ರಾಜ್ಯಪಾಲರಿಂದ ಪ್ರಜಾಪ್ರಭುತ್ವದ ಕಗ್ಗೊಲೆ: ವಿನಯ ಕುಮಾರ್ ಸೊರಕೆ
ಉಡುಪಿ, ಆ.19: ಮೂಡ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿದ ರಾಜ್ಯಪಾಲರ ಕ್ರಮವನ್ನು ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ನೇತೃತ್ವದಲ್ಲಿ ಸೋಮವಾರ ಉಡುಪಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಬ್ರಹ್ಮಗಿರಿ ಕಾಂಗ್ರೆಸ್ ಭವನದಿಂದ ಆರಂಭಗೊಂಡ ಬೃಹತ್ ಮೆರವಣಿಗೆ ಅಜ್ಜರಕಾಡು, ಜೋಡುಕಟ್ಟೆ, ಲಯನ್ಸ್ ಸರ್ಕಲ್ ವರೆಗೆ ತೆರಳಿ ಅದೇ ಮಾರ್ಗ ದಲ್ಲಿ ವಾಪಾಸ್ಸು ಬಂದು ಬ್ರಹ್ಮಗಿರಿಯ ಆಸ್ಕರ್ ಫೆರ್ನಾಂಡಿಸ್ ಸರ್ಕಲ್‌ನಲ್ಲಿ ಸಮಾಪ್ತಿ ಗೊಂಡಿತ್ತು. ಮೆರವಣಿಗೆಯಲ್ಲಿ ಸಹಸ್ರಾರು ಮಂದಿ ಪಾಲ್ಗೊಂಡಿದ್ದು, ಗೋಬ್ಯಾಕ್ ರಾಜ್ಯಪಾಲ, ಬಿಜೆಪಿ ಪಕ್ಷದ ವಿರುದ್ಧ ಘೋಷಣೆಗಳನ್ನು ಕೂಗ ಲಾಯಿತು.
ಬಳಿಕ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖ್ಯಮಂತ್ರಿ ವಿರುದ್ಧ ಪ್ರಾಸಿಕ್ಯುಶನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯ ಪಾಲರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ. ಸಂವಿಧಾನದ ಎಲ್ಲ ಆಶಯವನ್ನು ಗಾಳಿಗೆ ತೂರಿ ಜನರಿಂದ ಆಯ್ಕೆಯಾದ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರ 10ವರ್ಷಗಳ ಸಾಧನೆ ಅಂದರೆ ಶಾಸಕರನ್ನು ಖರೀದಿಸಿ ಬಿಜೆಪಿಯೇತರ ಸರಕಾರ ವನ್ನು ಉರುಳಿಸಿರುವುದು. ಇದೀಗ ರಾಜ್ಯ ಕಾಂಗ್ರೆಸ್ ಸರಕಾರವನ್ನು ಕೂಡ ಪಿತೂರಿ ನಡೆಸಿ ಶಿಥಿಲಗೊಳಿ ಸುವ ಯತ್ನ ವನ್ನು ಕೇಂದ್ರ ಸರಕಾರ ಮಾಡುತ್ತಿದೆ. ಈ ಮೂಲಕ ರಾಜ್ಯಪಾಲರ ಭವನ ಬಿಜೆಪಿ ಕಚೇರಿಯಾಗಿ ಮಾರ್ಪಟ್ಟಿದೆ ಎಂದು ಅವರು ದೂರಿದರು.
ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ರಾಜ್ಯಪಾಲರನ್ನು ಬಳಸಿಕೊಂಡು ರಾಜ್ಯ ಸರಕಾರ ವನ್ನು ಅಸ್ಥಿರಗೊಳಿಸಲು ಬಿಜೆಪಿ ಹೊರಟಿದೆ. ರಾಜ್ಯಪಾಲರು ಅಮಿತ್ ಶಾನ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಕುಮಾರ್ ಸ್ವಾಮಿ, ಮುರುಗೇಶ್ ನಿರಾನಿ ವಿರುದ್ಧ ತನಿಖಾ ಸಂಸ್ಥೆಗಳೇ ಪ್ರಾಸಿ ಕ್ಯೂಷನ್‌ಗೆ ಅನುಮತಿ ಕೋರಿ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಕೊಳ್ಳದ ರಾಜ್ಯಪಾಲರು ಏಕಾಏಕಿ ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿ ಕೊಟ್ಟ ದೂರಿಗೆ ಸ್ಪಂದಿಸಿ ಅನುಮತಿ ಕೊಟ್ಟಿ ದ್ದಾರೆ. ಇದು ರಾಜ್ಯಪಾಲರು ಸಂವಿಧಾನದ ಹುದ್ದೆಗೆ ಮಾಡಿ ರುವ ಅಪಚಾರ ಎಂದು ಟೀಕಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಗೋಪಾಲ ಪೂಜಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಕಾರ್ಯಾಧ್ಯಕ್ಷ ಕಿಶನ್ ಹೆಗ್ಡೆ ಕೊಳ್ಕೆಬೈಲು, ಮುಖಂಡರಾದ ಪ್ರಸಾದ್‌ರಾಜ್ ಕಾಂಚನ್, ಉದಯ ಕುಮಾರ್ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ವರೋನಿಕಾ ಕರ್ನೆಲಿಯೋ, ರಮೇಶ್ ಕಾಂಚನ್, ಪ್ರಖ್ಯಾತ್ ಶೆಟ್ಟಿ, ಹರೀಶ್ ಕಿಣಿ, ಇಸ್ಮಾಯಿಲ್ ಆತ್ರಾಡಿ, ಭುಜಂಗ ಶೆಟ್ಟಿ, ಡಾ.ಸುನೀತಾ ಶೆಟ್ಟಿ, ಜ್ಯೋತಿ ಹೆಬ್ಬಾರ್, ದಿನೇಶ್ ಪುತ್ರನ್, ರಾಜು ಪೂಜಾರಿ, ಸರ್ಫುದ್ದೀನ್ ಶೇಖ್, ದಿನಕರ ಹೇರೂರು ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾಧಿಕಾರಿಗೆ ಮನವಿ
ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿ ಕಚೇರಿಯವರೆಗೆ ವಾಹನ ರ್ಯಾಲಿಯ ಮೂಲಕ ತೆರಳಿ, ರಾಜ್ಯಪಾಲರ ಧೋರಣೆ ಖಂಡಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಮನವಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ಮಂಜುನಾಥ ಭಂಡಾರಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ವಿನಯ ಕುಮಾರ್ ಸೊರಕೆ, ಅಶೋಕ್ ಕುಮಾರ್ ಕೊಡವೂರು ಉಪಸ್ಥಿತರಿದ್ದರು.