ಲೋಕ ಅದಾಲತ್: ರಾಜಿ ಸಂಧಾನದಲ್ಲಿ 91 ಲಕ್ಷ ರೂ. ವಿಮಾ ಪರಿಹಾರ

Update: 2023-09-09 15:22 GMT

ಉಡುಪಿ, ಸೆ.9: ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ನಡೆದ ವರ್ಷದ ಮೂರನೇ ಲೋಕ ಅದಾಲತ್‌ನಲ್ಲಿ ಅಪಘಾತ ವಿಮಾ ಪರಿಹಾರಕ್ಕೆ ಸಂಬಂಧಪಟ್ಟಂತೆ ವಿಮಾ ಸಂಸ್ಥೆಯೊಂದು ರಾಜಿ ಸಂಧಾನದ ಮೂಲಕ 91 ಲಕ್ಷ ರೂ. ಪರಿಹಾರ ವನ್ನು ಅಪಘಾತದಿಂದ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ನೀಡಿದೆ.

ಉಡುಪಿ ನಗರಸಭೆಯ ಮ್ಯಾನೇಜರ್ ಆಗಿದ್ದ ವೆಂಕಟರಮಣ ಅವರು 2021ರ ಜ.16ರಂದು ಕಡಿಯಾಳಿ ಬಳಿ ಸಂಭವಿ ಸಿದ ರಸ್ತೆ ಅಪಘಾತದಲಿಲ ಮೃತಪಟ್ಟಿದ್ದರು. ಮೃತರ ವಾರಸುದಾರರು ಉಡುಪಿಯ ಪ್ರದಾನ ಸಿವಿಲ್ ಜಡ್ಜ್ ನ್ಯಾಯಾಲಯದಲ್ಲಿ ವಿಮಾ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದರು.

ಅಪಘಾತ ನಡೆದ ಸಮಯ ಅಫಘಾತ ಮಾಡಿದ ಕಾರಿನ ವಿಮೆಯು ಯುನಿವರ್ಸಲ್ ಸೊಂಪೊ ಜನರಲ್ ಇನ್ಯುರೆನ್ಸ್ ವಿಮಾ ಸಂಸ್ಥೆಗೆ ಒಳಪಟ್ಟಿತ್ತು. ವಿಮಾ ಸಂಸ್ಥೆಯು ಪ್ರಕರಣದ ಕುರಿತಂತೆ ತನ್ನ ವಕೀಲರ ಅಭಿಪ್ರಾಯ ಪಡೆದು ರಾಜಿ ಸಂಧಾನಕ್ಕೆ ಮುಂದಾಗಿತ್ತು. ಈ ಮೂಲಕ ಅರ್ಜಿದಾರರಿಗೆ ಶೀಘ್ರವೇ ನ್ಯಾಯ ದೊರಕಿಸಿಕೊಡಲು ಮುಂದಾಗಿತ್ತು.

ಅರ್ಜಿದಾರರು ಹಾಗೂ ವಿಮಾ ಸಂಸ್ಥೆ ರಾಜಿ ಸಂಧಾನ ಪತ್ರಕ್ಕೆ ಹಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ಖಾಸಗಿ ವಿಮಾ ಸಂಸ್ಥೆಯೊಂದು ಅಪಘಾತ ವಿಮಾ ಪರಿಹಾರ ಪ್ರಕರಣದಲ್ಲಿ ಇಷ್ಟೊಂದು ದೊಟ್ಟಮಟ್ಟದ ಪರಿಹಾರ ಘೋಷಿಸಿರುವುದು ಉಡುಪಿ ಜಿಲ್ಲಾ ಲೋಕ ಅದಾಲತ್ ಇತಿಹಾಸದಲ್ಲೇ ಇದೇ ಮೊದಲು ಎಂದು ವಿಮಾ ಸಂಸ್ಥೆಯ ನ್ಯಾಯವಾದಿ ಎಚ್.ಆನಂದ ಮಡಿವಾಳ ತಿಳಿಸಿದ್ದಾರೆ.

ಸಂಧಾನದಲ್ಲಿ ಒಂದಾದ ಹಿರಿಯ ದಂಪತಿ: ಇಂದಿನ ಲೋಕಅದಾಲತ್‌ನ ಇನ್ನೊಂದು ಪ್ರಕರಣದಲ್ಲಿ ಹಿರಿಯ ದಂಪತಿ ಯೊಂದು ತಮ್ಮ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡು ರಾಜಿ ಸಂಧಾನದ ಮೂಲಕ ಮತ್ತೆ ಒಂದಾಗಿದ್ದಾರೆ.

ಪರಸ್ಪರ ಭಿನ್ನಾಭಿಪ್ರಾಯದಿಂದ ದೂರವಾಗಿದ್ದ 64 ವರ್ಷ ಪ್ರಾಯದ ಪುರುಷ ಹಾಗೂ 52 ವರ್ಷ ಪ್ರಾಯದ ಮಹಿಳೆ ನ್ಯಾಯಾಧೀಶರು ಹಾಗೂ ವಕೀಲರ ಮಧ್ಯಸ್ಥಿಕೆಯ ಮೂಲಕ ಭಿನ್ನಾಭಿಪ್ರಾಯವನ್ನು ತೊರೆದು ಮತ್ತೊಂದು ಒಂದಾಗಿ ಬಾಳುವ ನಿರ್ಧಾರವನ್ನು ಕೈಗೊಂಡಿದ್ದಾರೆ.

ಲೋಕಅದಾಲತ್ ಉದ್ಘಾಟನೆ: ಬೆಳಗ್ಗೆ ಉಡುಪಿಯಲ್ಲಿ ವರ್ಷದ ಮೂರನೇ ಲೋಕ ಅದಾಲತ್‌ನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ನ್ಯಾಯಮೂರ್ತಿ ಶಾಂತವೀರ ಶಿವಪ್ಪ ಅವರು ಉದ್ಘಾಟಿಸಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್., ನ್ಯಾ. ದಿನೇಶ್ ಹೆಗ್ಡೆ, ಉಡುಪಿ ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್, ನ್ಯಾಯಾಧೀಶರು ಹಾಗೂ ವಕೀಲರು ಈ ಸಂದರ್ಭದಲಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News