ಇಸ್ರೋ, ಭಾರತ ಮೊದಲು ಎಂಬುದು ದೊಡ್ಡ ಹೆಮ್ಮೆ: ಅತುಲ್ ಭಟ್

Update: 2023-08-23 16:16 GMT

ಉಡುಪಿ, ಆ.23: ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದ ಮೇಲ್ಮೈಯಲ್ಲಿ ಇಳಿದಿರುವುದು ಬಹಳ ದೊಡ್ಡ ಹೆಜ್ಜೆಯಾಗಿದೆ. ಇದರಿಂದ ನಮ್ಮ ವಿಜ್ಞಾನಿಗಳು ಪ್ರಬಲ ಎಂಬುದು ಸಾಬೀತಾ ಗಿದೆ. ಚಂದ್ರಯಾನ- 1ರಲ್ಲಿ ಚಂದ್ರ ಮೇಲೆ ನೀರು ಇದೆ ಎಂಬುದು ಪತ್ತೆ ಹಚ್ಚಿದ ಮತ್ತು 3ರಲ್ಲಿ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿದಿರುವುದು ಇಸ್ರೋ ಮತ್ತು ಭಾರತ ಮೊದಲು ಎಂಬುದು ನಮಗೆ ದೊಡ್ಡ ಹೆಮ್ಮೆ ಎಂದು ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಅತುಲ್ ಭಟ್ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಬುಧವಾರ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಚಂದ್ರಯಾನ -3ಯಲ್ಲಿ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯವ ದೃಶ್ಯವನ್ನು ಬೃಹತ್ ಪರದೆ ಮೇಲೆ ನೇರಪ್ರಸಾರದ ಮೂಲಕ ವೀಕ್ಷಿಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಲ್ಯಾಂಡರ್ ಇಳಿಯುವ ಕೊನೆಯ 15 ನಿಮಿಷ ಇಸ್ರೋ ಕೈಯಲ್ಲಿ ಇರಲಿಲ್ಲ. ಲ್ಯಾಂಡರ್ ತಾನಾಗಿಯೇ ಆಟೋಮೊನಸ್ ಆಗಿ ಕೆಲಸ ಮಾಡುತ್ತದೆ. ಐದು ಕಿ.ಮೀ. ವ್ಯಾಪ್ತಿಯಲ್ಲಿ ಎಲ್ಲಿ ಇಳಿಯಬೇಕು ಎಂಬುದಾಗಿ ತಾನಾಗಿಯೇ ನಿರ್ಧಾರ ತೆಗೆದು ಕೊಂಡು, 11 ಕೆಮರಾದಿಂದ ನೆಲ ನೊಂಡಿಕೊಂಡು ಇಳಿದಿದೆ. ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಈವರೆಗೆ ಯಾವುದೇ ದೇಶ ಇಳಿದಿಲ್ಲ. ಈ ಪ್ರದೇಶದಲ್ಲಿ ಇಳಿದ ಮೊದಲ ದೇಶ ಭಾರತ ಆಗಿದೆ ಎಂದರು.

ಮುಂದೆ ಚಂದ್ರನ ಮೇಲೆ ಕ್ಯಾಮೆರಾ, ಉಪಕರಣ, ಸೆನ್ಸಾರ್‌ಗಳು ಒಟ್ಟು ಸೇರಿ ನೀರಿನ ಅಂಶಗಳ ಬಗ್ಗೆ ಅಧ್ಯಯನ ಮಾಡಲಾಗುತ್ತದೆ. ಅದೇ ರೀತಿ ಚಂದ್ರ ಮಣ್ಣುನಲ್ಲಿ ಏನಿದೆ ಎಂಬುದನ್ನು ಕೂಡ ಪತ್ತೆ ಹಚ್ಚಲಾಗುತ್ತದೆ. ಲ್ಯಾಂಡರ್ ಮೇಲೆ ಇರುವ ಸೆನ್ಸಾರ್‌ಗಳಿಂದ ಚಂದ್ರ ಮೇಲೆ ನೆಲ ಹೇಗೆ ಹಾಗೂ ಎಷ್ಟು ಬಿಸಿಯಾಗುತ್ತದೆ ಎಂಬುದರ ಬಗ್ಗೆಯೂ ಅಧ್ಯಯನ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಲ್ಯಾಂಡರ್‌ನಿಂದ ಹೊರಗೆ ಬರುವ ರೋವರ್ ಪ್ರಾಗ್ಯಾನ್‌ಚಂದ್ರನ ಮೇಲೆ ಭೂಮಿಯ 14 ದಿನಗಳ ಕಾಲ ಕೆಲಸ ಮಾಡು ತ್ತದೆ. ಭೂಮಿಯ 14 ದಿನಗಳು ಅಂದರೆ ಚಂದ್ರನ ಮೇಲೆ ಒಂದು ಹಗಲು ಆಗಿರುತ್ತದೆ. ಆ ಒಂದು ಹಗಲು ಸೂರ್ಯನ ಕಿರಣಗಳನ್ನು ಪಡೆದು ಇದು ಕಾರ್ಯ ನಿರ್ವಹಿಸುತ್ತದೆ. 14 ದಿನಗಳ ನಂತರ ಸೂರ್ಯ ಕಿರಣ ಇಲ್ಲದೆ ಅದು ಆಫ್ ಆಗು ತ್ತದೆ. ಮುಂದೆ 14 ದಿನಗಳ ನಂತರ ಚಂದ್ರನ ತಾಪಮಾನ -2ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿರುವುದ ರಿಂದ ಅದು ಕಾರ್ಯ ಎಸಗುವುದಿಲ್ಲ ಎಂದು ಅವರು ಮಾಹಿತಿ ನೀಡಿದರು.

ಈ ವೀಕ್ಷಣೆ ಕಾರ್ಯಕ್ರಮದಲ್ಲಿ ಭೌತಶಾಸ್ತ್ರ ಸಂಬಂಧ ಕಾಲೇಜಿನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪಂಜಾಬ್, ಹರಿಯಾಣ, ಜಾರ್ಖಂಡ, ಛತ್ತಿಸ್‌ಗಡ್ ಸೇರಿದಂತೆ ದೇಶದ 7-8 ರಾಜ್ಯಗಳ 40 ಹಾಗೂ ಪಿಪಿಸಿ ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವ ಜನಿಕರು ಪಾಲ್ಗೊಂಡಿದ್ದರು.

‘ಇದೊಂದು ಅಪೂರ್ವ ಕ್ಷಣ. ನಮ್ಮ ವಿಜ್ಞಾನಿಗಳ ಸಾಧನೆ ನೋಡಿ ಕಣ್ಣಲ್ಲಿ ನೀರು ಬಂತು. ಇದು ನಮಗೆಲ್ಲ ಸ್ಪೂರ್ತಿಯಾಗಿದೆ. ಛಲ ಬಿಡದೆ ಕೆಲಸ ಮಾಡಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಈ ಸಾಧನೆ ಸಾಕ್ಷಿಯಾಗಿದೆ. ನಮ್ಮ ವಿಜ್ಞಾನಿಗಳ ಆತ್ಮವಿಶ್ವಾಸ ಯಶಸ್ಸು ಕಂಡಿದೆ’

-ಹರ್ಷಿತಾ, ದ್ವಿತೀಯ ಬಿಎಸ್ಸಿ, ಪಿಪಿಸಿ ಉಡುಪಿ

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News