ಮೋಸ್ಟ್ ವಾಂಟೆಡ್ ನಕ್ಸಲ್ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಮೃತ್ಯು : ಐಜಿಪಿ ರೂಪಾ

Update: 2024-11-19 11:12 GMT

ಉಡುಪಿ : ಹೆಬ್ರಿ ತಾಲೂಕಿನ ಕಬ್ಬಿನಾಲೆ ಸಮೀಪದ ಪೀತಬೈಲು ಎಂಬಲ್ಲಿ ನಡೆಸಿದ ಎನ್‌ಕೌಂಟರ್‌ನಲ್ಲಿ ಮೋಸ್ಟ ವಾಂಟೆಡ್ ನಕ್ಸಲ್ ಹೆಬ್ರಿ ತಾಲೂಕಿನ ಕೂಡ್ಲುವಿನ ವಿಕ್ರಂ ಗೌಡ(46) ಮೃತಪಟ್ಟಿದ್ದಾರೆ ಎಂದು ರಾಜ್ಯ ಆಂತರಿಕ ಭದ್ರತಾ ವಿಭಾಗದ ಐಜಿಪಿ ರೂಪಾ.ಡಿ. ತಿಳಿಸಿದ್ದಾರೆ.

ಮಂಗಳವಾರ ಎನ್‌ಕೌಂಟರ್‌ ನಡೆದ ಸ್ಥಳಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʼಪೊಲೀಸರು ಹಾಗೂ ನಕ್ಸಲ್‌‌ರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಇದರಲ್ಲಿ ವಿಕ್ರಂ ಗೌಡ ಎನ್‌ಕೌಂಟರ್‌ನಲ್ಲಿ ಹತರಾಗಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆʼ ಎಂದರು.

ʼವಿಕ್ರಂ ಗೌಡ ವಿರುದ್ದ ಕೇರಳದಲ್ಲಿ 19 ಸೇರಿದಂತೆ ಕೊಲೆ ಸುಲಿಗೆ ಸಂಬಂಧ ಒಟ್ಟು 61 ಪ್ರಕರಣಗಳು ದಾಖಲಾಗಿವೆ. ನಕ್ಸಲ್‌ ನಿಗ್ರಹ ಪಡೆ ಈ ಕಾರ್ಯಾಚರಣೆ ‌ನಡೆಸಿದೆ‌. ನಕ್ಸಲ್ ನಿಗ್ರಹ ಪಡೆಯ ಪೊಲೀಸ್ ಅಧೀಕ್ಷಕ ಜಿತೇಂದ್ರ ದಯಾಮಾ ನೇತೃತ್ವದಲ್ಲಿ ಅರಣ್ಯದಲ್ಲಿ ಸತತ 10 ದಿನಗಳಿಂದ ನಿರಂತರ ಕೂಂಬಿಂಗ್ ಕಾರ್ಯಾಚರಣೆ ನಡೆಸಲಾಗಿದೆ. ಈ ಸಂಬಂಧ ನ‌.10ರಿಂದ ನಿರಂತರ ಪ್ರಯತ್ನ ಜಾರಿಯಲ್ಲಿತ್ತು. ನಕ್ಸಲರ ಬಗ್ಗೆ ಮಾಹಿತೆ ಕಲೆ ಹಾಕಿ ಯಶಸ್ವಿ ಕಾರ್ಯಾಚರಣೆ ನಡೆಸಿದ್ದೇವೆʼ ಎಂದರು.

ನಮ್ಮ ಅಂತರಿಕ ವಿಭಾಗದ ಡಿಜಿಪಿ ಗಣಮೋಹನ್ ಇತ್ತೀಚೆಗೆ ಅರಣ್ಯದಲ್ಲಿ ಕೂಂಬಿಂಗ್ ಕಾರ್ಯಾಚರಣೆಯಲ್ಲಿ ಭಾಗವಹಿಸಿ ಮಾರ್ಗದರ್ಶನ ನೀಡಿದ್ದರು. ಈ ಕಾರ್ಯಾಚರಣೆ ಗುಪ್ತಚರ ವಿಭಾಗ ಹಾಗೂ ಉಡುಪಿ ಜಿಲ್ಲಾ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ನಡೆದಿದೆ. ಇದು ಎಎನ್‌ಎಫ್‌ನ ಮುಕುಟಕ್ಕೆ ದೊರೆತ ಗರಿ ಎಂದು ಅವರು ತಿಳಿಸಿದರು

ʼಎಎನ್‌ಎಫ್ 2005 ಮೇ ತಿಂಗಳಿನಲ್ಲಿ ಸ್ಥಾಪನೆಗೊಂಡಿದ್ದು, ಆ ಬಳಿಕ ನಡೆದ ನಾಲ್ಕನೇ ಎನ್‌ಕೌಂಟರ್ ಇದಾಗಿದೆ. ವಿಕ್ರಂ ಗೌಡ ಜತೆಗೆ ಇನ್ನು ಐದಾರು ಮಂದಿ ಇದ್ದಾರೆ. ಅವರು ಹೇಗೆ ಮುಂದೆ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ನಮ್ಮ ಕೂಂಬಿಂಗ್ ಕಾರ್ಯಾಚರಣೆ ಮುಂದೆ ಕೂಡಾ ನಿರಂತರವಾಗಿ ಮುಂದುವರಿಸಯುತ್ತದೆʼ ಎಂದು ಅವರು ಹೇಳಿದರು.

ಈ ಕಾರ್ಯಾಚರಣೆ ಗೆ ಬೆಂಗಳೂರಿನ ಕೆ‌ಎಸ್‌ಐಎಸ್‌ಎಫ್ ನ 75 ಮತ್ತು ಶಿವಮೊಗ್ಗದಿಂದ 25 ಮಂದಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು. ಈ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ವಿಕ್ರಂ ಗೌಡ ನಕ್ಸಲರ ಕಬಾನಿ ದಳಂ 2 ಎಂಬ ತಂಡವನ್ನು ಮುನ್ನಡೆಸುತ್ತಿದ್ದರು ಎಂದು ಅವರು ಮಾಹಿತಿ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News