ಭ್ರಷ್ಟಾಚಾರ ಆರೋಪ : ಮಿಯ್ಯಾರು ಗ್ರಾಮ ಪಂಚಾಯತ್ ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಾರ್ವಜನಿಕರು

ಕಾರ್ಕಳ : ಮಿಯ್ಯಾರು ಗ್ರಾಮ ಪಂಚಾಯತ್ ನಲ್ಲಿ ಭ್ರಷ್ಟಾಚಾರ ಆರೋಪಿಸಿ ಸಾರ್ವಜನಿಕರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದು, ಅಧಿಕಾರಿಗಳು ಸಾರ್ವಜನಿಕರ ಪ್ರಶ್ನೆಗೆ ಉತ್ತರಿಸಲಾಗದೆ ಕೊನೆಗೆ ಸಭೆಯನ್ನೇ ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ ಎಂದು ಹೇಳಲಾಗಿದೆ.
ಗ್ರಾಮ ಸಭೆಯಲ್ಲಿ ರಾಜೇಶ್ ಎನ್ನುವವರು ಮಾತನಾಡಿ, ಗ್ರಾಮ ಪಂಚಾಯತ್ ನಲ್ಲಿ ಬಾರಿ ಅವವ್ಯಹಾರ ಹಾಗೂ ಭ್ರಷ್ಟಾಚಾರ ನಡೆದಿದೆ. ಲೆಕ್ಕಪತ್ರದಲ್ಲಿ ಮೂರು ಫ್ಯಾನ್ ದುರಸ್ತಿಗೆ 13 ಸಾವಿರಕ್ಕೂ ಅಧಿಕ ಹಣವನ್ನು ವ್ಯಯಿಸಿರುವುದು ಕಂಡು ಬಂದಿದೆ ಎಂದು ಆರೋಪಿಸಿದರು.
ಈ ವೇಳೆ ಪಿಡಿಒ ಉಡಾಫೆಯಾಗಿ ಉತ್ತರಿಸಿದರು ಎಂದು ಆರೋಪಿಸಲಾಗಿದೆ. ಗ್ರಾಪಂ ಸದಸ್ಯ ಡೆನಿಯಲ್ ರೇಂಜರ್ ಮಾತನಾಡಿ, ಪಿಡಿಒ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಸಾರ್ವಜನಿಕರಿಗೆ ಮಾಹಿತಿ ನೀಡಿದೆ ಕಾಟಾಚಾರಕ್ಕಾಗಿ ಗ್ರಾಮ ಸಭೆ ನಡೆಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೋರಂ ಇಲ್ಲದೇ ಸಭೆ ನಡೆಸಿದ್ದರಿಂದ ಗ್ರಾಮ ಸಭೆ ರದ್ದು ಮಾಡುವಂತೆಯೂ ಆಗ್ರಹಿಸಿದರು.
ʼಒಂದೇ ದಿನದಲ್ಲಿ ಏಳು ಗ್ರಾಮ ಸಭೆಗಳನ್ನು ನಡೆಸಲಾಗಿದೆ. ಅಧ್ಯಕ್ಷರ ಮೇಲೆ ಹಣಕಾಸಿನ ಅವ್ಯವಹಾರದ ಅರೋಪದ ಜೊತೆಗೆ ಹಕ್ಕುಚ್ಯುತ್ತಿ ಇದ್ದು, ಅವರು ಯಾವುದೇ ಸಭೆಯಲ್ಲಿ ಅಧ್ಯಕ್ಷರಾಗಿ ಭಾಗವಹಿಸುವಂತಿಲ್ಲ. ಇದನ್ನು ತಿಳಿದಿದ್ದರೂ ಪಿಡಿಒ ಮಾತ್ರ ಸರ್ವಾಧಿಕಾರಿಯಂತೆ ವರ್ತಿಸಿರುವುದು ಸರಿಯಲ್ಲʼ ಎಂದು ಡೇನಿಯಲ್ ರೇಂಜರ್ ಆರೋಪಿದರು.
ಇದಲ್ಲದೆ ಸಭೆಯಲ್ಲಿ ಗದ್ದಲ ನಡೆಯುತ್ತಿದ್ದರೂ ಅಧ್ಯಕ್ಷೆ ಸನ್ಮತಿ ನಾಯಕ್ ಮೌನವಾಗಿದ್ದರು. ಪಂಚಾಯತ್ ಸದಸ್ಯ ಗಿರೀಶ್ ಅಮಿನ್ ಅವರೇ ಎಲ್ಲದಕ್ಕೂ ಉತ್ತರ ನೀಡುತ್ತಿರುವುದು ಸಾರ್ವಜನಿಕರು ಆಕ್ಷೇಪಕ್ಕೆ ಕಾರಣವಾಯಿತು.
ಮಿಯ್ಯಾರು ಪಂಚಾಯತ್ ಪಿಡಿಓ ವಿರುದ್ಧವೂ ಭ್ರಷ್ಟಾಚಾರದ ಆರೋಪ ಕೇಳಿ ಬಂದಿದೆ. ತನ್ನ ಕಾರ್ಯವ್ಯಾಪ್ತಿಗೆ ಬಾರದ ಪ್ರದೇಶಕ್ಕೆ ತೆರಳಿ ಅನಧಿಕೃತ ಮರಳುಗಾರಿಕೆಗೆ ಬೆಂಬಲಿಸಿ ಅವರಿಂದ ಮಾಮೂಲಿ ಪಡೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಈ ವೇಳೆ ರಾಜೇಶ್ ನೆಲ್ಸನ್ ಡಿಸೋಜ, ಸೀತಾ, ಲೇನಿ ವೈಲೆಟ್ ರೇಂಜರ್, ಇಂದಿರಾ, ಶೋಬಾ, ರೇವತಿ ನಾಯಕ್, ಶೋಭಾ ಶೆಟ್ಟಿ, ಸುಮನಾ,ನವೀನ್ ಪೂಜಾರಿ, ಪ್ರಶಾಂತ್ ಪೂಜಾರಿ ಹಾಜರಿದ್ದರು.