ 12 ಗಂಟೆಯ ಬಳಿಕವೇ ನಡೆಸಲಾಯಿತು.

ಆದರಲ್ಲಿ ಆತಿಥೇಯ ಆತಿಥೇಯ ಮಂಗಳೂರು ವಿವಿ, ಕಾನ್ಪುರದ ಸಿಎಸ್‌ಜೆಎಂ ವಿವಿಯನ್ನು ಒಂದು ಅಂಕದ ಅಂತರದಿಂದ ರೋಚಕವಾಗಿ ಹಿಮ್ಮೆಟ್ಟಿಸಿತು. ಅಂತಿಮವಾಗಿ ಮಂಗಳೂರು ವಿವಿ ಎದುರಾಳಿ ಯನ್ನು 11-10ರಿಂದ ಪರಾಭವಗೊಳಿಸಿತು.

ಮತ್ತೊಂದು ರೋಮಾಂಚಕಾರಿ ಕ್ವಾರ್ಟರ್‌ಫೈನಲ್‌ನಲ್ಲಿ ನಂದೇಡ್‌ನ ಎಸ್‌ಆರ್‌ಟಿಎಂ ವಿವಿ ತಂಡ, ಕರ್ನಾಟಕದ ದಾವಣಗೆರೆ ವಿವಿಯನ್ನು 13-12ರಿಂದ ಸೋಲಿಸಿ ಪೈನಲ್‌ಗೆ ನೆಗೆಯಿತು.

ಇನ್ನುಳಿದ ಎರಡು ಅಂತಿಮ ಎಂಟರ ಹಂತದ ಪಂದ್ಯಗಳಲ್ಲಿ ಮಹಾರಾಷ್ಟ್ರದ ಡಾ.ಬಿಎಎಂ ವಿವಿ, ಪಂಜಾಬ್‌ನ ಲವ್ಲೀ ಪ್ರೊಪೇಷನಲ್ ವಿವಿ ತಂಡವನ್ನೂ 13-12ರ ಅಂತರದಿಂದ ಹಿಮ್ಮೆಟ್ಟಿಸಿದರೆ, ಕೊನೆಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮುಂಬಯಿ ವಿವಿ, ದಿಲ್ಲಿ ವಿವಿ ತಂಡವನ್ನು 29-28ರ ಅಂತರದಿಂದ ಪರಾಭವಗೊಳಿಸಿತು.

ಫೈನಲ್ ಪಂದ್ಯ ಎ.12ರ ಶನಿವಾರ ಬೆಳಗ್ಗೆ 9:30ಕ್ಕೆ ನಡೆಯಲಿದೆ.



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News