ಕೊಲ್ಲೂರು: ಯುವಕನ ಪತ್ತೆಗಾಗಿ 6ನೇ ದಿನವೂ ಮುಂದುವರಿದ ಶೋಧ

Update: 2023-07-28 16:26 GMT

ಕುಂದಾಪುರ: ರಜಾ ದಿನದ ಪ್ರವಾಸಕ್ಕೆಂದು ಸ್ನೇಹಿತನ ಜೊತೆ ಕೊಲ್ಲೂರು ಸಮೀಪದ ಅರಶಿನಗುಂಡಿ ಜಲಪಾತಕ್ಕೆ ರವಿವಾರ ಬಂದು ವೀಕ್ಷಣೆ ವೇಳೆ ಅಕಸ್ಮಿಕವಾಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿಹೋದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕೆ.ಎಚ್ ನಗರ ಸುಣ್ಣದಹಳ್ಳಿ ನಿವಾಸಿ ಶರತ್ ಕುಮಾರ್ (23) ಅವರಿಗಾಗಿ ಆರನೇ ದಿನವಾದ ಶುಕ್ರವಾರ ಕೂಡ ಶೋಧ ಮುಂದುವರೆದಿದೆ.

ಘಟನೆ ನಡೆದ ರವಿವಾರ ಸಂಜೆಯಿಂದಲೇ ಪತ್ತೆ ಕಾರ್ಯ ನಡೆಯುತ್ತಿದ್ದು ನಿತ್ಯವೂ ಬೆಳಗ್ಗೆಯಿಂದ ರಾತ್ರಿ ತನಕ ಪೊಲೀಸ್, ಅರಣ್ಯ, ಅಗ್ನಿಶಾಮಕ, ಎಸ್.ಡಿ.ಆರ್.ಎಫ್, ಸ್ಥಳೀಯರು, ಮುಳುಗು ತಜ್ಞರು ಶೋಧ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು ದುರ್ಗಮ ಹಾದಿ, ವಿಪರೀತ ಮಳೆ, ಜಿಗಣೆ ಕಾಟದ ನಡುವೆಯೂ ಜೀವದ ಹಂಗು ತೊರೆದು ನೀರಿನಲ್ಲಿ ಕೊಚ್ಚಿಹೋದ ಯುವಕನ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಗುರುವಾರ ಕೊಲ್ಲೂರು ಠಾಣೆ ಉಪನಿರೀಕ್ಷಕರು, ಸಿಬ್ಬಂದಿ ನೇತೃತ್ವದಲ್ಲಿ ಎಸ್‌ಡಿಆರ್‌ಎಫ್, ಅಗ್ನಿಶಾಮಕ ತಂಡ ಹಾಗೂ ಯುವಕನ ಸಂಬಂಧಿಕರು ಕೂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ಇಂದು ಪತ್ತೆಗಾಗಿ ಡ್ರೋನ್ ಕ್ಯಾಮೆರಾ ಬಳಸಿಕೊಳ್ಳಲಾಯಿತು. ಶುಕ್ರವಾರ ಕೂಡ ಪೊಲೀಸ್, ಅರಣ್ಯ ಇಲಾಖೆ, ಅಗ್ನಿಶಾಮಕ ಹಾಗೂ ಯುವಕನ ಪರಿಚಯಸ್ಥರು ಸಂಜೆ ತನಕ ಅರಶಿನಗುಂಡಿ ಪರಿಸರದಲ್ಲಿ ಸತತ ಹುಡುಕಾಟ ನಡೆಸಿದ್ದಾರೆ ಎಂಬ ಮಾಹಿತಿಯಿದೆ.

ಘಟನೆ ಹಿನ್ನೆಲೆ: ರವಿವಾರದಂದು ಶರತ್ ಆತನ ಸ್ನೇಹಿತ ಗುರುರಾಜ ಎನ್ನುವರೊಂದಿಗೆ ಕಾರಿನಲ್ಲಿ ಭದ್ರಾವತಿಯಿಂದ ಹೊರಟು ಕೊಲ್ಲೂರಿಗೆ ಆಗಮಿಸಿ ಕೊಲ್ಲೂರು ಗ್ರಾಮದ ಅರಶಿನ ಗುಂಡಿ ಜಲಪಾತ (ಫಾಲ್ಸ್) ನೋಡಲು ಹೋಗಿದ್ದು ಮಧ್ಯಾಹ್ನ 3.30ರ ಸುಮಾರಿಗೆ ಜಲಪಾತ ಬಳಿ ಬಂಡೆಯ ಮೇಲೆ ನಿಂತಿದ್ದ ಶರತ್ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಸೌಪರ್ಣಿಕ ನದಿ ನೀರಿನ ಸೆಳೆತಕ್ಕೆ ಸಿಕ್ಕಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News