ಸಂವಿಧಾನ, ಪ್ರಜಾಪ್ರಭುತ್ವಕ್ಕೆ ಬಿಜೆಪಿ ಮಾರಕ: ವಿನಯ ಕುಮಾರ್ ಸೊರಕೆ
ಉಡುಪಿ, ಜ.23: ಭಾರತ್ ಜೋಡೊ ಯಾತ್ರೆ ಮೇಲೆ ಬಿಜೆಪಿಯವರು ನಡೆಸಿದ ದಾಳಿಯು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಸರ್ವಾಧಿಕಾರಿ ಧೋರಣೆಯ ಮೂಲಕ ವಿರೋಧ ಪಕ್ಷವನ್ನು ಹತ್ತಿಕ್ಕುವ ಕಾರ್ಯ ವನ್ನು ಬಿಜೆಪಿ ನಡೆಸುತ್ತಿದೆ. ಈ ಮೂಲಕ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದೆಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ.
ಅಸ್ಸಾಂನಲ್ಲಿ ಬಿಜೆಪಿ ಕಾರ್ಯಕರ್ತರು ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ನ್ಯಾಯ ಯಾತ್ರೆ ಮೇಲೆ ನಡೆಸಿದ ದಾಳಿಯನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ನ್ಯಾಯಾಲಯ, ಸಿಬಿಐ, ಚುನಾವಣಾ ಆಯೋಗ, ಇಡಿಗಳನ್ನು ದುರು ಪಯೋಗ ಮಾಡಿಕೊಂಡು ವಿರೋಧ ಪಕ್ಷವನ್ನು ಹತ್ತಿಕ್ಕುವ ಕಾರ್ಯವನ್ನು ಕೇಂದ್ರ ಬಿಜೆಪಿ ಸರಕಾರ ಮಾಡುತ್ತಿದೆ. ಈ ಮೂಲಕ ಪ್ರಜಾಪ್ರಭುತ್ವ ಮೌಲ್ಯಕ್ಕೆ ಮಸಿ ಬಳಿಯಲಾಗುತ್ತಿದೆ. ಮಣಿಪುರ ಹಿಂಸೆಯ ಬಗ್ಗೆ ಮಾತನಾಡದ ಪ್ರಧಾನಿ ನರೇಂದ್ರ ಮೋದಿ ಮಾನವೀಯತೆಯನ್ನೇ ಕಳೆದುಕೊಂಡಿದ್ದಾರೆ ಎಂದು ಅವರು ಟೀಕಿಸಿದರು.
ಕಾಂಗ್ರೆಸ್ ಉಡುಪಿ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿ, ಜನಬೆಂಬಲದಿಂದ ಭಯಭೀತರಾದ ಬಿಜೆಪಿ ಭಾರತ್ ಜೋಡೊ ಯಾತ್ರೆಯ ಮೇಲೆ ದಾಳಿ ನಡೆಸುತ್ತಿದೆ. ರಾಮರಾಜ್ಯ ಅಂದರೆ ಕೇವಲ ರಾಮ ದೇವಸ್ಥಾನ ಮಾತ್ರ ನಿರ್ಮಿಸುವುದಲ್ಲ. ಅದರೊಂದಿಗೆ ರಾಮನ ಆದರ್ಶನ ಪಾಲಿಸುವುದು ಕೂಡ ಮುಖ್ಯ. ಆದರೆ ಬಿಜೆಪಿಯವರು ಇದಕ್ಕೆಲ್ಲ ತದ್ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಈ ಮೂಲಕ ಹಿಟ್ಲರ್ ಮಾದರಿಯ ಸರ್ವಾಧಿಕಾರಿ ಆಡಳಿತವನ್ನು ಬಿಜೆಪಿ ನಡೆಸುತ್ತಿದೆ ಎಂದು ಆರೋಪಿಸಿದರು.
ಕೆಪಿಪಿಸಿ ಪ್ರಧಾನ ಕಾರ್ಯದರ್ಶಿ ಎಂ.ಎ.ಗಫೂರ್, ಕಾಂಗ್ರೆಸ್ ಮುಖಂಡ ರಾದ ಪ್ರಸಾದ್‌ರಾಜ್ ಕಾಂಚನ್, ನೀರೆ ಕೃಷ್ಣ ಶೆಟ್ಟಿ ಮಾತನಾಡಿದರು. ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡರಾದ ಕಿಶನ್ ಹೆಗ್ಡೆ ಕೊಳ್ಕೆಬೈಲು, ದಿವಾಕರ್ ಕುಂದರ್, ಅಮೃತ್ ಶೆಣೈ, ರಮೇಶ್ ಕಾಂಚನ್, ವರೋನಿಕಾ ಕರ್ನೆಲಿಯೋ, ದಿನೇಶ್ ಪುತ್ರನ್, ಭಾಸ್ಕರ ರಾವ್ ಕಿದಿಯೂರು, ಇಸ್ಮಾಯಿಲ್ ಆತ್ರಾಡಿ, ಲೂವಿಸ್ ಲೋಬೊ, ಶೇಕ್ ವಹೀದ್, ಶಬ್ಬೀರ್ ಉಡುಪಿ, ಹಬೀಬ್ ಅಲಿ, ಗೀತಾ ವಾಗ್ಳೆ, ಎಂ.ಪಿ.ಮೊದಿನಬ್ಬ, ಹರೀಶ್ ಶೆಟ್ಟಿ, ಶಂಕರ್ ಕುಂದರ್, ಹರೀಶ್ ಕಿಣಿ, ಕೀರ್ತಿ ಶೆಟ್ಟಿ, ಮಹಾಬಲ ಕುಂದರ್, ನರಸಿಂಹ ಮೂರ್ತಿ, ಜ್ಯೋತಿ ಹೆಬ್ಬಾರ್ ಮೊದಲಾದವರು ಉಪಸ್ಥಿತರಿದ್ದರು.
‘ಅಯೋಧ್ಯೆಯಲ್ಲಿ ರಾಮನ ವಿಗ್ರಹ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದಲ್ಲಿ ರಾಷ್ಟ್ರಪತಿಯನ್ನು ಕತ್ತಲಿನಲ್ಲಿ ಇಟು ಸಂವಿಧಾನಕ್ಕೆ ಅಪಚಾರ ಎಸಗಲಾಗಿದೆ. ರಾಷ್ಟ್ರಪತಿಯನ್ನು ಕೇವಲ ತೋರಿಕೆಗಾಗಿ ಪೀಠದಲ್ಲಿ ಕೂರಿಸಿ ಅವರಿಗೆ ಅವಮಾನ ಮಾಡಲಾಗಿದೆ. ರಾಜಕೀಯ ಲಾಭಕ್ಕಾಗಿ ಬಿಜೆಪಿ ದೇವರು, ಧರ್ಮದ ಹೆಸರನ್ನು ಬಳಸಿಕೊಳ್ಳುತ್ತಿದೆ. ಕಾಂಗ್ರೆಸ್ ಪಕ್ಷವನ್ನು ಧರ್ಮ ವಿರೋಧಿ ಎಂಬಂತೆ ಬಿಜೆಪಿ ಅಪಪ್ರಚಾರ ಮಾಡುತ್ತಿದೆ’
-ವಿನಯ ಕುಮಾರ್ ಸೊರಕೆ, ಮಾಜಿ ಸಚಿವರು