ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ನಿರ್ಲಕ್ಷ್ಯ| ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲು: ಉಡುಪಿ ಡಿಸಿ

Update: 2024-10-10 12:55 GMT

ಉಡುಪಿ, ಅ.10: ಕರಾವಳಿ ಬೈಪಾಸ್‌ನಿಂದ ಮಣಿಪಾಲ ಮೂಲಕ ಸಾಗುವ ರಾಷ್ಟ್ರೀಯ ಹೆದ್ದಾರಿ 169 ಎಯ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿಯಲ್ಲಿ ತೀರಾ ನಿರ್ಲಕ್ಷ್ಯ ವಹಿಸಿದ್ದು, ಇದರಿಂದ ಸಂಭವಿಸಿದ ಅಪಘಾತಗಳಿಂದ ಅನೇಕ ಸಾವು-ನೋವುಗಳಿಗೆ ಕಾರಣರಾಗಿರುವ ಕಾಮಗಾರಿಯ ಗುತ್ತಿಗೆದಾರರು, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಸೇರಿದಂತೆ ವಿವಿಧ ಪ್ರಕರಣಗಳನ್ನು ದಾಖಲಿಸುವಂತೆ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಸಂಬಂಧಿತ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ರಾಷ್ಟ್ರೀಯ ಹೆದ್ದಾರಿ 169ಎಯಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮಗಾರಿಯ ಪ್ರಗತಿ ಕುರಿತು ಚರ್ಚಿಸಲು ಕರೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮಲ್ಪೆ- ತೀರ್ಥಹಳ್ಳಿ ನಡುವಿನ ರಾಷ್ಟ್ರೀಯ ಹೆದ್ದಾರಿ 169 ಎ ಚತುಷ್ಪಥ ಕಾಮಗಾರಿ ಕಳೆದ ಕೆಲವು ವರ್ಷಗಳಿಂದ ನಿಧಾನ ಗತಿಯಲ್ಲಿ ನಡೆಯುತ್ತಿದೆ. ಇಂದ್ರಾಳಿಯಲ್ಲಿರುವ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬದಿಂದಾಗಿ ಮಣಿಪಾಲವನ್ನು ಸಂಪರ್ಕಿಸುವ ಇಕ್ಕಟ್ಟಾಗಿರುವ ರಸ್ತೆಯಲ್ಲಿ ಕಳೆದ ಎರಡು ವರ್ಷಗಳಿಂದ ಹಲವು ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಹಲವರು ಬಲಿಯಾಗಿದ್ದಾರೆ. ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಕಾರಣವಾಗಿದ್ದು, ರಸ್ತೆ ಅಪಘಾತಕ್ಕೆ ಕಾರಣಕರ್ತರಾದ ರೈಲ್ವೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರು ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಇಂದ್ರಾಳಿ ಸೇತುವೆ ಕಾಮಗಾರಿಯ ವಿಳಂಬದಿಂದಾಗಿ 2023ನೇ ಸಾಲಿನಲ್ಲಿ 8 ಅಪಘಾತ ಪ್ರಕರಣಗಳು ಸಂಭವಿಸಿದ್ದು ಒಬ್ಬ ಮೃತಪಟ್ಟರೆ, 7 ಪ್ರಕರಣಗಳಲ್ಲಿ ಹಲವರಿಗೆ ತೀವ್ರ ತರಹದ ಗಾಯ ಹಾಗೂ ಸಾಧಾರಣ ಗಾಯ ವಾಗಿದೆ. 2024ನೇ ಸಾಲಿನಲ್ಲಿ 10 ಪ್ರಕರಣಗಳು ವರದಿಯಾಗಿದ್ದು, ಎರಡು ಪ್ರತ್ಯೇಕ ಅಪಘಾತದಲ್ಲಿ ಇಬ್ಬರು ಮೃತಪಟ್ಟಿದ್ದರೆ, ಉಳಿದ 8 ಪ್ರಕರಣಗಳಲ್ಲಿ 10 ಮಂದಿ ತೀವ್ರ ತರಹದ ಹಾಗೂ ಸಾಮಾನ್ಯ ಗಾಯಗಳಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇವುಗಳಿಗೆಲ್ಲಾ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಭಿಯಂತರರು ಕಾಮಗಾರಿಯಲ್ಲಿ ತೋರಿದ ನಿರ್ಲಕ್ಷ್ಯವೇ ಕಾರಣವಾಗಿದೆ. ಇವರು ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿರುವುದಕ್ಕೆ ಸೂಕ್ತ ಕ್ರಮಕ್ಕಾಗಿ ಕೇಂದ್ರ ಸಚಿವಾಲಯದ ಕಾರ್ಯಾಲಯಕ್ಕೆ ಪತ್ರ ಬರೆಯುವುದಾಗಿ ಡಿಸಿ ತಿಳಿಸಿದರು.

ಇಂದ್ರಾಳಿ ಮೇಲ್ಸೇತುವೆ ಕಾಮಗಾರಿಯನ್ನು 2018-19ನೇ ಸಾಲಿನಲ್ಲಿಯೇ ಕೈಗೊಳ್ಳಲು ನಿರ್ಧರಿಸಿ, ಕಾಮಗಾರಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು. ಆದರೆ ಅಧಿಕಾರಿಗಳ ನಿರ್ಲಕ್ಷ್ಯ, ಸಮನ್ವಯದ ಕೊರತೆ ಯಿಂದಾಗಿ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ. ಈ ಸಂಬಂಧ ಅಭಿಯಂತರರಿಗೆ ಅನೇಕ ಬಾರಿ ಸಭೆಗಳನ್ನು ಕರೆದು ಕಟ್ಟುನಿಟ್ಟಿನ ಸೂಚನೆಗಳನ್ನು, ಎಚ್ಚರಿಕೆಗಳನ್ನು ನೀಡಲಾಗಿತ್ತು. ಆದರೂ ಕಾಮಗಾರಿಯಲ್ಲಿ ವಿಳಂಬ ಮಾಡುತ್ತಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ, ಮುಂದಿನ ನವೆಂಬರ್ 10ರ ಒಳಗೆ ಕಾಮಗಾರಿಯನ್ನು ಪೂರ್ಣಗೊಳಿಸಬೇಕು ಎಂದು ಖಡಕ್ ಸೂಚನೆ ನೀಡಿದರು.

ಇಂದ್ರಾಳಿ ಮೇಲ್ಸೇತುವೆ ನಿರ್ಮಾಣಗೊಳ್ಳುತ್ತಿರುವ ಕಬ್ಬಿಣದ ವೆಲ್ಡಿಂಗ್ ಕಾಮಗಾರಿಯ ಜೊತೆ ಜೊತೆಯಲ್ಲಿಯೇ ಅವುಗಳ ಗರ್ಡಲ್ಸ್ ಅನ್ನು ರೈಲ್ವೆ ಹಳಿಯ ಮೇಲೆ ನಿರ್ಮಾಣ ಮಾಡಲು ಗರ್ಡಲ್ಸ್‌ನ ಇನ್ಸ್‌ಪೆಕ್ಶನ್, ಅವುಗಳ ಬೇರಿಂಗ್ ಅಳವಡಿಸಿ ಚಾಲನೆ ಮಾಡುವುದು, ಅಳವಡಿಸುವ ಸಮಯದಲ್ಲಿ ರೈಲುಗಳ ಸಂಚಾರ ತಡೆಯುವುದು, ಒಪ್ಪಿಗೆ ಪಡೆಯುವುದನ್ನು ಸಹ ಏಕಕಾಲ ದಲ್ಲಿ ಮಾಡಬೇಕೆಂದು ಸೂಚನೆ ನೀಡಿದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ ಮಾತನಾಡಿ, ಕಾಮಗಾರಿಯ ವಿಳಂಬದ ಬಗ್ಗೆ ಅನೇಕ ಸಂಘ-ಸಂಸ್ಥೆಗಳು, ಸಾರ್ವನಿಕರು ಪ್ರತಿಭಟನೆಗಳನ್ನು ಮಾಡುತ್ತಿದ್ದಾರೆ. ಅದಕ್ಕೆ ಜಿಲ್ಲಾಡಳಿತವೇ ಉತ್ತರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳದಿ ರುವುದು ಇದಕ್ಕೆಲ್ಲಾ ಕಾರಣ ಎಂದರು.

ಸಂಬಂಧಪಟ್ಟ ಅಧಿಕಾರಿಗಳ ಅಸಮರ್ಪಕ ಕಾಮಗಾರಿಯಿಂದಾಗಿ ರಸ್ತೆ ಅಪಘಾತದಿಂದ ಮರಣ ಹಾಗೂ ಅನೇಕ ಜನರಿಗೆ ತೀವ್ರ ಹಾಗೂ ಸಾಮಾನ್ಯ ಸ್ವರೂಪದ ಗಾಯಗಳಾಗಿವೆ. ಇವು ನಿಮ್ಮ ಕುಟುಂಬದಲ್ಲಿ ಆಗಿದ್ದರೆ, ನೀವು ಸಹಿಸುತ್ತಿದ್ದೀರಾ ಎಂದು ಖಾರವಾಗಿ ಪ್ರಶ್ನಿಸಿದ ಎಸ್ಪಿ, ಕಾಮಗಾರಿ ವಿಳಂಬಕ್ಕೆ ಪ್ರತೀ ಸಭೆಯಲ್ಲೂ ಇಲ್ಲಸಲ್ಲದ ಕಾರಣ ಹೇಳುವುದು ಸರಿ ಯಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಇತ್ತೀಚೆಗೆ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಅಭಿಯಂತರರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳನ್ನು ಆರೋಪಿಗಳಾಗಿ ಮಾಡುವುದರ ಜೊತೆಗೆ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್, ಕೊಂಕಣ ರೈಲ್ವೆಯ ಸೀನೀಯರ್ ಇಂಜಿನಿಯರ್ ಗೋಕುಲ್‌ ದಾಸ್, ಶೃಂಗೇರಿ- ಚಿಕ್ಕಮಗಳೂರು ರಾಷ್ಟ್ರೀಯ ಹೆದ್ದಾರಿ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಮಂಜುನಾಥ್, ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ಮತ್ತಿತರರು ಉಪಸ್ಥಿತರಿದ್ದರು.

"ಇಕ್ಕಟ್ಟಾಗಿರುವ ರಸ್ತೆಯಲ್ಲಿ ಕಳೆದೆರಡು ವರ್ಷಗಳಿಂದ ಹಲವು ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿದ್ದು, ಹಲವರು ಬಲಿಯಾಗಿದ್ದಾರೆ. ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆದಾರರೇ ಕಾರಣರಾಗಿದ್ದು, ರಸ್ತೆ ಅಪಘಾತಕ್ಕೆ ಕಾರಣ ಕರ್ತರಾದ ರೈಲ್ವೆ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಭಿಯಂತರರು ಹಾಗೂ ಗುತ್ತಿಗೆದಾರರ ಮೇಲೆ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಬೇಕು".

ಡಾ.ವಿದ್ಯಾಕುಮಾರಿ ಕೆ., ಜಿಲ್ಲಾಧಿಕಾರಿ ಉಡುಪಿ.

"ಇತ್ತೀಚೆಗೆ ನಡೆದ ರಸ್ತೆ ಅಪಘಾತ ಪ್ರಕರಣದಲ್ಲಿ ಗುತ್ತಿಗೆದಾರರು, ರಾಷ್ಟ್ರೀಯ ಹೆದ್ದಾರಿ ಅಭಿಯಂತರರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿ ಗಳನ್ನು ಆರೋಪಿಗಳಾಗಿ ಮಾಡುವುದರ ಜೊತೆಗೆ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು".

-ಡಾ.ಕೆ.ಅರುಣಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಡುಪಿ.






 


 


Tags:    

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News