ಮಹಿಳಾ ಸಹಕಾರಿ ಸಂಘಗಳ ಸ್ಥಾಪನೆಗೆ ಹೆಚ್ಚಿನ ಒತ್ತು: ಜಯಕರ ಶೆಟ್ಟಿ ಇಂದ್ರಾಳಿ

Update: 2024-09-27 13:33 GMT

ಉಡುಪಿ, ಸೆ.27: ರಾಜ್ಯದಲ್ಲಿ ಸುಮಾರು 6391 ಮಹಿಳಾ ಸಹಕಾರಿ ಸಂಘ ಗಳಿದ್ದು, ಅದರಲ್ಲಿ 5600 ಸಹಕಾರಿ ಸಂಘ ಗಳು ಇಂದು ತನ್ನ ಸೇವೆಯನ್ನು ಸಲ್ಲಿಸುತ್ತಿವೆ. ಕರ್ನಾಟಕ ಸೇರಿದಂತೆ ಇಡೀ ರಾಷ್ಟ್ರದಲ್ಲಿ ಮಹಿಳಾ ಸಹರಕಾರಿ ಸಂಘಗಳ ಸ್ಥಾಪನೆಗೆ ಹೆಚ್ಚಿನ ಒತ್ತು ನೀಡುವ ಕಾರ್ಯ ನಡೆಯುತ್ತಿದೆ ಎಂದು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಸಹಕಾರ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘಗಳ ಅಧ್ಯಕ್ಷರು, ಆಡಳಿತ ಮಂಡಳಿ ಸದಸ್ಯರು ಹಾಗೂ ಮುಖ್ಯಕಾರ್ಯನಿರ್ವಾಹಕ ರಿಗೆ ಶುಕ್ರವಾರ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಂಗಣದಲ್ಲಿ ಆಯೋಜಿಸಲಾದ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.

ಸಹಕಾರಿ ಸಂಘಗಳನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಸರಕಾರಗಳು ಕಾರ್ಯ ಪ್ರವೃತ್ತವಾಗಿದೆ. ಸಹಕಾರಿ ಸಂಘಗಳ ಕಾರ್ಯ ಕೇವಲ ಠೇವಣಿ ಪಡೆದುಕೊಳ್ಳು ವುದು ಮಾತ್ರವಲ್ಲ. ಇಂದು ಸಹಕಾರಿ ಕ್ಷೇತ್ರಗಳಲ್ಲಿ ಎಲ್ಲ ವ್ಯವಹಾರಗಳನ್ನು ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಅವಕಾಶ ಕಲ್ಪಿಸಿದೆ. ಸಹಕಾರಿ ಅದರಂತೆ ಸಂಸ್ಥೆಗಳಿಗೆ ಎಲ್ಲ ರೀತಿಯ ವ್ಯವಹಾರಗಳನ್ನು ಮಾಡಬಹುದಾಗಿದೆ ಎಂದರು.

ತರಬೇತಿ ಎಂಬುದು ನಿತ್ಯ ನಿರಂತರ. ಕಾಯಿದೆ ತಿದ್ದುಪಡಿ ಹಾಗೂ ಸರಕಾರ ಬೇರೆ ಬೇರೆ ಆದೇಶಗಳನ್ನು ನೀಡುತ್ತಿರುವು ದರಿಂದ ಕಾಲಕಾಲಕ್ಕೆ ತರಬೇತಿ ಹಾಗೂ ಮಾಹಿತಿ ಪಡೆಯುವ ಮೂಲಕ ಸಹಕಾರಿ ಕ್ಷೇತ್ರದಲ್ಲಿ ನಾವು ಪರಿಪೂರ್ಣರಾಗ ಬೇಕಾಗಿದೆ. ಪ್ರತಿಯೊಂದು ಸಹಕಾರಿ ಸಂಘಗಳ ಆಡಳಿತ ಮಂಡಳಿಗಳಲ್ಲಿ ಇಬ್ಬರು ಮಹಿಳೆಯರು ಕಡ್ಡಾಯ ಇರಬೇಕು ಎಂಬ ಆದೇಶವನ್ನು ರಾಜ್ಯ ಸರಕಾರ ಆದೇಶ ಹೊರಡಿಸಿದೆ ಎಂದು ಅವರು ತಿಳಿಸಿದರು.

ಮುಖ್ಯ ಅತಿಥಿಯಾಗಿ ಉಡುಪಿ ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕಿ ಕೆ.ಆರ್.ಲಾವಣ್ಯ ಮಾತನಾಡಿ, ಸಹಕಾರಿ ಕ್ಷೇತ್ರದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಬಹಳ ಮುಖ್ಯವಾಗಿದೆ. ಅವರಿಗೆ ಸಹಕಾರಿ ಕಾನೂನು ಹಾಗೂ ತಿದ್ದುಪಡಿ ಕುರಿತು ಅಗತ್ಯ ಮಾಹಿತಿ ಇರಬೇಕಾಗುತ್ತದೆ. ಸಹಕಾರಿ ಸಂಘಗಳಿಗೆ ಚುನಾವಣೆ ನಡೆಯಲಿರುವುದರಿಂದ ಮುಂದಿನ ದಿನ ಗಳಲ್ಲಿ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು. ತರಬೇತಿಯಲ್ಲಿನ ಮಾಹಿತಿಯನ್ನು ತಿಳಿದುಕೊಂಡು ತಮ್ಮ ಪ್ರತಿನಿತ್ಯದ ಕಾರ್ಯಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷೆ ಇಂದು ರಮಾನಂದ ಭಟ್ ಶುಭ ಹಾರೈಸಿದರು. ಜಿಲ್ಲಾ ಸಹಕಾರ ಯೂನಿಯನ್‌ನ ಆಡಳಿತ ಮಂಡಳಿ ಸದಸ್ಯರಾದ ಕಟಪಾಡಿ ಶಂಕರ ಪೂಜಾರಿ, ಮನೋಜ್ ಎಸ್.ಕರ್ಕೇರ ಉಪಸ್ಥಿತರಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಮೂಡಬಿದಿರೆ ಕೆಐಸಿಎಂ ಉಪನ್ಯಾಸಕಿ ಬಿಂದು ಬಿ.ನಾಯರ್ ‘ಸಹಕಾರ ಮತ್ತು ಮಹಿಳಾ ನಾಯಕತ್ವ’ ಹಾಗೂ ಜಿಲ್ಲಾ ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆಯ ಉಪನಿರ್ದೇಶಕ ರೇಣುಕಾ ಜಿ. ‘ಸಹಕಾರ ಕಾನೂನಿನ ಇತ್ತೀಚಿನ ತಿದ್ದುಪಡಿ’ ಕುರಿತು ಉಪನ್ಯಾಸ ನೀಡಿದರು. ಯೂನಿಯನ್‌ನ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಅನುಷಾ ಕೋಟ್ಯಾನ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News