ಮಣಿಪಾಲ: ಅಪಘಾತ ರಭಸಕ್ಕೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮಧ್ಯೆ ಸಿಲುಕಿದ ಕಾರು!
Update: 2024-08-27 14:07 IST

ಮಣಿಪಾಲ, ಆ.27: ಎರಡು ಕಾರುಗಳ ಮಧ್ಯೆ ಸಂಭವಿಸಿದ ಅಪಘಾತದ ಪರಿಣಾಮ ಒಂದು ಕಾರು ರಸ್ತೆ ಬದಿಯಲ್ಲಿದ್ದ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಮಧ್ಯೆ ಸಿಲುಕಿರುವ ಘಟನೆ ಕೆಳ ಪರ್ಕಳ ಎಂಬಲ್ಲಿ ಇಂದು ಮಧ್ಯಾಹ್ನ ವೇಳೆ ನಡೆದಿರುವ ಬಗ್ಗೆ ವರದಿಯಾಗಿದೆ.
ಮಣಿಪಾಲದಿಂದ ಪರ್ಕಳ ಕಡೆ ಹೋಗುತ್ತಿದ್ದ ಕಾರೊಂದು ಎದುರಿನಿಂದ ಬಂದ ಕಾರಿಗೆ ಢಿಕ್ಕಿ ಹೊಡೆದ ಪರಿಣಾಮ ಎರಡು ಕಾರುಗಳು ರಸ್ತೆ ಬದಿಯಲ್ಲಿದ್ದ ಟ್ರಾನ್ಸ್‌ಫಾರ್ಮರ್ ಕಡೆ ನುಗ್ಗಿವೆ. ಅದರಲ್ಲಿ ಒಂದು ಕಾರು ಟ್ರಾನ್ಸ್‌ಫಾರ್ಮರ್‌ನ ಎರಡು ಕಂಬಗಳ ಮಧ್ಯೆ ಸಿಲುಕಿಕೊಂಡಿದೆ.
ಇದರಿಂದ ಟ್ರಾನ್ಸ್‌ಫಾರ್ಮರಿಗೂ ಹಾನಿಯಾಗಿದೆ. ಅಪಘಾತದಿಂದ ಯಾರಿಗೂ ಗಾಯಳಾದ ಬಗ್ಗೆ ವರದಿಯಾಗಿಲ್ಲ. ಸ್ಥಳಕ್ಕೆ ಮಣಿಪಾಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.