ಕೊಲ್ಲೂರು: ಸರಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಧರಣಿ

Update: 2023-07-18 15:55 GMT

ಬೈಂದೂರು: ಕೊಲ್ಲೂರು-ಬೈಂದೂರು, ಕೊಲ್ಲೂರು -ಕುಂದಾಪುರ- ನಿಟ್ಟೂರಿಗೆ ಸಂಪರ್ಕಿಸುವ ಮಾರ್ಗದಲ್ಲಿ ಸರಕಾರಿ ಬಸ್ ಓಡಿಸುವಂತೆ ಆಗ್ರಹಿಸಿ ಬೈಂದೂರು ತಾಲೂಕು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘ, ಜನವಾದಿ ಮಹಿಳಾ ಸಂಘಟನೆ ಬೈಂದೂರು ತಾಲೂಕು ಸಮಿತಿ ನೇತೃತ್ವದಲ್ಲಿ ಕೊಲ್ಲೂರು ಗ್ರಾಮ ಪಂಚಾಯಿತ್ ಎದುರು ಧರಣಿ ನಡೆಸಲಾಯಿತು.

ಕಾರ್ಮಿಕ ಮುಖಂಡ ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕೊಲ್ಲೂರು ಪ್ರೇಕ್ಷಣೀಯ ಸ್ಥಳವಾಗಿದ್ದು, ಇಲ್ಲಿನ ಜನರು ಸರಕಾರಿ ಬಸ್ಸುಗಳಿಲ್ಲದೇ ವಂಚಿತರಾಗಿದ್ದಾರೆ. ಖಾಸಗಿ ಎಕ್ಸ್‌ಪ್ರೆಸ್ ಬಸ್‌ಗಳು ೨-೩ ಕಿಮೀ ದೂರ ಕ್ರಮಿಸುವ ಜನರಿಗೆ ನಿಲ್ಲಿಸದೇ ಇರುವುದು ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಆದುದರಿಂದ ಸ್ಥಳೀಯವಾಗಿ ಸರಕಾರಿ ಬಸ್ಸುಗಳನ್ನು ಆರಂಭಿಸಿದರೆ ಕೃಷಿ ಕೂಲಿಕಾರರು, ಕಾರ್ಮಿಕರು, ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದರು.

ಜನವಾದಿ ಮಹಿಳಾ ಸಂಘಟನೆ ಮುಖಂಡೆ ಸಾವಿತ್ರಿ ಹೆಮ್ಮಾಡಿ ಮಾತನಾಡಿ, ಸ್ಥಳೀಯವಾಗಿ ಬಸ್ಸುಗಳು ಓಡಿಸದೇ ಇರುವುದು ವಿದ್ಯಾರ್ಥಿಗೆ ಬಹಳಷ್ಟು ಸಮಸ್ಯೆಯಾಗಿದೆ. ಕೊಲ್ಲೂರಿನಂತಹ ಧಾರ್ಮಿಕ ಸ್ಥಳಕ್ಕೆ ಬರಲು ಹರಸಾಹಸ ಹಾಗೂ ಅತಿ ಹೆಚ್ಚು ಹಣ ಖಾಸಗಿ ಬಸ್ಸಿಗೆ ಖರ್ಚು ಮಾಡಬೇಕಾದ ಪರಿಸ್ಥಿತಿ ಯನ್ನು ಸಾರಿಗೆ ಪ್ರಾಧಿಕಾರ ನಿರ್ಮಾಣ ಮಾಡಿದೆ ಎಂದು ಹೇಳಿದರು.

ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ರಾಜೀವ ಪಡುಕೋಣೆ ಮಾತನಾಡಿ ದರು. ಕಟ್ಟಡ ಕಾರ್ಮಿಕರ ಸಂಘದ ರೊನಾಲ್ಡ್ ರಾಜೇಶ್ ಕ್ವಾಡ್ರಸ್ ಪ್ರಾಸ್ತಾವಿಕ ಮಾತನಾಡಿದರು. ನರಸಿಂಹ ಆಚಾರ್ ಕೊಲ್ಲೂರು, ಗಣೇಶ್ ತೊಂಡೆಮಕ್ಕಿ, ರಾಮ ಕಂಬದಕೋಣೆ, ಶೀಲಾವತಿ ಪಡುಕೋಣೆ, ಸಚಿನ್ ಕೊಲ್ಲೂರು, ಸುಜಾತಾ, ಶಾರದ, ಜ್ಯೋತಿ ಕೊಲ್ಲೂರು, ನಾಗರತ್ನ ಉಪಸ್ಥಿತರಿದ್ದರು. ರಾಘವೇಂದ್ರ ಅರೆಶಿರೂರು ವಂದಿಸಿದರು.

ಗ್ರಾಪಂ ಅಧ್ಯಕ್ಷ ಶಿವರಾಂ ಕೃಷ್ಣ ಭಟ್ ಅವರ ಮೂಲಕ ಸಾರಿಗೆ ಪ್ರಾಧಿಕಾರ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ವೇಳೆಯಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರುಕ್ಕನ ಗೌಡ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕೊಲ್ಲೂರು ಪೇಟೆಯಲ್ಲಿ ಸ್ಥಳೀಯರು ಮೆರವಣಿಗೆ ನಡೆಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News