ಗುರಿ ಮುಟ್ಟುವ ತನಕ ವಿರಮಿಸದಿರಿ: ಮಾಜಿ ಕೇಂದ್ರ ಸಚಿವ ಬಿ. ಖೂಬಾ

Update: 2024-10-01 17:18 GMT

ಉಡುಪಿ, ಅ.1: ಪಕ್ಷದ ಸಂಘಟನಾತ್ಮಕ ಕಾರ್ಯ ಚಟುವಟಿಕೆಗಳಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲೇ ಮುಂಚೂಣಿಯಲ್ಲಿರುವ ಜಿಲ್ಲೆ. ಸದಸ್ಯತಾ ಅಭಿಯಾನದಲ್ಲಿ ಪಕ್ಷದ ರಾಷ್ಟ್ರ, ರಾಜ್ಯ ನಾಯಕರು ನಿಗದಿಪಡಿಸಿರುವ ಗುರಿ ಮುಟ್ಟುವ ತನಕ ವಿರಮಿ ಸದಿರಿ ಎಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಕರೆ ನೀಡಿದ್ದಾರೆ.

ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅಧ್ಯಕ್ಷತೆ ಯಲ್ಲಿ ಬಿಜೆಪಿ ಜಿಲ್ಲಾ ಕಛೇರಿಯಲ್ಲಿ ನಡೆದ ಸದಸ್ಯತಾ ಅಭಿಯಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸೋಮವಾರ ಭಾಗವಹಿಸಿ ಅವರು ಮಾತನಾಡುತಿದ್ದರು.

ಪ್ರಧಾನಿ ನರೇಂದ್ರ ಮೋದಿ ಅವರಿಂದ ಚಾಲನೆಗೊಂಡಿರುವ ಬಿಜೆಪಿ ಸದಸ್ಯತಾ ಅಭಿಯಾನ ದೇಶದಾದ್ಯಂತ ವೇಗ ಪಡೆ ದಿದೆ. ಪಕ್ಷ ಕಾರ್ಯಕರ್ತರು ಪ್ರತೀ ದಿನ 2 ತಾಸು ಸಮಯ ನೀಡಿ ಯೋಜನಾ ಬದ್ಧವಾಗಿ ಬೂತ್ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡುವ ಜೊತೆಗೆ ಪ್ರಧಾನಿ ಮೋದಿ ಅಭಿಮಾನಿಗಳನ್ನೂ ವಿಶ್ವಾಸಕ್ಕೆ ತೆಗೆದುಕೊಂಡಾಗ ಗುರಿ ತಲುಪಲು ಸುಲಭ ಸಾಧ್ಯ ಎಂದರು.

ಜಿಲ್ಲೆಯ ಸಂಸದರು, ಶಾಸಕರು, ಪಕ್ಷದ ಪ್ರಮುಖರು, ಎಲ್ಲಾ ಸ್ತರದ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕ ರ್ತರು ಮತ್ತು ಪಕ್ಷದ ಹಿತೈಷಿಗಳ ಸಹಕಾರದೊಂದಿಗೆ ಸಂಘಟಿತ ಪ್ರಯತ್ನದ ಮೂಲಕ ನಿಗದಿತ ಅವಧಿಯಲ್ಲಿ ನಿಶ್ಚಿತ ಗುರಿಯನ್ನು ತಲುಪಬೇಕು ಎಂದು ಅವರು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಭಗವಂತ ಖೂಬಾರನ್ನು ಶಾಲು ಹೊದೆಸಿ ಸನ್ಮಾನಿಸಿ ಮಾತನಾಡಿ, ಕಳೆದ ಒಂದು ವಾರದಿಂದ ಸದಸ್ಯತಾ ಅಭಿಯಾನ ಜಿಲ್ಲೆಯಾದ್ಯಂತ ವೇಗ ಪಡೆದಿದೆ. ಇನ್ನುಳಿದ ಕೆಲವೇ ದಿನಗಳಲ್ಲಿ ರಾಜ್ಯ ಘಟಕ ನೀಡಿರುವ ಗುರಿಯನ್ನು ತಲುಪಲು ಎಲ್ಲರೂ ಬದ್ಧತೆಯಿಂದ ಶ್ರಮ ವಹಿಸಬೇಕು ಎಂದರು.

ಬೈಂದೂರು ಮಂಡಲದ ಪರವಾಗಿ ಮಂಡಲಾಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಮನ್ ಕೀ ಬಾತ್ ಮಂಡಲ ಸಂಯೋಜಕಿ ಪ್ರಿಯದರ್ಶಿನಿ ದೇವಾಡಿಗ, ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅನಿತಾ ಆರ್.ಕೆ. ಹಾಗೂ ಸದಸ್ಯತಾ ಅಭಿಯಾನದಲ್ಲಿ 2,000ಕ್ಕೂ ಮಿಕ್ಕಿ ಸದಸ್ಯತನ ನೊಂದಾಯಿಸಿದ ಬೈಂದೂರು ಮಂಡಲ ಪ್ರಧಾನ ಕಾರ್ಯದರ್ಶಿ ಸುಧೀರ್ ಕೆ.ಎಸ್. ಅವರನ್ನು ಭಗವಂತ ಖೂಬಾ ಗೌರವಿಸಿದರು.

ಸದಸ್ಯತಾ ಅಭಿಯಾನದ ಜಿಲ್ಲಾ ಸಂಚಾಲಕ ಮಟ್ಟಾರ್ ರತ್ನಾಕರ ಹೆಗ್ದೆ ಮತ್ತು ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ.ಉದಯ ಕುಮಾರ ಶೆಟ್ಟಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೇಷ್ಮಾ ಉದಯ ಶೆಟ್ಟಿ ಸೇವಾ ಪಾಕ್ಷಿಕ ಅಭಿಯಾನದ ಪ್ರಯುಕ್ತ ಪಕ್ಷದ ವತಿಯಿಂದ ನಡೆಯುವ ಸ್ವಚ್ಛತಾ ಕಾರ್ಯಕ್ರಮಗಳ ಮಾಹಿತಿ ನೀಡಿದರು.

ಬಿಜೆಪಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಮಾಜಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ದೆ, ಜಿಲ್ಲಾ ಉಪಾಧ್ಯಕ್ಷ ಪೆರ್ಣಂಕಿಲ ಶ್ರೀಶ ನಾಯಕ್, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ದ.ಕ. ಜಿಲ್ಲಾ ಸಹ ಪ್ರಭಾರಿ ರಾಜೇಶ್ ಕಾವೇರಿ ಸಹಿತ ಜಿಲ್ಲಾ ಪದಾಧಿಕಾರಿಗಳು, ಜಿಲ್ಲಾ ಮೋರ್ಚಾ ಹಾಗೂ ಮಂಡಲಗಳ ಅಧ್ಯಕ್ಷರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಿನಕರ ಶೆಟ್ಟಿ ಹೆರ್ಗ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News