ಮಲ್ಪೆ: ಯುಸಿಎಸ್‌ಎಲ್ 62 ಟನ್ ಟಗ್ ಅದಾನಿ ಸಮೂಹಕ್ಕೆ ಹಸ್ತಾಂತರ

Update: 2023-12-01 16:03 GMT

ಮಲ್ಪೆ, ಡಿ.1: ಕೇಂದ್ರದ ಬಂದರು, ಶಿಪ್ಪಿಂಗ್ ಹಾಗೂ ವಾಟರ್‌ವೇ ಸಚಿವಾಲಯ ಆಡಳಿತಕ್ಕೊಳಪಟ್ಟ ಕೊಚ್ಚಿನ್‌ಶಿಪ್ ಯಾರ್ಡ್‌ನ ಸಹಸಂಸ್ಥೆ ಮಲ್ಪೆಯ ಉಡುಪಿ ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ (ಯುಸಿಎಸ್‌ಎಲ್) ನಿರ್ಮಾಣ ಗೊಂಡ ಚೊಚ್ಚಲ 62 ಟನ್ ಸಾಮರ್ಥ್ಯದ ಬೊಲಾರ್ಡ್ ಫುಲ್ ಟಗ್‌ನ್ನು ಅದಾನಿ ಸಮೂಹದ ಅದಾನಿ ಶಿಪ್ಪಿಂಗ್ ಆ್ಯಂಡ್ ಹಾರ್ಬರ್ ಸವಿರ್ಸಸ್‌ನ ಓಷಿಯನ್ ಸ್ಪಾರ್ಕಲ್ ಲಿಮಿಟೆಡ್‌ಗೆ ಹಸ್ತಾಂತರಿಸಲಾಗಿದೆ.

ಮಲ್ಪೆ ಬಂದರಿನೊಳಗೆ ಕಾರ್ಯಾಚರಿಸುತ್ತಿರುವ ಉಡುಪಿ ಕೊಚ್ಚಿನ್ ಶಿಪ್‌ಯಾರ್ಡ್ ಕಳೆದ ಸೆ.20ರಂದು ಎರಡೂ ಸಂಸ್ಥೆ ಗಳ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ 62 ಟನ್ ಸಾಮರ್ಥ್ಯದ ಈ ಟಗ್‌ನ್ನು ಲೋಕಾರ್ಪಣೆಗೊಳಿಸಿ ನೀರಿಗಿಳಿಸಲಾಗಿತ್ತು.

ಭಾರತದ ಅಗ್ರಗಣ್ಯ ಶಿಪ್ಪಿಂಗ್ ಕಂಪೆನಿಯಾಗಿರುವ ಅದಾನಿ ಹಾರ್ಬರ್ ಸರ್ವಿಸಸ್ ಹಾಗೂ ಓಷಿಯನ್ ಸ್ಪಾರ್ಕಲ್ ಲಿಮಿಟೆಡ್ 100ಕ್ಕೂ ಅಧಿಕ ಇಂಥ ಟಗ್‌ಗಳನ್ನು ಹೊಂದಿದ್ದು, ದೇಶದ ಅತ್ಯಂತ ದೊಡ್ಡ ಟಗ್ ಹೊಂದಿರುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ.

ದೇಶದಲ್ಲಿ ಬಂದರು, ಶಿಪ್ಪಿಂಗ್ ಸಚಿವಾಲಯ ನಿರ್ದಿಷ್ಟಪಡಿಸಿದ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ತಯಾರಾದ ಪ್ರಥಮ ಟಗ್ ಇದಾಗಿದೆ. ಇದನ್ನು ಕೇಂದ್ರ ಸರಕಾರದ ಆತ್ಮನಿರ್ಭರ ಭಾರತ್ ಯೋಜನೆಯಡಿ ಕೊಚ್ಚಿನ್ ಶಿಪ್‌ಯಾರ್ಡ್ ನಿರ್ಮಿಸಿತ್ತು. ಸಚಿವಾಲಯದ ಗ್ರಿನ್ ಟಗ್ ನಿರ್ಮಾಣ ಕಾರ್ಯಕ್ರಮದಡಿಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಿಸುವ ಹಸಿರು ಟಗ್ ನಿರ್ಮಾಣದ ಒಪ್ಪಂದಕ್ಕೆ ಯುಸಿಎಸ್‌ಎಲ್ ಹಾಗೂ ಅದಾನಿ ಸಮೂಹ ಸಹಿ ಹಾಕಿದ್ದು, ಇದರ ಆಧಾರದಲ್ಲಿ ಟಗ್ ನಿರ್ಮಾಣವಾಗಿದೆ.

ಅದಾನಿ ಶಿಪ್ಪಿಂಗ್ ಆ್ಯಂಡ್ ಹಾರ್ಬರ್ ಸರ್ವಿಸಸ್ ಹಾಗೂ ಓಷಿಯನ್ ಸ್ಪಾರ್ಕಲ್ ಲಿಮಿಟೆಡ್‌ನ ಮುಖ್ಯ ನಿರ್ವಹಣಾಧಿಕಾರಿ ಸಂಜಯ್ ಕುಮಾರ್ ಕೇವಲರಮಣಿ, ಯುಸಿಎಸ್‌ಎಲ್‌ನ ಸಿಇಓ ಹರಿಕುಮಾರ್ ಎ., ಸಿಎಸ್‌ಎಲ್‌ನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಮಧು ಎ.ನಾಯರ್ ಅವರ ಸಮ್ಮುಖದಲ್ಲಿ ಟಗ್‌ನ ಹಸ್ತಾಂತರಕ್ಕೆ ಅಧಿಕೃತವಾಗಿ ಸಹಿಹಾಕಿದ್ದು, ಟಗ್‌ನ ಮಾಲಕತ್ವದ ದಾಖಲೆಯ ವಿನಿಮಯ ಮಾಡಿಕೊಂಡರು.

ಸಿಎಸ್‌ಎಲ್, 2020ರ ಸೆಪ್ಟಂಬರ್ ತಿಂಗಳಲ್ಲಿ ಮಲ್ಪೆಯಲ್ಲಿದ್ದ ಟೆಬ್ಮಾ ಶಿಪ್‌ಯಾರ್ಡ್‌ನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಅಭಿವೃದ್ಧಿ ಪಡಿಸುತ್ತಿದೆ. ಯುಸಿಎಸ್‌ಎಲ್ ಇದೀಗ ತಲಾ 70 ಟನ್ ಸಾಮರ್ಥ್ಯದ ಬೊಲಾರ್ಡ್ ಪುಲ್ ಟಗ್ ನಿರ್ಮಾಣದಲ್ಲಿ ನಿರತವಾಗಿದೆ. ಇವುಗಳನ್ನು ಪೊಲೆಸ್ಟರ್ ಮೆರಿಟೈಮ್ ಲಿ.ಗಾಗಿ ನಿರ್ಮಿಸುತ್ತಿದೆ. ಅಲ್ಲದೇ ನಾರ್ವೆಯ ವಿಲ್ಸನ್ ಎಎಸ್‌ಎಗಾಗಿ ಆರು 3800 ಟಿಡಿಡಬ್ಲ್ಯು ಫ್ಯೂಚರ್ ಫ್ರೂಪ್ ಡ್ರೈ ಕಾರ್ಗೋ ವೆಸೆಲ್ಸ್‌ಗೆ ಬೇಡಿಕೆಯನ್ನು ಪಡೆದಿದೆ.

ಇದರೊಂದಿಗೆ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ (ಪಿಎಂಎಂಎಸ್‌ವೈ) ಯಡಿ ಆಳಸಮುದ್ರ ಮೀನುಗಾರಿಕೆಗಾಗಿ ಬೋಟುಗಳ ನಿರ್ಮಾಣ ಕಾರ್ಯವೂ ಇಲ್ಲಿನ ಶಿಪ್‌ಯಾರ್ಡ್‌ನಲ್ಲಿ ನಡೆಯುತ್ತಿದೆ ಎಂದು ಯುಸಿಎಸ್‌ಎಲ್‌ನ ಪತ್ರಿಕಾ ಪ್ರಕಟಣೆ ತಿಳಿಸಿದೆ.




Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News