ಮಣಿಪಾಲ: ಹಿಂದಕ್ಕೆ ಚಲಿಸಿ ಗ್ಯಾರೇಜ್ ಮೇಲೆ ಬಿದ್ದ ಗ್ರಾನೈಟ್ ತುಂಬಿದ ಲಾರಿ

Update: 2024-11-09 12:23 GMT

ಮಣಿಪಾಲ, ನ.9: ಗ್ರಾನೈಟ್ ತುಂಬಿದ ಲಾರಿಯೊಂದು ಹಿಂದಕ್ಕೆ ಚಲಿಸಿ ಗ್ಯಾರೇಜಿನ ಮೇಲೆ ಬಿದ್ದ ಪರಿಣಾಮ ನಾಲ್ಕೈದು ವಾಹನಗಳಿಗೆ ಜಖಂ ಆಗಿದ್ದು, ಅಂಗವಿಕಲರೊಬ್ಬರು ಸಣ್ಣಪುಟ್ಟ ಗಾಯಗೊಂಡ ಘಟನೆ ಇಂದು ಬೆಳಗ್ಗೆ ಕೆಳಪರ್ಕಳ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಮಣಿಪಾಲ ಮಾರ್ಗವಾಗಿ ಹೆರ್ಗ ಕಡೆ ಹೋಗುತ್ತಿದ್ದ ಗ್ರಾನೈಟ್ ತುಂಬಿದ ಲಾರಿಯು ಏರಿಯಲ್ಲಿ ಮುಂದಕ್ಕೆ ಸಾಗಲು ಸಾಧ್ಯವಾಗದೆ ಹಿಮ್ಮುಖವಾಗಿ ಚಲಿಸಿತು. ಇದರಿಂದ ಚಾಲಕನ ನಿಯಂತ್ರಣ ತಪ್ಪಿದ ಲಾರಿಯು ಇಳಿ ಜಾರಿನಲ್ಲಿದ್ದ ಗಣಪತಿ ನಾಯಕ್ ಎಂಬವರ ಗ್ಯಾರೇಜಿನ ಮಾಡಿನ ಮೇಲೆ ಬಿತ್ತೆನ್ನಲಾಗಿದೆ.

ಈ ವೇಳೆ ಅಲ್ಲೇ ಕೆಲಸ ಮಾಡುತ್ತಿದ್ದ ಗಣಪತಿ ನಾಯಕ್ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾದರು. ಆದರೆ ತಮ್ಮ ಸ್ಕೂಟರ್ ದುರಸ್ತಿಗೆ ಬಂದಿದ್ದ ವಿಕಲಚೇತನ ಹೆರ್ಗ ನಿವಾಸಿ ಸರ್ವೋತ್ತಮ ಅಮೀನ್ ಓಡಲು ಆಗದೆ ಸಣ್ಣಪುಟ್ಟ ಗಾಯಗೊಂಡರೆನ್ನಲಾಗಿದೆ.

ಗ್ರಾನೈಟ್‌ಗಳು ಲಾರಿಯಿಂದ  ಜಾರಿ ಬಿದಿದ್ದು, ಇದರಿಂದ ಸರ್ವೋತ್ತಮ ನಾಯಕ್ ಅವರ ಸ್ಕೂಟರ್ ಸೇರಿದಂತೆ ಗ್ಯಾರೇಜಿನಲ್ಲಿ ದುರಸ್ತಿಗೆ ಬಂದ ನಾಲ್ಕೈದು ವಾಹನಗಳು ಜಖಂಗೊಂಡಿದೆ. ಅಲ್ಲದೆ ಗ್ಯಾರೇಜಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ.

ಇಲ್ಲಿನ ಅವೈಜ್ಞಾನಿಕ ಏರು ದಿಣ್ಣೆಯಿಂದಾಗಿ ಇಲ್ಲಿನ ಹೆಚ್ಚಿನ ಘನವಾಹನಗಳು ಹಿಂದಕ್ಕೆ ಚಲಿಸಿದ ಉದಾಹರಣೆಗಳಿವೆ. ನಾಲ್ಕೈದು ತಿಂಗಳ ಹಿಂದೆ ಉಡುಪಿಯ ಸಿಟಿ ಬಸ್ ಒಂದು ಕೂಡ ಹಿಂದಕ್ಕೆ ಚಲಿಸಿದ್ದು, ಯಾವುದೇ ಅಪಾಯ ಸಂಭವಿಸಿರಲಿಲ್ಲ. ವಾಹನ ಏರಲಾಗದೆ ಕ್ರೇನ್ ಮೂಲಕ ಅರ್ಧದಲ್ಲಿ ನಿಂತ ಲಾರಿಯನ್ನು ಮೇಲಕ್ಕೆ ಎತ್ತುವ ಪ್ರಕ್ರಿಯೆ ದಿನನಿತ್ಯ ನಡೆಯುತ್ತದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಸ್ಥಳೀಯ ಚಾಲಕ ವಿಕಾಸ್ ನಾಯ್ಕ್ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News