ಮಲ್ಪೆ: ಕರಾವಳಿ ಭದ್ರತಾ ತರಬೇತಿ ಸಮಾರೋಪ
ಉಡುಪಿ: ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ ೪ನೇ ತಂಡದ ತರಬೇತಿಯ ಸಮಾರೋಪ ಸಮಾರಂಭ ಶನಿವಾರ ಮಲ್ಪೆಯ ಸಿಎಸ್‌ಪಿ ಕೇಂದ್ರ ಕಛೇರಿಯಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಅರುಣ್ ಕೆ. ಮಾತನಾಡಿ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ತರಬೇತಿ ಅವಧಿಯಲ್ಲಿ ಪಡೆದ ಮಾಹಿತಿಗಳನ್ನು ತಮ್ಮ ದಿನನಿತ್ಯದ ಕರ್ತವ್ಯ ನಿರ್ವಹಣೆ ಸಂದರ್ಭದಲ್ಲಿ ಅಳವಡಿಸಿಕೊಂಡಾಗ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತರಬೇತಿ ಸಂಸ್ಥೆಯ ಪ್ರಾಂಶುಪಾಲ ಹಾಗೂ ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಅಂಶುಕುಮಾರ್ ಮಾತನಾಡಿ, ಅಧಿಕಾರಿಗಳ ಮಾರ್ಗದರ್ಶನದಲ್ಲಿ ೪ನೇ ತಂಡದ ತರಬೇತಿ ಯನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿದ್ದು, ತರಬೇತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಎಸ್‌ಪಿ ಮಲ್ಪೆ ಠಾಣೆಯ ಮಹಿಳಾ ಪಿಎಸ್‌ಐ ವೈಲೆಟ್ ಫೆಮೀನಾ ಹಾಗೂ ದ್ವಿತಿಯ ಸ್ಥಾನ ಪಡೆದ ಸಿಎಸ್‌ಪಿ ಗಂಗೊಳ್ಳಿ ಠಾಣೆಯ ಪೊಲೀಸ್ ಸಿಬ್ಬಂದಿ ಚೇತನ್ ಎಸ್ ಮತ್ತು ವಾಸಂತಿ ಇವರನ್ನು ಗೌರವಿಸಲಾಯಿತು.
ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಸ್ವಾಗತಿಸಿ, ಉಪ-ನಿರೀಕ್ಷಕಿ ಸುಜಾತ ನಿರೂಪಿಸಿ, ಪೊಲೀಸ್ ಉಪಾಧೀಕ್ಷಕ ಟಿ.ಎಸ್ ಸುಲ್ಫಿ ವಂದಿಸಿದರು.