ಪಡುಬಿದ್ರಿಯಲ್ಲಿ ಚಾಲಕನಿಗೆ ಹಲ್ಲೆ ಪ್ರಕರಣ: ಸುಳ್ಳು ಸುದ್ದಿ ಹಬ್ಬಿದವರ ವಿರುದ್ಧ ಮೊಕದ್ದಮೆ ದಾಖಲು
ಪಡುಬಿದ್ರಿ, ಎ.29: ಪಡುಬಿದ್ರಿಯಲ್ಲಿ ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣವನ್ನು ಚೂರಿ ಇರಿತ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿದವರ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓವರ್‌ಟೇಕ್ ಮಾಡಿದ ವಿಚಾರವಾಗಿ ಖಾಸಗಿ ಎಕ್ಸ್‌ಪ್ರೆಸ್ ಬಸ್ ಚಾಲಕ ಶೈಲೇಂದ್ರ ಯಾನೆ ಶೈಲು ಎಂಬವರ ಮೇಲೆ ಕಾರು ಚಾಲಕ ಮುಲ್ಕಿಯ ಇಸ್ಮಾಯಿಲ್ ಆತೀಕ್ ಎಂಬಾತ ಇಂದು ಬೆಳಗ್ಗೆ ಪಡುಬಿದ್ರೆಯಲ್ಲಿ ಹಲ್ಲೆ ನಡೆಸಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಆದರೆ ವೆಬ್‌ಸೈಟೊಂದು ಬಸ್ ಚಾಲಕನಿಗೆ ಚೂರಿ ಇರಿತ, ಪಡುಬಿದ್ರೆ ಉದ್ವಿಗ್ನ ಎಂಬುದಾಗಿ ವರದಿ ಮಾಡಿತ್ತು. ಇದನ್ನು ಕೆಲವರು ಸಾಮಾಜಿಕ ಜಾಲ ತಾಣಗಳಲ್ಲಿ ಶೇರ್ ಮಾಡುತ್ತಿದ್ದರೆನ್ನಲಾಗಿದೆ. ಹೀಗೆ ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಪಡುಬಿದ್ರಿ ಪೊಲೀಸ್ ಠಾಣೆಯ ಈಗಾಗಲೇ 505(2) ರಂತೆ ಪ್ರಕರಣ ದಾಖಲಾಗಿದ್ದು, ಮುಂದಕ್ಕೆ ಈ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಹಬ್ಬಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರ ಸೂಚನೆಯಂತೆ ವೆಬ್‌ಸೈಟ್‌ನಲ್ಲಿ ಹಾಕಲಾದ ಸುಳ್ಳು ಸುದ್ದಿಯ ವಿಡಿಯೋವನ್ನು ಸಂಬಂಧಪಟ್ಟವರು ಡಿಲೀಟ್ ಮಾಡಿದ್ದಾರೆನ್ನಲಾಗಿದೆ. ಆ ವೆಬ್‌ಸೈಟ್ ವಿರುದ್ಧವೂ ಕ್ರಮ ಜರಗಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.