ಹಿರಿಯ ವಿದ್ವಾಂಸ ಸಗ್ರಿ ರಾಘವೇಂದ್ರ ಉಪಾಧ್ಯಾಯ ನಿಧನ

Update: 2024-06-15 12:52 GMT

ಉಡುಪಿ, ಜೂ.15: ಮಾಧ್ವ ಸಮಾಜದ ಹಿರಿಯ ವಿದ್ವಾಂಸ, ಅಷ್ಟಮಠಗಳ ಆಸ್ಥಾನ ವಿದ್ವಾಂಸರಾಗಿದ್ದ ಸಗ್ರಿ ರಾಘವೇಂದ್ರ ಉಪಾಧ್ಯಾಯ (72) ಅವರು ಇಂದು ಮುಂಜಾನೆ ಬೆಂಗಳೂರಿನಲ್ಲಿ ನಿಧನರಾದರು.ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಶುಕ್ರವಾರ ಸಂಜೆ ಬೆಂಗಳೂರಿನಲ್ಲಿ ಶ್ರೀಭಂಡಾರಕೇರಿ ಮಠದ ವತಿಯಿಂದ ನಡೆಯುತಿದ್ದ ಸರಣಿ ಪ್ರವಚನ ಮಾಲಿಕೆಯಲ್ಲಿ ಶ್ರೀರಾಮ ನಿರ್ಯಾಣದ ಕುರಿತು ಪ್ರವಚನ ಮಾಡುತಿದ್ದ ವೇಳೆ ಕುಸಿದು ಅಸ್ತಸ್ಥಗೊಂಡಿದ್ದ ರಾಘವೇಂದ್ರ ಉಪಾಧ್ಯಾಯರು ಶನಿವಾರ ಬೆಳಗ್ಗೆ ನಿಧರಾದರು.

ದ್ವೈತ ಸಿದ್ಧಾಂತದ ಮೇರು ವಿದ್ವಾಂಸರೂ, ಜನಪ್ರಿಯ ಪ್ರವಚನಕಾರರೂ, ಉತ್ತಮ ಲೇಖಕರೂ ಆಗಿದ್ದ ವಿದ್ವಾನ್ ಸಗ್ರಿ ರಾಘವೇಂದ್ರ ಉಪಾಧ್ಯಾಯರು ಸಂಪ್ರದಾಯ ನಿಷ್ಠರಾಗಿದ್ದು, ಜೀವನದುದ್ದಕ್ಕೂ ಅದನ್ನು ಪಾಲಿಸಿಕೊಂಡು ಬಂದಿದ್ದರು. ವಿದ್ವಾಂಸರ ಮನೆತನದಲ್ಲಿ ಜನಿಸಿದ್ದ ಉಪಾಧ್ಯಾಯರು ಉಡುಪಿಯ ಪ್ರಸಿದ್ಧ ಶ್ರೀಮನ್ನಧ್ವ ಸಿದ್ಧಾಂತ ಸಂಸ್ಕೃತ ಮಹಾ ವಿದ್ಯಾಲಯದಲ್ಲಿ (ಸಂಸ್ಕೃತ ಕಾಲೇಜು) ಸುದೀರ್ಘ ಅವಧಿಗೆ ದ್ವೈತ ವೇದಾಂತ ಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.

ಉಡುಪಿಯ ಹಲವು ಮಠಗಳಿಂದ ಪ್ರಕಟವಾಗುತ್ತಿದ್ದ ಸುಗುಣಮಾಲಾ, ಸರ್ವಮೂಲ ತತ್ತ್ವವಾದ ಮೊದಲಾದ ಮಾಸಪತ್ರಿಕೆಗಳಲ್ಲಿ ನಿರಂತರವಾಗಿ ಅಧ್ಯಾತ್ಮಿಕ ಚಿಂತನ ಅಂಕಣಗಳ ಮೂಲಕ ಪ್ರಸಿದ್ಧರಾಗಿದ್ದರು. ದ್ವೈತ ವೇದಾಂತ ಶಾಸ್ತ್ರದ ಹಳೆಯ ತಲೆಮಾರಿನ ವಿದ್ವಾಂಸರ ಮಹತ್ವದ ಕೊಂಡಿಯಾಗಿದ್ದ ಇವರು ಉಡುಪಿಯ ಶ್ರೀಕೃಷ್ಣ ಮಠವೂ ಸೇರಿದಂತೆ ನಾಡಿನ ಹೆಚ್ಚಿನೆಲ್ಲಾ ಮಾಧ್ವಮಠಗಳಿಂದ ವಿಶೇಷವಾಗಿ ಪುರಸ್ಕೃತರಾಗಿದ್ದರು.

ಸಂತಾಪ: ಸಗ್ರಿ ರಾಘವೇಂದ್ರ ಉಪಾಧ್ಯಾಯರ ನಿಧನಕ್ಕೆ ಪರ್ಯಾಯ ಶ್ರೀಪುತ್ತಿಗೆ, ಪಲಿಮಾರು ಮತ್ತು ಅದಮಾರು ಉಭಯಶ್ರೀಗಳು, ಪೇಜಾವರ, ಕಾಣಿಯೂರು, ಸೋದೆ, ಶೀರೂರು, ಮಂತ್ರಾಲಯ, ಭಂಡಾರಕೇರಿ, ಚಿತ್ರಾಪುರಶ್ರೀಗಳು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಯುವಬ್ರಾಹ್ಮಣ ಪರಿಷತ್, ಕರಂಬಳ್ಳಿ ವಲಯ ಬ್ರಾಹ್ಮಣ ಸಮಿತಿ, ತುಳು ಶಿವಳ್ಳಿ ಬ್ರಾಹಣ ಮಹಾಮಂಡಲ, ಉಡುಪಿ ಪುರೋಹಿತರ ಸಂಘ, ಸಂಸ್ಕೃತ ಮಹಾವಿದ್ಯಾಲಯದ ಆಡಳಿತ ಮಂಡಳಿ, ಮಾಜಿ ಶಾಸಕ ಕೆ ರಘುಪತಿ ಭಟ್, ಶಾಸಕ ಯಶ್ಪಾಲ್ ಸುವರ್ಣ ಸೇರಿ ಅನೇಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News