ಮಲ್ಪೆ: ನೀರಿಗಿಳಿದ 62 ಟನ್ ಸಾಮರ್ಥ್ಯದ ‘ಓಷಿಯನ್ ಗ್ರೇಸ್’ ಟಗ್

Update: 2023-09-20 12:33 GMT

ಮಲ್ಪೆ: ಕೇಂದ್ರದ ಬಂದರು, ಶಿಪ್ಪಿಂಗ್ ಹಾಗೂ ವಾಟರ್‌ವೇ ಸಚಿವಾಲಯದ ಆಡಳಿತಕ್ಕೊಳಪಟ್ಟ ಕೊಚ್ಚಿನ್ ಶಿಪ್‌ಯಾರ್ಡ್ ಲಿ.ನ ಸಹಸಂಸ್ಥೆ ಮಲ್ಪೆಯ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ (ಯುಸಿಎಸ್‌ಎಲ್) ನಿರ್ಮಾಣಗೊಂಡ ಚೊಚ್ಚಲ 62 ಟನ್ ಸಾಮರ್ಥ್ಯದ ಬೊಲಾರ್ಡ್ ಫುಲ್ ಟಗ್ (ಯುವೈ 161) ಇಂದು ಲೋಕಾರ್ಪಣೆಗೊಂಡಿತು.

ಮಲ್ಪೆ ಬಂದರಿನೊಳಗಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಡೆದ ಟಗ್‌ನ ನೀರಿಗಿಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಕೊಚ್ಚಿನ್ ಶಿಪ್ ಯಾರ್ಡ್‌ನ ಚಯರ್‌ಮೆನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮಧು ಎಸ್.ನಾಯರ್, ಮುಂಬರುವ ದಿನಗಳಲ್ಲಿ ಇಲ್ಲಿ ಎಲೆಕ್ಟ್ರಿಕ್ ಟಗ್‌ಗಳನ್ನು ಸಹ ನಿರ್ಮಿಸುವ ಯೋಜನೆ ಇದ್ದು, ಇದೊಂದು ದೇಶದ ಪ್ರಮುಖ ‘ಟಗ್ ಹಬ್’ ಆಗಿ ಅಭಿವೃದ್ಧಿಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಧಾನಮಂತ್ರಿಯವರ ಆತ್ಮ ನಿರ್ಭರ ಭಾರತದ ನಿಟ್ಟಿನಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕಾಗಿ ಗ್ರೀನ್ ಟಗ್ ನಿರ್ಮಾಣ ಮಾಡುವ ದೇಶದ ನಾಲ್ಕು ಪ್ರಮುಖ ಬಂದರುಗಳಲ್ಲಿ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್ ಸಹ ಒಂದಾಗಲಿದೆ ಎಂದು ಮಧು ನಾಯರ್ ನುಡಿದರು.

ಮಲ್ಪೆಯ ಉಡುಪಿ ಕೊಚಿನ್ ಶಿಪ್ ಯಾರ್ಡ್‌ನಲ್ಲಿ ನಿರ್ಮಾಣಗೊಂಡ 62ಟನ್ ಬೊಲಾರ್ಡ್ ಫುಲ್‌ಟಗ್‌ನ್ನು 54 ಕೋಟಿ ರೂ. ವೆಚ್ಚದಲ್ಲಿ ಅದಾನಿ ಶಿಪ್ಪಿಂಗ್ ಆ್ಯಂಡ್ ಹಾರ್ಬರ್ ಸರ್ವಿಸ್‌ನ ಮೆ.ಓಶಿಯನ್ ಸ್ಪಾರ್ಕಲ್ ಲಿಮಿಟೆಡ್‌ಗಾಗಿ ನಿರ್ಮಿಸಲಾಗಿದೆ. ಇದರ ಸಿಒಒ ಸಂಜಯ್‌ಕುಮಾರ್ ಕೇವಲರಮಣಿ ಅವರು ಟಗ್‌ನ್ನು ಸ್ವೀಕರಿಸಿದರು. ರಿತು ಸಂಜಯ್‌ ಕುಮಾರ್ ಕೇವಲರಮಣಿ ಅವರು ಟಗ್‌ಗೆ ‘ಓಷಿಯನ್ ಗ್ರೇಸ್’ ಎಂದು ನಾಮಕರಣ ಮಾಡಿದರು.

ಗತಿ ಶಕ್ತಿ, ಸಾಗರಮಾಲಾ ಮತ್ತಿತರ ಯೋಜನೆಗಳಿಂದ ಬಂದರುಗಳು ಭಾರತೀಯ ಆರ್ಥಿಕತೆಯ ಚಾಲನಾ ಶಕ್ತಿಯಾಗಿ ಭವಿಷ್ಯದಲ್ಲಿ ಮಹತ್ವದ ಪಾತ್ರ ವಹಿಸಲಿವೆ ಎಂದ ಮಧು ನಾಯರ್, ಜಗತ್ತಿನ ಭೂಪಟದಲ್ಲಿ ಗುರುತಿಸಲ್ಪಟ್ಟ ಉಡುಪಿಯನ್ನು ಮುಂದಿನ ದಿನಗಳಲ್ಲಿ ಟಗ್ ಹಬ್ ಆಗಿ ಪರಿವರ್ತಿಸುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಯುಸಿಎಸ್‌ಎಲ್ ಮುಂಚೂಣಿ ಯಲ್ಲಿರಲಿದೆ ಎಂದರು.

ಸಂಸ್ಥೆಯ ಸಿಎಸ್‌ಆರ್ ನಿಧಿಯನ್ನು ಉಡುಪಿ ಪರಿಸರದ ಪ್ರಾಥಮಿಕ ಆರೋಗ್ಯ ಕೇಂದ್ರ, ಶಾಲಾ ಕಟ್ಟಡ, ಎನ್‌ಜಿಒ ಯೋಜನೆಗಳಿಗೆ ನೀಡಲಾಗುವುದು. ಸದ್ಯ 400 ಮಂದಿ ಉದ್ಯೋಗಿಗಳನ್ನು ಒಳಗೊಂಡ ಯುಸಿಎಸ್‌ಎಲ್‌ನಲ್ಲಿ ಶೇ. 60ರಷ್ಟು ಸ್ಥಳೀಯರಿದ್ದು, ಅವಕಾಶಗಳು ಹೆಚ್ಚೆಚ್ಚು ದೊರೆಯುವಂತೆ 2024ರಲ್ಲಿ ಸಂಸ್ಥೆಯ ಉದ್ಯೋಗಿಗಳ ಸಂಖ್ಯೆಯನ್ನು 800ರಿಂದ 900ಕ್ಕೆ ಹೆಚ್ಚಿಸಲಾಗುವುದು ಎಂದರು.

ಕೇಂದ್ರ ಸರಕಾರ ಅಧೀನದ ಕೊಚ್ಚಿನ್ ಶಿಪ್‌ಯಾರ್ಡ್ ದೇಶದಾದ್ಯಂತ ಏಳು ಶಿಪ್ ಯಾರ್ಡ್‌ಗಳನ್ನು ಹೊಂದಿದ್ದು ದೇಶ ನಿರ್ಮಾಣದಲ್ಲಿ ತೊಡಗಿದೆ ಎಂದು ಮಧು ಎಸ್.ನಾಯರ್ ತಿಳಿಸಿದರು.

ಉಡುಪಿ ಸಿಎಸ್‌ಎಲ್ ನಿರ್ದೇಶಕ ಬಿಜೊಯ್ ಭಾಸ್ಕರ್ ಪ್ರಾಸ್ತಾವಿಕ ಮಾತುಗಳಲ್ಲಿ ಈ ಹಿಂದೆ ಮಲ್ಪೆಯಲ್ಲಿದ್ದ ಟೆಬ್ಮಾ ಶಿಪ್‌ಯಾರ್ಡ್ ನ್ನು 2021 ಫೆಬ್ರವರಿಯಲ್ಲಿ ಸಿಎಸ್‌ಎಲ್ ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತಿದೆ. ಅದೇ ಆಗಸ್ಟ್‌ನಿಂದ ಕಾರ್ಯಾರಂಭ ಮಾಡಿರುವ ಯುಸಿಎಸ್‌ಎಲ್, ಸೀಮಿತ ಅವಧಿಯಲ್ಲಿ 10 ಮೀನುಗಾರಿಕಾ ಬೋಟು ಗಳನ್ನು ನಿರ್ಮಿಸಿ ಆಂಧ್ರ, ಕೇರಳ ರಾಜ್ಯಗಳಿಗೆ ಸರ್ವಸನ್ನದ್ಧ ಸ್ಥಿತಿಯಲ್ಲಿ ಒದಗಿಸಲಾಗಿದೆ. ಇನ್ನೂ 10ಬೋಟುಗಳ ನಿರ್ಮಾಣ ಪ್ರಗತಿಯಲ್ಲಿದೆ ಎಂದರು.

ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಮಾತನಾಡಿ, ಮುಂಬೈಯಂತೆ ಉಡುಪಿಯ ಕಡಲತೀರದಲ್ಲೂ ವಾಣಿಜ್ಯ ಚಟುವಟಿಕೆಗಳಿಗೆ ಉತ್ತಮ ಅವಕಾಶವಿದೆ. ಸಂಸ್ಥೆ ತನ್ನ ಸಿಎಸ್‌ಆರ್ ನಿಧಿಯನ್ನು ಶಾಲಾ ಕಟ್ಟಡ ಸಹಿತ ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಒದಗಿಸುವಂತೆ ತಿಳಿಸಿದರು.

ಕಾರ್ಯಕ್ರಮದಲ್ಲಿ ಆದರ್ಶ ಆಸ್ಪತ್ರೆಯ ಚಂದ್ರಶೇಖರ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್, ಉಡುಪಿ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಅಂಡಾರು ದೇವಿಪ್ರಸಾದ್ ಶೆಟ್ಟಿ, ಕರಾವಳಿ ಕಾವಲು ಪಡೆ ಎಸ್ಪಿ ಅಂಶು ಕುಮಾರ್, ರಿಜಿಸ್ಟ್ರಾರ್ ಆಫ್ ಶಿಪ್ಪಿಂಗ್ ಸಿ. ಕೆ. ಶಮ್ಮಿ, ಕೆನಡಾದ ಲಾರೆನ್ ಬೆಸ್ಟ್ ಉಪಸ್ಥಿತರಿದ್ದರು.

ಉಡುಪಿ ಸಿಎಸ್‌ಎಲ್ ಸಿಇಒ ಹರಿಕುಮಾರ್ ಎ. ಸ್ವಾಗತಿಸಿದರು. ಶಂಕರ್ ನಟರಾಜ್ ವಂದಿಸಿ ಸವಿತಾ ಕರ್ಕೇರ ಕಾರ್ಯಕ್ರಮ ನಿರೂಪಿಸಿದರು.








 


 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News