ಪೌರತ್ವ ತಿದ್ದುಪಡಿ ಕಾಯ್ದೆ ಬಿಜೆಪಿಯ ಚುನಾವಣಾ ಗಿಮಿಕ್: ಸಿಎಂ ಸಿದ್ಧರಾಮಯ್ಯ
ಉಡುಪಿ, ಮಾ.13: ಚುನಾವಣೆ ಹತ್ತಿರ ಬರುತ್ತಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಯ ನಿಯಮಗಳ ಅಧಿಸೂಚನೆಯನ್ನು ಹೊರಡಿಸಿರುವ ಕೇಂದ್ರ ಬಿಜೆಪಿ ಸರಕಾರ ಸೋಲಿನ ಭೀತಿಯಿಂದ ಈ ಎಲ್ಲ ಗಿಮಿಕ್ ಮಾಡುತ್ತಿದೆ ಎಂದು ರಾಜ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಟೀಕಿಸಿದ್ದಾರೆ.
ಉಡುಪಿಯಲ್ಲಿ ನಡೆಯುತ್ತಿರುವ ಗ್ಯಾರಂಟಿ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ವೇಳೆ ಅವರು ಆದಿ ಉಡುಪಿ ಹೆಲಿಪ್ಯಾಡ್‌ನಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಸಿಎಎಯನ್ನು ಬಿಜೆಪಿ ಚುನಾವಣೆಗಾಗಿ ಮಾಡಿರುವುದು. ಇವರು ಇಷ್ಟು ವರ್ಷ ಸುಮ್ಮನೆ ಇದ್ದು, ಈಗ ಯಾಕೆ ಅದನ್ನು ಜಾರಿಗೆ ತರುತ್ತಿದ್ದಾರೆ. ಅವರಿಗೆ ಈಗ ಚುನಾವಣೆಯಲ್ಲಿ ಸೋಲುತ್ತೇವೆ ಎಂಬ ಭಯ ಆರಂಭವಾಗಿದೆ ಎಂದರು.
ಪೌರತ್ವ ತಿದ್ದುಪಡಿ ಕಾಯಿದೆ ಬಗ್ಗೆ ರಾಜ್ಯ ಸರಕಾರದ ನಿಲುವಿನ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಅಧಿಸೂಚನೆಯನ್ನು ನೋಡಿದ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ನಾಳೆ ನಡೆಯುವ ಸಚಿವ ಸಂಪುಟದಲ್ಲಿ ಈ ಕುರಿತು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಜಯಪ್ರಕಾಶ್ ಹೆಗ್ಡೆ ಮೊದಲು ಕಾಂಗ್ರೆಸ್‌ನಲ್ಲಿಯೇ ಇದ್ದರು. ಕಾಂಗ್ರೆಸ್‌ನಲ್ಲಿ ಸಂಸದರಾಗಿದ್ದರು. ಮತ್ತೆ ಅವರು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಅದರಿಂದ ಕರಾವಳಿ ಭಾಗದಲ್ಲಿ ಪಕ್ಷಕ್ಕೆ ಹೆಚ್ಚು ಶಕ್ತಿ ಬಂದಿದೆ. ಜಯಪ್ರಕಾಶ್ ಹೆಗ್ಡೆ ಅವರಿಗೆ ಟಿಕೆಟ್ ನೀಡುವ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.
ಯದುವೀರ್ ಕುರಿತು ಪ್ರತಾಪ್ ಸಿಂಹ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ, ಈ ಬಗ್ಗೆ ಪ್ರತಾಪ್ ಸಿಂಹ ಅವರನ್ನೇ ಕೇಳಬೇಕು. ಪಾಪ ಪ್ರತಾಪ್ ಸಿಂಹಗೆ ಬಿಜೆಪಿಯವರೇ ಟಿಕೆಟ್ ತಪ್ಪಿಸುತ್ತಿದ್ದಾರೆ. ಅದು ಯಾರು ಎಂದು ನನಗೆ ಗೊತ್ತಿಲ್ಲ ಎಂದರು. ಕರಡಿ ಸಂಗಣ್ಣ ನನ್ನನ್ನು ಭೇಟಿಯಾಗಿಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಮೀನುಗಾರಿಕಾ ಸಚಿವ ಮಂಕಾಳ ವೈದ್ಯ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.