ಭಟ್ಕಳ| ಸಮುದ್ರದಲ್ಲಿ ಬೋಟು ಮುಳುಗಡೆ: 7 ಮಂದಿ ಮೀನುಗಾರರ ರಕ್ಷಣೆ

Update: 2024-09-06 19:42 IST
ಭಟ್ಕಳ| ಸಮುದ್ರದಲ್ಲಿ ಬೋಟು ಮುಳುಗಡೆ: 7 ಮಂದಿ ಮೀನುಗಾರರ ರಕ್ಷಣೆ
  • whatsapp icon

ಮಲ್ಪೆ, ಸೆ.6: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಮಲ್ಪೆಯ ಬೋಟೊಂದು ಭಟ್ಕಳ ಸಮೀಪ ತೆಂಗಿನಗುಂಡಿ ಬಂದರು ಬಳಿ ಗುರುವಾರ ಸಂಜೆ ಬಂಡೆಕಲ್ಲಿಗೆ ಢಿಕ್ಕಿ ಹೊಡೆದು ಮುಳುಗಡೆಗೊಂಡಿದ್ದು ಅದರಲ್ಲಿದ್ದ 7 ಮಂದಿ ಮೀನುಗಾರರನ್ನು ರಕ್ಷಿಸಲಾಗಿದೆ.

ಬೋಟಿನ ತಂಡೇಲ ದೇವೆಂದ್ರ ಮಂಜು ಮೊಗೇರ ಸೇರಿದಂತೆ ಕಲಾಸಿಗಳಾದ ಧನಂಜಯ ಮೊಗೇರ, ಸುಧೀರ್ ಕೃಷ್ಣ ಆಚಾರಿ, ನರಸಿಂಹ ಗೋವಿಂದ ಮೊಗೇರ, ನವೀನ್ ಗೊಂಡ, ನಾಗಪ್ಪ ಮೊಗೇರ, ಅನಿಲ್ ಬಾರೋ ಎಂಬವರು ಕೊಡವೂರಿನ ಸವಿತಾ ಎಸ್.ಸಾಲ್ಯಾನ್ ಅವರಿಗೆ ಸೇರಿದ ಶ್ರೀ ಕುಲಮಹಾಸ್ತ್ರಿ ಫಿಶರೀಸ್ ಬೋಟಿನಲ್ಲಿ ಸೆ.5ರಂದು ಬೆಳಗ್ಗೆ ಮಲ್ಪೆ ಬಂದರಿನಿಂದ ಮೀನುಗಾರಿಕೆಗೆ ತೆರಳಿದ್ದರು.

ಬೈಂದೂರಿನ ಸುಮಾರು 13 ನಾಟಿಕಲ್ ಮೈಲು ದೂರದಲ್ಲಿ ಒಂದು ಟ್ರಾಲ್ ಮುಗಿಸಿ 2ನೇ ಟ್ರಾಲ್ ಹಾಕಿ ಬಲೆಯನ್ನು ಎಳೆದುಕೊಳ್ಳುವಾಗ ಆಕಸ್ಮಿಕವಾಗಿ ಬೋಟಿನ ಫ್ಯಾನಿಗೆ ಬಲೆ ಬಿದ್ದು ಎಂಜಿನ್ ಸ್ಥಗಿತಗೊಂಡಿತು. ಬೋಟನ್ನು ಚಾಲನಾ ಸ್ಥಿತಿಯಲ್ಲಿ ತರಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಆ ವೇಳೆ ಸಮೀಪದಲ್ಲಿದ್ದ ಸಾಯಿ ಸಾಗರ ಬೋಟಿನವರು ನೆರವಿಗೆ ಧಾವಿಸಿ ಬಂದು ಫ್ಯಾನಿಗೆ ಸಿಕ್ಕಿಕೊಂಡ ಬಲೆಯನ್ನು ಬಿಡಿಸಲು ಪ್ರಯತ್ನಿಸಿದರೂ ವಿಫಲಗೊಂಡಿದೆ.

ಸಮೀಪದ ಭಟ್ಕಳ ತೆಂಗಿನಗುಂಡಿ ಬಂದರಿಗೆ ಹಗ್ಗದ ಸಹಾಯದಿಂದ ಎಳೆದುಕೊಂಡು ತರುವಾಗ ಬಂದರು ಬಳಿಯ ಅಳಿವೆಯಲ್ಲಿ ಸಂಜೆ ಸುಮಾರು 6 ಗಂಟೆ ವೇಳೆಗೆ ಹಗ್ಗ ತುಂಡಾಗಿ ಬೋಟು ನಿಯಂತ್ರಣ ತಪ್ಪಿ ಕಲ್ಲಿಗೆ ಬಡಿಯಿತು. ಈ ವೇಳೆ ಕಲ್ಲಿನ ಮೇಲಿಂದ ಬೋಟನ್ನು ಎಳೆಯಲು ಸಾಧ್ಯವಾಗಲಿಲ್ಲ. ಬೋಟು ಕಲ್ಲಿಗೆ ತಾಗಿ ಸಂಪೂರ್ಣ ಜಖಂ ಗೊಂಡಿದ್ದು ಸುಮಾರು 60 ಲಕ್ಷ ರೂಪಾಯಿ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News