ಮಾನವೀಯತೆ ಅಳವಡಿಕೊಂಡಾಗ ಮಾನವರಾಗಲು ಸಾಧ್ಯ: ನ್ಯಾ.ಹೆಗ್ಡೆ

Update: 2024-09-01 14:23 GMT

ಉಡುಪಿ, ಸೆ.1: ಸಮಾಜಮುಖಿ ಕಾರ್ಯಕ್ರಮಗಳಿಂದ ಜನರಲ್ಲಿ ಉತ್ತಮವಾದ ಮಾನವೀಯತೆಯ ಮೌಲ್ಯವನ್ನು ಮೈಗೂಡಿಸಿಕೊಳ್ಳಲು ಸಾಧ್ಯ. ಮನುಷ್ಯರಾಗಿ ಹುಟ್ಟಿದ ಮೇಲೆ ಜೀವನದಲ್ಲಿ ಮಾನವೀಯತೆಯನ್ನು ಅಳವಡಿಕೊಂಡಾಗ ಮಾನವರಾಗುತ್ತಾರೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಹೇಳಿದ್ದಾರೆ.

ಸಮಾನ ಮನಸ್ಕರ ತಂಡ ಉಡುಪಿ ಇವರಿಂದ ಬಡ ಕುಟುಂಬದ ಲಕ್ಷ್ಮೀ ಎಂಬವರಿಗೆ ಕುಕ್ಕೆಹಳ್ಳಿಯಲ್ಲಿ ನಿರ್ಮಿಸಿಕೊಟ್ಟಿರುವ 25ನೇ ಮನೆಯ ಹಸ್ತಾಂತರ ಕಾರ್ಯಕ್ರಮವನ್ನು ರವಿವಾರ ನೆರವೇರಿಸಿ ಅವರು ಮಾತನಾಡುತಿದ್ದರು.

ತಂಡದ ಮುಖ್ಯಸ್ಥ ಶಶಿಧರ ಪುರೋಹಿತ್ ಕಟಪಾಡಿ ಮಾತನಾಡಿ, ಸಮಾನ ಮನಸ್ಕರೆಂಬ ತಂಡವನ್ನು ರಚಿಸಿ ಗರಡಿಯಲ್ಲಿ ಮೊದಲ ಮನೆಯನ್ನು ನಿರ್ಮಿಸ ಲಾಯಿತು. ಇಂದು ಕುಕ್ಕೆಹಳ್ಳಿಯಲ್ಲಿ 25ನೇ ಮನೆ ಹಸ್ತಾಂತರಗೊಂಡಿದೆ. ಇನ್ನೂ ಮೂರು ಮನೆಗಳು ನಿರ್ಮಾಣ ಹಂತದಲ್ಲಿವೆ. ನಮ್ಮ ತಂಡದವರು ವಾಟ್ಸಾಪ್ ಗ್ರೂಪ್ ರಚಿಸುವುದರ ಮೂಲಕ ಒಂದು ಮನೆಯ ನಿರ್ಮಾಣಕ್ಕೆ 50-60 ಮಂದಿಯನ್ನು ಆ ಗ್ರೂಪ್ ನಲ್ಲಿ ಸೇರಿಸಿಕೊಂಡು ಹಣ ಹಾಗೂ ವಸ್ತು ರೂಪದ ಮೂಲಕ ದಾನವನ್ನು ಪಡೆದು ಮನೆಗಳನ್ನು ನಿರ್ಮಿಸುತ್ತಿದ್ದೇವೆ. ಈವರೆಗೆ 25 ಮನೆಗಳ ನಿರ್ಮಾಣಕ್ಕಾಗಿ ಸುಮಾರು 2.5 ಕೋಟಿ ರೂ. ಹಣ ವ್ಯಯಿಸ ಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾಧವ ಆಚಾರ್ಯ ಪುತ್ತೂರು, ರಾಜಗೋಪಾಲ್ ಆಚಾರ್ಯ ಕೋಟೇಶ್ವರ, ಉಪೇಂದ್ರ ಆಚಾರ್ಯ ಪೆರ್ಡೂರ್, ರಾಘವೇಂದ್ರ ಆಚಾರ್ಯ ಕೋಟ. ಪುರಂದರ ಕೋಟ್ಯಾನ್ ಕುಕ್ಕೆಹಳ್ಳಿ, ಪ್ರಕಾಶ್ ಆಚಾರ್ಯ ಕಾರ್ಕಳ, ಸತೀಶ್ ರಾವ್ ಮಂಗಳೂರು ಮೊದಲಾದವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News