ಮನೆ ಮನೆ ಸಮೀಕ್ಷೆ ನಡೆಸಿ ಅರ್ಹರಿಗೆ ಬಿಪಿಎಲ್ ಕಾರ್ಡ್ ನೀಡಿ: ಸರಕಾರಕ್ಕೆ ಶಾಸಕ ಯಶಪಾಲ್ ಸುವರ್ಣ ಮನವಿ

Update: 2024-09-27 16:07 GMT

ಉಡುಪಿ, ಸೆ.26: ಅವೈಜ್ಞಾನಿಕವಾಗಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಖಜಾನೆಯಲ್ಲಿ ಹಣವಿಲ್ಲದೇ ದಿವಾಳಿ ಯಾಗಿರುವ ರಾಜ್ಯ ಸರಕಾರ, ಇದೀಗ ರಾಜ್ಯದ ಕಡುಬಡವರು, ಕೂಲಿಕಾರ್ಮಿಕರು ಹಾಗೂ ಸಣ್ಣ ರೈತರ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲು ಮುಂದಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಆರೋಪಿಸಿದ್ದಾರೆ.

ಇಂದು ಉಡುಪಿಯಲ್ಲಿ ಬಿಜೆಪಿಯ ರೈತ ಮೋರ್ಚಾ ವತಿಯಿಂದ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂಲಕ ಸರಕಾರ ಆರನೇ ಗ್ಯಾರಂಟಿ ಯೋಜನೆಯನ್ನು ತ್ವರಿತವಾಗಿ ಜಾರಿಗೊಳಿಸಲು ಮುಂದಾಗಿದೆ ಎಂದು ವ್ಯಂಗ್ಯವಾಡಿದರು.

ಸರಕಾರ ಈಗ ಪ್ರತಿ ಗ್ರಾಮದಲ್ಲಿ 400ಕ್ಕೂ ಹೆಚ್ಚು ಕುಟುಂಬಗಳ ಬಿಪಿಎಲ್ ಕಾರ್ಡುಗಳ ಪಟ್ಟಿಯನ್ನು ಪರಿಶೀಲನೆಗೆಂದು ಸ್ಥಳೀಯ ರೇಷನ್ ಅಂಗಡಿಗೆ ಕಳುಹಿಸಿದ್ದು, ಇದರ ಹಿಂದೆ ಬಡ ಜನರ ಬಿಪಿಎಲ್ ಕಾರ್ಡುಗಳನ್ನು ರದ್ದುಗೊಳಿಸುವ ಹುನ್ನಾರ ವಿದೆ ಎಂದರು.

ಉಡುಪಿ ಜಿಲ್ಲೆಯಲ್ಲಿ ಸುಮಾರು 40,000, ಉಡುಪಿ ತಲೂಕಿನಲ್ಲಿ 11,250 ಹಾಗೂ ಬ್ರಹ್ಮಾವರ ತಾಲೂಕಿನಲ್ಲಿ 5,700 ಬಿಪಿಎಲ್ ಪಡಿತರ ಚೀಟಿಗಳನ್ನು ರದ್ದುಪಡಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದವರು ದೂರಿದರು.

ಮನೆಮನೆಗೆ ತೆರಳಿ ಯಾವುದೇ ಸಮೀಕ್ಷೆ ನಡೆಸದೇ, ಪುನರ್‌ಪರಿಶೀಲನೆ ಮಾಡದೇ, ಕೇವಲ ಗ್ಯಾರಂಟಿ ಯೋಜನೆ ನೀಡಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಬಡವರ ಪಡಿತರ ಚೀಟಿಯನ್ನು ರದ್ದುಗೊಳಿಸಿದರೆ ಬಿಜೆಪಿ, ಸೌಲಭ್ಯ ವಂಚಿತ ಫಲಾನುಭವಿ ಗಳೊಂದಿಗೆ ಸೇರಿ ಉಗ್ರ ಪ್ರತಿಭಟನೆ ನಡೆಸುತ್ತೇವೆ ಎಂದವರು ಎಚ್ಚರಿಸಿದರು.

ಈ ಹೋರಾಟವನ್ನು ಬಿಜೆಪಿ ರಾಜ್ಯವ್ಯಾಪಿ ಹೋರಾಟವಾಗಿ ನಡೆಸಲಿದೆ ಎಂದ ಅವರು, ಕನಿಷ್ಠ ವೇತನ ಪಡೆಯುವ ಅಂಗನವಾಡಿ ಕಾರ್ಯಕರ್ತರಿಗೆ, ಶಾಲೆಯ ಅಡುಗೆ ಸಿಬ್ಬಂದಿಗಳಿಗೆ ವೇತನ ನೀಡದೇ, ಹೈನುಗಾರರಿಗೆ ಪ್ರೋತ್ಸಾಹ ಧನ ಬಿಡುಗಡೆ ಮಾಡದೇ, ಸರಕಾರಿ ಕಚೇರಿಯ ವಿದ್ಯುತ್ ಬಿಲ್ ಪಾವತಿಸಲಾಗದೇ ರಾಜ್ಯ ಸರಕಾರ ಸಂಪೂರ್ಣ ದಿವಾಳಿ ಯಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ಕಮಲಾಕರ ಹೆಬ್ಬಾರ್, ನಗರಸಭಾ ಅಧ್ಯಕ್ಷ ಪ್ರಭಾಕರ ಪೂಜಾರಿ, ಮೋರ್ಚಾದ ಪ್ರಧಾನ ಕಾರ್ಯದರ್ಶಿ ಪುಷ್ಪರಾಜ ಶೆಟ್ಟಿ, ಶ್ಯಾಮಪ್ರಸಾದ್ ಭಟ್, ದಿನೇಶ್ ಅಮೀನ್, ರಾಜು ಕುಲಾಲ್, ಗುರುನಂದನ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News