ದುಗ್ಗಣಬೆಟ್ಟು ಪರಿಸರದಲ್ಲಿ ಗುಬ್ಬು ವಾಸನೆ: ಜನಜೀವನಕ್ಕೆ ತೊಂದರೆ

Update: 2024-09-18 19:24 IST

ಉಡುಪಿ: ನಗರಸಭೆ ವ್ಯಾಪ್ತಿಯ ೮ನೇ ನಿಟ್ಟೂರು ವಾರ್ಡಿನ ದುಗ್ಗಣಬೆಟ್ಟು ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿನ ಚರಂಡಿ ಚೆಂಬರಿನಿಂದ ಕೊಳಚೆ ನೀರು ಹೊರಬಂದು, ರಸ್ತೆಯ ಉದ್ದಕ್ಕೂ ಹರಿಯುತ್ತಿದೆ. ಇದರಿಂದ ಇಲ್ಲಿ ನಾಗರಿಕ ಸಮಾಜ ಬದುಕು ಸಾಗಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಾರ್ವಜನಿಕರು ಪರಿಸರದಲ್ಲಿ ಹರಡಿರುವ ಗಬ್ಬು ವಾಸನೆಯಿಂದ ರಕ್ಷಿಸಿ ಕೊಳ್ಳಲು, ಮೂಗು ಮುಚ್ಚಿಕೊಂಡು, ಮಾಸ್ಕ್ ಧರಿಸಿ ಕೊಂಡು ತಿರುಗಾಡ ಬೇಕಾದ ಅಯ್ಯೋಮಯ ಪರಿಸ್ಥಿತಿ ಎದುರಾಗಿದೆ. ಪರಿಸರವು ಮಾರಕ ಸೊಳ್ಳೆಗಳ ಉತ್ಪತ್ತಿಸುವ ಕಾರ್ಖಾನೆಯಂತಾಗಿದೆ. ಜನರಿಗೆ ಡೆಂಗ್ಯೊ, ಮಲೇರಿಯಾ ಜ್ವರಬಾಧೆಗಳ ಭೀತಿ ಉಂಟಾಗಿದೆ. ಪರಿಸರದಲ್ಲಿ ಹರಡಿರುವ ವಾಕರಿಕೆ ತರಿಸುವ ಅಸಹ್ಯ ವಾಸನೆಯಿಂದಾಗಿ, ಆಹಾರವನ್ನೂ ಸೇವಿಸಲಾಗದ ಸ್ಥಿತಿಯಲ್ಲಿ ಸ್ಥಳೀಯರು ಇದ್ದಾರೆ.

ಸಾರ್ವಜನಿಕರು ಸಮಸ್ಯೆಯನ್ನು ಸಂಬಂಧಪಟ್ಟ ಜನಪ್ರತಿನಿಧಿ, ಅಧಿಕಾರಿ ವರ್ಗದವರಲ್ಲಿ ಹೇಳಿಕೊಂಡರೂ ಸ್ಪಂದಿಸದೆ ಮೌನರಾಗಿದ್ದಾರೆ. ಪರಿಸರದಲ್ಲಿ ಆರಾಧನ ಕೇಂದ್ರವಾಗಿರುವ ಕಾರ್ಣಿಕದ ನಾಗಬನವಿದೆ. ಇಲ್ಲಿ ಉದ್ಭವಿಸಿರುವ ಪರಿಸರ ಮಾಲಿನ್ಯದಿಂದಾಗಿ ಧಾರ್ಮಿಕ ಪಾವಿತ್ರ್ಯತೆಗೂ ಧಕ್ಕೆ ಬಂದಾಂತಾಗಿದೆ.

ಸಾರ್ವಜನಿಕರ ಅಳಲಿಗೆ ಆಡಳಿತ ವ್ಯವಸ್ಥೆಗಳಿಂದ ಪರಿಹಾರ ದೊರೆಯದೆ ಸ್ಥಳೀಯರು ಅಸಹಾಯಕರಾಗಿದ್ದಾರೆ. ಆದುದರಿಂದ ತಕ್ಷಣದಲ್ಲಿ ನಿಟ್ಟೂರಿನ ದುಗ್ಗಣಬೆಟ್ಟು ಪರಿಸರದಲ್ಲಿ ಉದ್ಭವಿಸಿರುವ ಸಮಸ್ಯೆಯನ್ನು ಪರಿಹರಿಸಬೇಕೆಂದು ಸಾಮಾಜಿಕ ಹೋರಾಟಗಾರ ನಿತ್ಯಾನಂದ ಒಳಕಾಡು ಆಗ್ರಹಿಸಿದ್ದಾರೆ. ತಡವರಿಸಿದರೆ ಸಾರ್ವಜನಿಕರ ಬೆಂಬಲದೊಂದಿಗೆ ರಾಜ್ಯದ ಮುಖ್ಯಮಂತ್ರಿಗಳ ಗಮನವನ್ನು ಸೆಳೆಯುವ ರೀತಿಯಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News