ಮಣಿಪಾಲ ಮ್ಯಾರಥಾನ್‌ನಲ್ಲಿ 20,000ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ

Update: 2025-02-09 21:10 IST
ಮಣಿಪಾಲ ಮ್ಯಾರಥಾನ್‌ನಲ್ಲಿ 20,000ಕ್ಕೂ ಅಧಿಕ ಸ್ಪರ್ಧಿಗಳು ಭಾಗಿ
  • whatsapp icon

ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ವತಿಯಿಂದ ವಿದ್ಯಾರ್ಥಿಗಳ ನೇತೃತ್ವದಲ್ಲಿ ಮಣಿಪಾಲದಲ್ಲಿ ಹಮ್ಮಿಕೊಳ್ಳಲಾದ ಮಣಿಪಾಲ ಮ್ಯಾರಥಾನ್‌ನ ಏಳನೇ ಅಧ್ಯಾಯಕ್ಕೆ ರವಿವಾರ ಬೆಳಗ್ಗೆ ಚಾಲನೆ ನೀಡಲಾಯಿತು. ಈ ಮ್ಯಾರಥಾನ್‌ನಲ್ಲಿ ಜಗತ್ತಿನ 20,000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

42 ಕಿ.ಮೀ. ಓಟಕ್ಕೆ ಐಸಿಐಸಿಐ ಬ್ಯಾಂಕಿನ ಕರ್ನಾಟಕ ವಲಯ ಮುಖ್ಯಸ್ಥ ಶಶಿಕುಮಾರ್ ನಾಯಕ್, 21ಕಿ.ಮೀ. ಓಟಕ್ಕೆ ಎಸ್‌ಬಿಐನ ಉಪ ಪ್ರಧಾನ ವ್ಯವಸ್ಥಾಪಕ ಅಲೋಕ್ ಕುಮಾರ್ ದ್ವಿವೇದಿ, 10ಕಿ.ಮೀ. ಓಟಕ್ಕೆ ಯುನೆಕ್ಟ್ಸ್ ಲರ್ನಿಂಗ್‌ನ ಮುಖ್ಯಸ್ಥ ಅಂಬ್ರೀಶ್ ಸಿನ್ಹಾ ಹಾಗೂ 5ಕಿ.ಮೀ. ಓಟಕ್ಕೆ ಬಾಬ್ಕಾರ್ಡ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ರವೀಂದ್ರ ರೈ ಚಾಲನೆ ನೀಡಿದರು.

ಮಾಹೆಯ ಪ್ರೊ ಚಾನ್ಸೆಲರ್ ಡಾ.ಎಚ್.ಎಸ್.ಬಲ್ಲಾಳ್ ಮಾತನಾಡಿ, ಮಣಿಪಾಲ ಮ್ಯಾರಥಾನ್ ಕೇವಲ ಓಟಕ್ಕಿಂತ ಸ್ಥಿತಿಸ್ಥಾಪಕತ್ವ, ಹೊಸತನೆ ಮತ್ತು ಸಮುದಾಯ ಮನೋಭಾವದ ಆಚರಣೆಯಾಗಿದೆ. ಆರೋಗ್ಯ ಮತ್ತು ಸದೃಢತೆಗಾಗಿ ತಂತ್ರಜ್ಞಾನದ ಅಳವಡಿಕೆ ಎಂಬುದು ಈ ವರ್ಷದ ಘೋಷ ವಾಕ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ, ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾ ಕುಮಾರಿ, ಮಾಹೆ ಟ್ರಸ್ಟ್‌ನ ಅಧ್ಯಕ್ಷ ಡಾ.ರಂಜನ್ ಪೈ, ಮಾಹೆ ವೈಸ್-ಚಾನ್ಸೆಲರ್ ಲೆಫ್ಟಿನೆಂಟ್ ಜನರಲ್ ಡಾ.ಎಂ.ಡಿ.ವೆಂಕಟೇಶ್. ವಿಧಾನ ಪರಿತ್ ಸದಸ್ಯ ಭೋಜೇಗೌಡ, ಉಡುಪಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಶಾಸಕ ಕೆ.ರಘುಪತಿ ಭಟ್, ಪೌರಾಯುಕ್ತ ಉದಯ ಕುಮಾರ್ ಶೆಟ್ಟಿ, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಮ್ಯಾರಥಾನ್‌ನಲ್ಲಿ ಜಪಾನ್, ಅಮೆರಿಕ, ಇಂಗ್ಲೆಂಡ್ ಫ್ರಾನ್ಸ್, ಜರ್ಮನಿ, ಟರ್ಕಿ, ಇಥಿಯೋಪಿಯಾ, ಕಿನ್ಯಾ, ನಮೀಬಿಯಾ, ಉಗಾಂಡ, ಮಲಾವಿ, ಕಾಂಗೋ, ಘಾನಾ, ಸುಡಾನ್, ಅಬುಧಾಬಿ, ಯುಎಇ ಹಾಗೂ ಆಸ್ಟ್ರೇಲಿಯಾ ದೇಶಗಳ 100ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಭಾಗವಹಿಸಿ ದ್ದರು. ಬೆಂಗಳೂರಿನ ಸಮರ್ಥನಂ ಟ್ರಸ್ಟ್‌ನಿಂದ 300ಕ್ಕೂ ಅಧಿಕ ದೃಷ್ಟಿಹೀನರು ಹಾಗೂ 200ಕ್ಕೂ ಅಧಿಕ ಮಂದಿ ವಿಕಲಚೇತನರು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದ್ದರು.

ಮಣಿಪಾಲದ ಕೆಎಂಸಿ ಗ್ರೀನ್ಸ್‌ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್.ಟಿ. ಸಿದ್ಧಲಿಂಗಪ್ಪ, ವಿಧಾನ ಪರಿಷತ್ ಸದಸ್ಯ ಭೋಜೇಗೌಡ, ಡಾ.ಎಚ್.ಎಸ್. ಬಲ್ಲಾಳ್ ಮೊದಲಾದವರು ಉಪಸ್ಥಿತರಿದ್ದರು.

ವರ್ಚುವಲ್ ಓಟದಲ್ಲಿ 7000 ಸ್ಪರ್ಧಿಗಳು!

ಈ ವರ್ಷದ ಮ್ಯಾರಥಾನ್‌ನಲ್ಲಿ ಹೊಸ ಸೇರ್ಪಡೆ ಎಂಬಂತೆ ಮಣಿಪಾಲ್ ಗ್ಲೋಬಲ್ ವರ್ಚುವಲ್ 5ಕಿ.ಮೀ. ರನ್ ಓಟವನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

ಜಗತ್ತಿನ ಯಾವುದೇ ದೇಶದ ಕ್ರೀಡಾಪಟುಗಳು ಕೂಡ ತಾವಿರುವ ಸ್ಥಳದಲ್ಲೇ ಐದು ಕಿ.ಮೀ. ದೂರ ಓಡಿ ದಾಖಲೆ ಸಹಿತ ಆ್ಯಪ್‌ನಲ್ಲಿ ವಿವರಗಳನ್ನು ಅಪ್ಲೋಡ್ ಮಾಡಿದರೆ ಅವರಿಗೆ ಇ-ಪ್ರಮಾಣಪತ್ರ, ಡಿಜಿಟಲ್ ಬಿಬ್ ಹಾಗೂ ವಿಶೇಷ ಮಣಿಪಾಲ್ ಮ್ಯಾರಥಾನ್ ಸರಕುಗಳನ್ನು ಕಳುಹಿಸಿಕೊಡಲಾಗುತ್ತದೆ. ಇದರಲ್ಲಿ 7000ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.

ಸಚಿನ್ ಪೂಜಾರಿ- ಲೆಶಾರ್ಜ್ ಚಾಂಪಿಯನ್

42 ಕಿಮೀ ದೂರದ ಪೂರ್ಣ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಸಚಿನ್ ಪೂಜಾರಿ ಪ್ರಥಮ, ನಂಜುಂಡಪ್ಪಎಂ. ದ್ವಿತೀಯ, ಚೆರುಯೋಟ್ ಡ್ಯಾನಿಯಲ್ ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ ಲೆಶಾರ್ಜ್ ಸೇನೈಟ್ ಕೆಫೆಲೆಗನ್ ಪ್ರಥಮ, ಆಸಾ ಟಿಪಿ ದ್ವಿತೀಯ, ಶಕುಂತಲಾ ದೇವಿ ತೃತೀಯ ಸ್ಥಾನ ಗೆದ್ದುಕೊಂಡರು.

ವಿವಿಧ ವಿಭಾಗಗಳಲ್ಲಿನ ವಿಜೇತರ ವಿವರ ಇಂತಿದೆ. ಅರ್ಧ ಮ್ಯಾರಥಾನ್ (21ಕಿಮೀ) ಪುರುಷರ ವಿಭಾಗ: ಪ್ರ- ಅಂಕುಶ್ ಹಕ್ಕೆ, ದ್ವಿ- ಕಿಪ್ಟೂ ಅಬ್ರಹಾಂ, ತೃ- ಶಿವಮ್ ಯಾದವ್. ಮಹಿಳೆಯರ ವಿಭಾಗ: ಪ್ರ- ಕೆ.ಎಂ.ಲಕ್ಷ್ಮೀ, ದ್ವಿ- ನಂದಿನಿ ಜಿ., ತೃ- ಮೋಲ್ಲೇಶ್ವರಿ.

10 ಕಿಮೀ ಓಟದ ಪುರುಷರ ವಿಭಾಗ: ಪ್ರ-ಲವ್ ಚೌಧರಿ, ದ್ವಿ- ಎ.ಆರ್. ರೋಹಿತ್, ತೃ- ಅಂಕಿತ್ ಇಂಡೋಲಿಯಾ. ಮಹಿಳೆಯರ ವಿಭಾಗ: ಪ್ರ- ಸ್ಮಿತಾ ಡಿ.ಆರ್., ದ್ವಿ- ನೀತು ಕುಮಾರಿ, ತೃ- ಶ್ರೇಯಾ ಎಂ.




 


Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News