ಕರಾವಳಿಯಿಂದ ಬೆಂಗಳೂರಿಗೆ ಮತ್ತೊಂದು ನಿತ್ಯ ರೈಲು

Update: 2023-09-06 14:02 GMT

ಕುಂದಾಪುರ, ಸೆ.6: ಬೆಂಗಳೂರು -ಮೈಸೂರು- ಮಂಗಳೂರಿಗೆ ಬರುತ್ತಿದ್ದ ಗಾಡಿ ಸಂಖ್ಯೆ 16585 ಎಕ್ಸ್‌ಪ್ರೆಸ್ ರೈಲನ್ನು ಮುರುಡೇಶ್ವರದವರೆಗೆ ವಿಸ್ತರಿಸಿ ಭಾರತೀಯ ರೈಲ್ವೇ ಆದೇಶ ಹೊರಡಿಸಿದೆ. ಇದರಿಂದ ಕುಂದಾಪುರ, ಉಡುಪಿ ಸೇರಿದಂತೆ ಕರಾವಳಿ ಕರ್ನಾಟಕಕ್ಕೆ ರಾಜಧಾನಿ ಬೆಂಗಳೂರು ಹಾಗೂ ಅರಮನೆ ನಗರಿ ಮೈಸೂರಿಗೆ ನಿತ್ಯ ರೈಲು ಪ್ರಯಾಣಕ್ಕೆ ಅವಕಾಶ ಸಿಕ್ಕಿದೆ.

ಕಳೆದ ಒಂದೂವರೆ ವರ್ಷದಿಂದ ಸತತವಾಗಿ ಈ ಹೋರಾಟ ಕೈಗೆತ್ತಿಕೊಂಡಿದ್ದ ಕುಂದಾಪುರ ರೈಲ್ವೇ ಸಮಿತಿ ಹಾಗೂ ದೆಹಲಿ ಮಟ್ಟದಲ್ಲಿ ನಿರಂತರ ಕೆಲಸ ಮಾಡಿದ್ದ ಮೈಸೂರು ಸಂಸದ ಪ್ರತಾಪ್ ಸಿಂಹ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ಲಭಿಸಿದೆ. ಈಗಿರುವ ಕರಾವಳಿಯ ಜೀವನಾಡಿ ಪಂಚಗಂಗಾ ಎಕ್ಸ್‌ಪ್ರೆಸ್ ಬೆಂಗಳೂರಿನಿಂದ ಬೇಗ ಹೊರಡುತ್ತದೆ ಮತ್ತು ಟಿಕೇಟು ಸಿಗುವುದಿಲ್ಲ ಎಂಬ ದೂರುಗಳಿಗೆ ಈಗ ಪರಿಹಾರ ಸಿಕ್ಕಂತಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬೈಯಪ್ಪನಹಳ್ಳಿಯಿಂದ ಹೊರಟು ರಾತ್ರಿ 9 ಗಂಟೆಗೆ ಮೆಜೆಸ್ಟಿಕ್ ಬರುವ ರೈಲು ಮೈಸೂರು ಮಾರ್ಗವಾಗಿ ಮಂಗಳೂರು, ಉಡುಪಿ ಕುಂದಾಪುರ ಮೂಲಕ ಸಂಚರಿಸಲಿದೆ. ಅಲ್ಲದೆ ಮಧ್ಯಾಹ್ನ ಮೂರುವರೆ ಸುಮಾರಿಗೆ ಕರಾವಳಿಯಿಂದ ಹೊರಡುವ ರೈಲು ಬೆಳಗ್ಗೆ ಆರಕ್ಕೆ ಬೆಂಗಳೂರು ತಲುಪಲಿದೆ. ವಾರಕ್ಕೆ ಮೂರು ದಿನ ಮಂಗಳೂರಿನವರೆಗೆ ಮಾತ್ರ ಓಡುತಿದ್ದ ಈ ರೈಲನ್ನು 6 ದಿನ ಓಡುವಂತೆ ಮಾಡಿ ಕುಂದಾಪುರ ಕಾರವಾರಕ್ಕೆ ವಿಸ್ತರಿಸಲು ಸಂಸದ ಪ್ರತಾಪ್ ಸಿಂಹ ಪ್ರಯತ್ನಿಸಿದ್ದು, ಅವರ ಬೇಡಿಕೆಯಂತೆ ವಾರಕ್ಕೆ ಮೂರು ದಿನದ ಬದಲು ಆರು ದಿನ ಓಡುವಂತೆ ಭಾರತೀಯ ರೈಲ್ವೇ ಕಳೆದ ವರ್ಷವೇ ಆದೇಶ ಮಾಡಿತ್ತು.

ಆದರೆ ರೈಲಿನ ಉಡುಪಿ, ಕುಂದಾಪುರ, ಕಾರವಾರ ವಿಸ್ತರಣೆ ಮಾತ್ರ ವಿಳಂಬವಾಗುತ್ತಿದ್ದರಿಂದ ಕುಂದಾಪುರ ರೈಲ್ವೇ ಸಮಿತಿ ನಿರಂತರವಾಗಿ ಕೊಂಕಣ ರೈಲ್ವೆ, ದಕ್ಷಿಣ ರೈಲ್ವೇ ಹಾಗು ನೈರುತ್ಯ ರೈಲ್ವೇ ಜತೆ ಬೆಂಗಳೂರಿಗೆ ಹೆಚ್ಚುವರಿ ರೈಲು ಸೇವೆಯ ಹೋರಾಟ ನಡೆಸಿತ್ತು.

ಕುಂದಾಪುರ ರೈಲ್ವೆ ಸಮಿತಿಯ ಗಣೇಶ್ ಪುತ್ರನ್, ಗೌತಮ್ ಶೆಟ್ಟಿ ಹಾಗು ಉತ್ತರ ಕನ್ನಡ ರೈಲ್ವೆ ಸಮಿತಿಯ ರಾಜೀವ್ ಗಾಂವಕರ್ ಬೆಂಗಳೂರಿಗೆ ವಾರದ ಆರು ದಿನದ ಬದಲು ಏಳು ದಿನವೂ ಓಡುವ ಹೆಚ್ಚುವರಿ ರೈಲಿನ ಪ್ರಸ್ತಾಪಕ್ಕೆ ಒಪ್ಪಿಗೆ ಪಡೆದು ರೈಲ್ವೇ ಸಚಿವರಿಗೆ ಅದನ್ನು ಕಳಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.

ಕುಂದಾಪುರ ರೈಲ್ವೇ ಸಮಿತಿಯ ನಿರಂತರ ಪ್ರಯತ್ನ ಹಾಗು ಮೈಸೂರು ಸಂಸದರ ನಿರಂತರ ಪ್ರಯತ್ನದಿಂದ ಕರಾವಳಿ ಕರ್ನಾಟಕಕ್ಕೆ ಹೊಸ ರೈಲು ಸೇವೆ ಲಭಿಸಿದ್ದು ಬೆಂಗಳೂರು ಮೈಸೂರು ಪ್ರಯಾಣಿಕರಿಗೆ ಬಹಳ ಅನುಕೂಲವಾಗಿದೆ ಎಂದು ಸಮಿತಿಯ ಗಣೇಶ್ ಪುತ್ರನ್ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News