ಮಕ್ಕಳಲ್ಲಿ ಜಲ, ಪರಿಸರ, ನದಿ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸಿ: ಅಧ್ಯಾಪಕರಿಗೆ ಡಿಡಿಪಿಐ ಗಣಪತಿ ಕರೆ

Update: 2023-08-08 15:42 GMT

ಉಡುಪಿ, ಆ.8: ಮಕ್ಕಳಲ್ಲಿ ಜಲ, ಪರಿಸರ, ನದಿ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಅಧ್ಯಾಪಕರುಗಳು ಮಾಡಬೇಕಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಅಧ್ಯಾಪಕರ ಹೊಣೆ ಮತ್ತು ಕೊಡುಗೆ ಬಹಳ ಮಹತ್ವವಾದುದು ಎಂದು ಉಡುಪಿ ಡಿಡಿಪಿಐ ಗಣಪತಿ ಹೇಳಿದ್ದಾರೆ.

ಮಣಿಪಾಲ ಮಾಹೆಯ ಮಣಿಪಾಲ ಸೆಂಟರ್ ಫಾರ್ ನ್ಯಾಚುರಲ್ ಸಾಯನ್ಸ್ ಏರ್ಪಡಿಸಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಪರಿಸರ, ನದಿ ಸಂರಕ್ಷಣೆಯಂಥ ಕಾರ್ಯಗಳಲ್ಲಿ ಅಧ್ಯಾಪಕರು ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನೇಷನಲ್ ಮಿಷನ್ ಫಾರ್ ಕ್ಲೀನ್‌ಗಂಗಾದ ಮಹಾ ನಿರ್ದೇಶಕ ಅಶೋಕ್‌ಕುಮಾರ್ ಅವರು ಮಾತನಾಡಿ, ಕೇಂದ್ರ ಸರಕಾರದ ಗಂಗಾನದಿಯನ್ನು ಸ್ವಚ್ಛ ಹಾಗೂ ಪುನರ್ಜೀವನಗೊಳಿಸುವ ‘ನಮಾಮಿ ಗಂಗೆ’ ಯೋಜನೆ ಜಗತ್ತಿನ ಅತ್ಯಂತ ಪ್ರಮುಖ ಯೋಜನೆಗಳಲ್ಲಿ ಒಂದಾಗಿದ್ದು, ಇದಕ್ಕಾಗಿ ಕೇಂದ್ರ ಸರಕಾರ 20,000 ಕೋಟಿರೂ, ಅಧಿಕ ನಿಧಿ ತೆಗೆದಿರಿಸಿದೆ ಎಂದರು.

ಈ ಯೋಜನೆಯಡಿ ಕಳೆದ 9 ವರ್ಷಗಳಲ್ಲಿ 450ಕ್ಕೂ ಮಿಕ್ಕಿ ವಿವಿಧ ಕಾಮಗಾರಿಗಳನ್ನು ಕಾರ್ಯರೂಪಕ್ಕಿಳಿಸಿ ಗಂಗಾನದಿ ಯನ್ನು ಪುನರ್ಜೀವನ ಗೊಳಿಸುವ ಕಾರ್ಯ ನಡೆದಿದೆ. ಇದಕ್ಕೆ ಸಾಕಷ್ಟು ಪ್ರತಿಫಲವು ದೊರಕಿದ್ದು ಈ ನಿಟ್ಟಿನಲ್ಲಿ ಹತ್ತು ಹಲವು ಕಾರ್ಯಯೋಜನೆಗಳು ಕಾರ್ಯಗತ ಗೊಳ್ಳುತ್ತಿದೆ. ಅವಿರಲಧಾರ ಗಂಗಾ , ನಿರ್ಮಲಧಾರ ಗಂಗಾ, ಜ್ಞಾನಗಂಗಾ, ಜನಗಂಗಾ ಹಾಗೂ ಅರ್ಥಗಂಗೆ ಹೀಗೆ ಐದು ಪ್ರಮುಖ ಪರಿಸರ ಸಂರಕ್ಷಣೆ ಕಾರ್ಯಕ್ರಮಗಳ ಮೂಲಕ ಈ ನಮಾಮಿ ಗಂಗೆಗೆ ಚಾಲನೆ ನೀಡಲಾಗಿದೆ ಎಂದರು.

ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಹೆ ವಿವಿಯಿಂದ ನಮಾಮಿ ಗಂಗೆ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡಿರುವ ಪರಿಸರ ಹಾಗೂ ನೀರಿನ ಸಂರಕ್ಷಣೆ ಯೋಜನೆ ಗಳ ಬಗ್ಗೆ ಹರ್ಷ ವ್ಯಕಪಡಿಸಿ ಶುಭ ಹಾರೈಸಿದರು.

ಮಾಹೆಯ ಪ್ರೊ ವೈಸ್ ಚಾನ್ಸಲರ್ ಡಾ.ನಾರಾಯಣ್ ಸಭಾಹಿತ್ ಮಾತನಾಡಿ ನೀರಿನ ಸಮಸ್ಯೆ, ಜಾಗತಿಕ ತಾಪಮಾನ ವೈಪರಿತ್ಯದ ಇಂದಿನ ಸಂದರ್ಭದಲ್ಲಿ ನದಿಮೂಲಗಳ ಹಾಗೂ ಪರಿಸರ ಸಂರಕ್ಷಣೆ ಅತ್ಯಗತ್ಯ ಎಂದರು.

ಮಣಿಪಾಲ ಸೆಂಟರ್ ಫಾರ್ ನ್ಯಾಚುರಲ್ ಸಾಯನ್ಸ್‌ನ ನಿರ್ದೇಶಕ ಡಾ. ಶ್ರೀಕುಮಾರ್ ಪಿ. ಅತಿಥಿಗಳನ್ನು ಸ್ವಾಗತಿಸಿ, ನೀರಿನ ಮಹತ್ವದ ಕುರಿತು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮಣಿಪಾಲ ಎಂಐಟಿಯ ಜಂಟಿ ನಿರ್ದೇಶಕ ಡಾ. ಸೋಮಶೇಖರ ಭಟ್ ವಂದಿಸಿದರು. ಎಂಐಟಿಯ ಡಾ. ಸೌಮ್ಯ ಎಸ್. ಹಾಗೂ ಡಾ. ಭಾಗ್ಯ ನಾವಡ ಕಾರ್ಯಕ್ರಮ ನಿರೂಪಿಸಿದರು.

ಡಾ.ರಾಘವೇಂದ್ರ ಹೊಳ್ಳ ಮತ್ತು ಡಾ. ನಾರಾಯಣ ಶೆಣೈ ಕೆ. ಇವರು ಗಂಗೆ ಮತ್ತು ಭಾರತದ ನದಿಗಳ ಮಹತ್ವ ಮತ್ತು ಪುನರ್ಜೀವನ ಕಾರ್ಯ ಹೇಗೆ ಕೈಗೊಳ್ಳಬಹುದು ಎಂಬುದರ ಬಗ್ಗೆ ಉಡುಪಿ, ಕಾರ್ಕಳ, ಬ್ರಹ್ಮಾವರ ತಾಲೂಕುಗಳಿಂದ ಬಂದಿದ ಶಾಲಾ ಅಧ್ಯಾಪಕರುಗಳಿಗೆ ಮಾಹಿತಿ ನೀಡಿದರು. 



Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News