ಕಂಚಿನಡ್ಕ ಟೋಲ್‌ಗೇಟ್ ವಿರುದ್ಧದ ಆ.24ರ ಪ್ರತಿಭಟನೆಗೆ ಲಾರಿ ಮಾಲಕರ ಸಂಘ ಬೆಂಬಲ

Update: 2024-08-21 15:54 GMT

ಉಡುಪಿ, ಆ.21: ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿಯಲ್ಲಿ ಕಂಚಿನಡ್ಕ ಬಳಿ ನಿರ್ಮಿಸಲುದ್ದೇಶಿಸಿರುವ ಅವೈಜ್ಞಾನಿಕ ಟೋಲ್‌ಗೇಟ್ ವಿರುದ್ಧ ಇದೇ ಆ.24ರಂದು ನಡೆಯಲಿರುವ ಸಾರ್ವಜನಿಕರು ಹಾಗೂ ಗ್ರಾಮಸ್ಥರ ಪ್ರತಿಭಟನೆಗೆ ಜಿಲ್ಲಾ ಲಾರಿ, ಟೆಂಪೋ ಮಾಲಕರ ಸಂಘಟನೆಗಳ ಒಕ್ಕೂಟ ಸಂಪೂರ್ಣ ಬೆಂಬಲ ನೀಡಲಿದೆ ಎಂದು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.

ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹೆಜಮಾಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ಗೇಟ್ ಒಂದು ಹಲವು ವರ್ಷಗಳಿಂದ ಕಾರ್ಯಾಚ ರಿಸುತ್ತಿವೆ. ಇದೀಗ ಕೇವಲ ಐದಾರು ಕಿ.ಮೀ. ದೂರದಲ್ಲಿ ರಾಜ್ಯ ಹೆದ್ದಾರಿಯ ಕಂಚಿನಡ್ಕದಲ್ಲಿ ಮತ್ತೊಂದು ಟೋಲ್‌ಗೇಟ್ ತೆರೆದು ಜನರನ್ನು ಸುಲಿಗೆ ಮಾಡುವು ದನ್ನು ಎಷ್ಟು ಮಾತ್ರಕ್ಕೂ ಸಹಿಸಲು ಸಾದ್ಯವಿಲ್ಲ ಎಂದರು.

ಜಿಲ್ಲೆಯ ಲಾರಿ-ಟೆಂಪೊ ಮಾಲಕರು, ಕಟ್ಟಡ ಸಾಮಗ್ರಿ ಸಾಗಾಟದ ಲಾರಿ ಮಾಲಕರು ಚಾಲಕರು ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೋನಾ, ಬಿಡಿ ಭಾಗಗಳ ಬೆಲೆ ಹೆಚ್ಚಳ, ಪ್ರಾಕೃತಿಕ ವಿಕೋಪಗಳಿಂದ ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದ್ದು, ಇದೀಗ ಸರಕಾರ ಟೋಲ್ ಹೆಸರಿನಲ್ಲಿ ಅವರಿಂದ ಹಣದ ಸುಲಿಗೆಗೆ ಮುಂದಾಗುವ ಮೂಲಕ ಗಾಯದ ಮೇಲೆ ಬರೆ ಎಳೆಯುತ್ತಿದೆ ಎಂದು ಅವರು ದೂರಿದರು.

ಸಂಕಷ್ಟದಲ್ಲಿರುವ ವಾಹನಗಳ ಮಾಲಕರು ಯಾವುದೇ ಕಾರಣಕ್ಕೂ ಟೋಲ್‌ಗೇಟ್ ಅಳವಡಿಕೆಗೆ ಅವಕಾಶ ನೀಡುವುದಿಲ್ಲ. ಸರಕಾರಕ್ಕೆ ಹಣದ ಅಗತ್ಯಬಿದ್ದಲ್ಲಿ ನಾವು ನಮ್ಮ ರಕ್ತ ಬೇಕಾದರೆ ಕೊಡುತ್ತೇನೆ ಆದರೆ ಟೋಲ್‌ನ್ನು ನೀಡುವುದಿಲ್ಲ ಎಂದು ರಾಘವೇಂದ್ರ ಶೆಟ್ಟಿ ನುಡಿದರು.

ಆದ್ದರಿಂದ ಆ.24ರಂದು ಸುಹಾಸ್ ಹೆಗ್ಡೆ ನೇತೃತ್ವದಲ್ಲಿ ನಡೆಯಲಿರುವ ಗ್ರಾಮಸ್ಥರ ಹಾಗೂ ಸಾರ್ವಜನಿಕರ ಬೃಹತ್ ಪ್ರತಿಭಟನೆಗೆ ನಾವು ಸಂಪೂರ್ಣ ಬೆಂಬಲ ನೀಡುವುದಲ್ಲದೇ ಅದರಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಲಾರಿ ಟೆಂಪೋ ಮಾಲಕರ ಸಂಘಟನೆಗಳ ರಮೇಶ ಶೆಟ್ಟಿ, ಸತೀಶ್ ಪೂಜಾರಿ, ವಿಜಯಕುಮಾರ್ ಬ್ರಹ್ಮಾವರ ಹಾಗೂ ಮನೋಹರ ಕುಂದರ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News