ಮಣಿಪಾಲ: ರಾಷ್ಟ್ರೀಯ ಕ್ರೀಡಾ ದಿನಾಚರಣೆ; ಅ.ಭಾ.ವಿ.ವಿ. ಚಿನ್ನದ ಪದಕ ವಿಜೇತ ಅಖಿಲೇಶ್ ಕೋಟಗೆ ಸನ್ಮಾನ
ಉಡುಪಿ : ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ (ಮಾಹೆ)ನ ಸ್ಪೋರ್ಟ್ಸ್ ಕೌನ್ಸಿಲ್ ಮಣಿಪಾಲ, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್, ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಟಿ.ಸಿ.ಎ.ಉಡುಪಿ ಇವುಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಹಾಗೂ ಅಥ್ಲೆಟಿಕ್ಸ್ ಮತ್ತು ಕ್ರಿಕೆಟ್‌ನ ಕೋಚ್‌ಗಳಿಗೆ ರಿಫ್ರೆಶರ್ ಕ್ಲಿನಿಕ್‌ನ ಉದ್ಘಾಟನೆ ಮಣಿಪಾಲ ಕೆಎಂಸಿಯ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, ಆರೋಗ್ಯ ಪೂರ್ಣ ಹಾಗೂ ಸಕ್ರಿಯ ಸಮಾಜದ ನಿರ್ಮಾಣದಲ್ಲಿ ಕ್ರೀಡೆಯ ಮಹತ್ವ ವನ್ನು ವಿವರಿಸಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಿಸಿಸಿಐನ ಹಿರಿಯ ಅಧಿಕಾರಿ ಹಾಗೂ ಕೋಚ್ ಅರುಣ್ ಭಾರದ್ವಾಜ್, ಶಿಸ್ತು, ತಂಡಕ್ಕೆ ನಿಷ್ಠೆ ಹಾಗೂ ಹೋರಾಟದ ಕೆಚ್ಚನ್ನು ಕ್ರೀಡೆಯ ಮೂಲಕ ವೃದ್ಧಿಸಿಕೊಳ್ಳಬಹುದು. ತಾನು ಏನೇ ಸಾಧನೆ ಮಾಡಿದ್ದರೂ ಅದು ಕ್ರಿಕೆಟ್‌ನಿಂದ ಮಾತ್ರ ಎಂದರು.
ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್‌ನ ಕಾರ್ಯದರ್ಶಿ ರಾಜವೇಲು, ಉಡುಪಿ ಟಿಸಿಎ ಅಧ್ಯಕ್ಷ ಗೌತಮ್ ಶೆಟ್ಟಿ ಹಾಗೂ ಮಣಿಪಾಲ ಕೆಎಂಸಿಯ ಡೀನ್ ಡಾ.ಪದ್ಮರಾಜ್ ಹೆಗ್ಡೆ ಮಾತನಾಡಿದರು. ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್. ಬಲ್ಲಾಳ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾ ದಿನಾಚರಣೆಯ ಅಂಗವಾಗಿ ಅಖಿಲ ಭಾರತ ಅಂತರ ವಿವಿ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ ಟ್ರಿಪಲ್ ಜಂಪ್‌ನಲ್ಲಿ ಚಿನ್ನದ ಪದಕ ದೊಂದಿಗೆ ಹಲವು ಪ್ರಶಸ್ತಿಗಳನ್ನು ಜಯಿಸಿರುವ ಅವಿನಾಶ್ ಕೋಟ ಅವರನ್ನು ನಗದು ಬಹುಮಾನದೊಂದಿಗೆ ಸನ್ಮಾನಿಸಲಾಯಿತು.
ಒರಿಸ್ಸಾದಲ್ಲಿ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾಗ ಗಾಯಗೊಂಡ ಅಖಿಲೇಶ್ ಕೋಟ ಚಿಕಿತ್ಸೆ ಪಡೆಯು ತ್ತಿರುವ ಕಾರಣ ಅವರ ಪರವಾಗಿ ತಾಯಿ ಸುಮನ ಪ್ರಶಸ್ತಿಯನ್ನು ಸ್ವೀಕರಿಸಿದರು. ಕುಂದಾಪುರ ಹಾಗೂ ಕೋಟಗಳಲ್ಲಿ ಪ್ರಾರಂಭಿಕ ವಿದ್ಯಾಭ್ಯಾಸ ನಡೆಸಿರುವ ಅಖಿಲೇಶ್ ಕೋಟ, ಟ್ರಿಪಲ್ ಜಂಪ್‌ನಲ್ಲಿ ಸದ್ಯ ಭಾರತದ ಅಗ್ರಗಣ್ಯ ಅಥ್ಲೀಟ್ ಎಂದು ಉಡುಪಿ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಡಾ.ಕೆಂಪರಾಜ್, ಅಖಿಲೇಶ್‌ರನ್ನು ಪರಿಚಯಿಸುತ್ತಾ ತಿಳಿಸಿದರು.
ಮಾಹೆ ಸ್ಪೋರ್ಟ್ಸ್ ಕೌನ್ಸಿಲ್‌ನ ಕಾರ್ಯದರ್ಶಿ ಡಾ.ವಿನೋದ್ ನಾಯಕ್ ಅತಿಥಿಗಳನ್ನು ಸ್ವಾಗತಿಸಿದರು. ಮೋನಿಕಾ ಜಾಧವ್ ವಂದಿಸಿದರೆ, ರೀನಾ ಶರೀನ್ ಪ್ರವೀನ್ ಕಾರ್ಯಕ್ರಮ ನಿರೂಪಿಸಿದರು.