ಗಾಂಧಿ ತತ್ವಗಳು ಸರ್ವಕಾಲಕ್ಕೂ ಪ್ರಸ್ತುತ: ಉಡುಪಿ ಡಿಸಿ ವಿದ್ಯಾಕುಮಾರಿ

Update: 2024-10-02 12:33 GMT

ಉಡುಪಿ, ಅ.2: ಸ್ವಾತಂತ್ರ್ಯ ಹೋರಾಟದಲ್ಲಿ ಗಾಂಧೀಜಿ ಉಪವಾಸ ಸತ್ಯಾಗ್ರಹದ ಮೂಲಕ ಅಹಿಂಸಾ ಮಾರ್ಗದಿಂದ ಬ್ರಿಟೀಷರನ್ನು ಸೋಲಿಸುವ ಕಾರ್ಯ ಮಾಡಿದ್ದಾರೆ. ಅಂತಹ ವ್ಯಕ್ತಿಯ ಚಿಂತೆನೆಗಳು ಆ ಕಾಲಕ್ಕೆ ಮಾತ್ರವಲ್ಲ ಇಂದಿಗೂ ಪ್ರಸ್ತುತ ಎಂದು ಉಡುಪಿ ಜಲ್ಲಾಧಿಕಾರಿ ಡಾ.ಕೆ.ವಿದ್ಯಾ ಕುಮಾರಿ ಹೇಳಿದ್ದಾರೆ.

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭೆ ಉಡುಪಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್, ಉಡುಪಿ ಜಿಲ್ಲಾ ಸಮಸ್ತ ಸಹಕಾರಿ ಇವುಗಳ ನೇತೃತ್ವದಲ್ಲಿ ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರ, ಲಿಯೋ ಡಿಸ್ಟ್ರಿಕ್ಟ್ 317 ಸಿ ಮತ್ತು ಕ್ರಿಶ್ಚಿಯನ್ ಪಿ.ಯು ಕಾಲೇಜು, ಲಯನ್ಸ್ ಕ್ಲಬ್ ಉಡುಪಿ ಇಂದ್ರಾಳಿ ಮತ್ತು ಲಯನ್ಸ್ ಕ್ಲಬ್ ಉಡುಪಿ ಚೇತನ ಹಾಗೂ ಲೊಂಬಾರ್ಡ್ ಮೆಮೋರಿಯಲ್ ಮಿಷನ್ ಆಸ್ಪತ್ರೆ ಉಡುಪಿ ಸಹಯೋಗ ದೊಂದಿಗೆ ಅಜ್ಜರಕಾಡು ಪುರಭವನದಲ್ಲಿ ಬುಧವಾರ ಆಯೋಜಿಸಲಾದ ಜಿಲ್ಲಾ ಮಟ್ಟದ 155ನೇ ಗಾಂಧಿ ಜಯಂತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಚರಕದ ರಾಟೆಗೆ ನೂಲು ಹಾಕುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಗಾಂಧಿಯನ್ನು ನಾವು ಹೆಚ್ಚು ಹೆಚ್ಚು ಓದಿದಾಗ ಅವರು ನಮಗೆ ಹೆಚ್ಚು ಆಪ್ತ ರಾಗುತ್ತಾರೆ. ಇದರಿಂದ ನಮ್ಮ ಜೀವನದಲ್ಲಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಆದುದರಿಂದ ಮಕ್ಕಳು ಗಾಂಧೀಜಿಯನ್ನು ಓದಿ ತಿಳಿದು ಕೊಳ್ಳಬೇಕು. ಆ ಮೂಲಕ ಅವರ ತತ್ವವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಇದು ಗಾಂಧೀಜಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಅಭಿಪ್ರಾಯ ಪಟ್ಟರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಅರುಣ್ ಕೆ. ಮಾತನಾಡಿ, ಗಾಂಧಿ ಜಯಂತಿಯನ್ನು ಒಂದು ದಿನಕ್ಕೆ ಸೀಮಿತವಾಗಿ ಉತ್ಸವ ಮಾಡಿ ಆಚರಿಸುವುದಕ್ಕಿಂತ ಅವರ ಚಿಂತನೆಗಳನ್ನು ನಮ್ಮ ಜೀವನದಲ್ಲಿ ಅಳವಡಿ ಸಿಕೊಂಡು ಅದರಂತೆ ನಡೆಯುವುದು ಮುಖ್ಯ. ಇದರಿಂದ ಆ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ಹೇಳಿದರು.

ಭಾರತ್ ಸ್ಕೌಟ್ಸ್ ಮತುತಿ ಗೈಡ್ಸ್‌ನ ಜಿಲ್ಲಾ ಮುಖ್ಯ ಆಯುಕ್ತ ಜಯಕರ ಶೆಟ್ಟಿ ಇಂದ್ರಾಳಿ ಮಾತನಾಡಿ, ಮಹಾತ್ಮಾ ಗಾಂಧೀಜಿಯವರು ತಮ್ಮ ಜೀವನದಲ್ಲಿ ಸ್ವಚ್ಛತೆಗೆ ಹೆಚ್ಚು ಮಹತ್ವ ನೀಡಿದ್ದರು. ಸ್ವಚ್ಛತಾ ಕಾರ್ಯಗಳು ಕೇವಲ ಅವರ ದಿನಾಚರಣೆಗೆ ಮಾತ್ರ ಸೀಮಿತವಾಗಿರದೇ, ದೈನಂದಿನಗಳಲ್ಲಿಯೂ ತಮ್ಮ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸುವ ಮೂಲಕ ಅವರ ಶಿಸ್ತು, ಸಂಯಮ, ಸೇವಾ ಪರಿಕಲ್ಪನೆಯನ್ನು ಬಾಲ್ಯದಿಂದಲೇ ರೂಢಿಸಿಕೊಳ್ಳಬೇಕು ಎಂದರು.

ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಪ್ರಸಾದ್ ರಾವ್ ಎಂ. ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಗಾಂಧೀ ಜಯಂತಿ ಅಂಗವಾಗಿ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗಾಂಧೀಜಿಯವರ ಸವಿನೆನಪುಗಳ ಭಿತ್ತಿಪತ್ರವನ್ನು ಬಿಡುಗಡೆಗೊಳಿಸಲಾಯಿತು.

ಅಪರ ಜಿಲ್ಲಾಧಿಕಾರಿ ಮಮತಾದೇವಿ ಜಿ.ಎಸ್., ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ದಲಿಂಗಪ್ಪ, ಲಯನ್ಸ್ ಜಿಲ್ಲಾ ಗವರ್ನರ್ ಮುಹಮ್ಮದ್ ಹನೀಫ್, ಪ್ರಾಚ್ಯ ಸಂಚಯ ಸಂಶೋಧನಾ ಕೇಂದ್ರದ ಪ್ರೊ.ಕೃಷ್ಣಯ್ಯ, ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ರಾಜೇಶ್ ಶೇರಿಗಾರ್, ಲಯನ್ಸ್ ಕ್ಲಬ್ ಉಡುಪಿ ಚೇತನ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ಉಪಸ್ಥಿತರಿದ್ದರು.

ನಗರಸಭೆ ಪೌರಾಯುಕ್ತ ರಾಯಪ್ಪಸ್ವಾಗತಿಸಿದರು. ದಯಾನಂದ ಉಗ್ಗೆಲ್ ಬೆಟ್ಟು ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ. ವಂದಿಸಿದರು.

‘ಮಾನವತೆಗೆ ಮಾಡುವ ದೊಡ್ಡ ದ್ರೋಹ’

ಜಗದ ಚರಿತ್ರೆ ಹಾಗೂ ಎಲ್ಲ ರೀತಿಯ ಹೋರಾಟವನ್ನು ಬದಲಾಯಿಸಿದ ಗಾಂಧಿ ಇಂದು ತನ್ನ ತಾಯಿ ನಾಡಿನಲ್ಲೇ ಅಪಾರ್ಥಕ್ಕೆ ಒಳಗಾಗುತ್ತಿದ್ದಾರೆ. ಗಾಂಧಿ ಕುರಿತ ಕಾರ್ಯಕ್ರಮಗಳಿಂದ ಪ್ರಭಾವಿತರಾಗಬೇಕಿದ್ದ ಯುವಜನತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬರುವ ಗಾಂಧಿ ಕುರಿತ ಸುಳ್ಳು ವಿಚಾರಗಳು ಸತ್ಯವಾಗಿ ಕಾಣುತ್ತಿವೆ. ಈ ಮೂಲಕ ಗಾಂಧೀಜಿ ಬಗ್ಗೆ ಅಪಪ್ರಚಾರಗಳು ನಿರಂತರವಾಗಿ ನಡೆಯುತ್ತಿವೆ ಎಂದು ಸಹ ಪ್ರಾಧ್ಯಾಪಕ ಪ್ರಸಾದ್ ರಾವ್ ಎಂ. ತಿಳಿಸಿದರು.

ಆಧುನಿಕ ನಾಯಕರ ಪಟ್ಟಿಯಲ್ಲಿ ಹೆಚ್ಚು ಅರ್ಥವಾಗದೆ ಓದುತ್ತ ಹೋದ ಹಾಗೆ ನಿಗೂಢ ಆಗುವ ವ್ಯಕ್ತಿ ಅಂದರೆ ಗಾಂಧಿ. ಆದರೆ ಇಂದಿನ ಸ್ಥಿತಿಯಲ್ಲಿ ಭಾರತದ ಯುವಜನತೆಗೆ ಗಾಂಧಿ ಬಗ್ಗೆ ಆಸಕ್ತಿ ಹಾಗೂ ಗೌರವ ಕಡಿಮೆ ಯಾಗುತ್ತಿದೆ. ಗಾಂಧಿಯನ್ನು ವಿರೋಧಿಸುವುದು ಮಾನವತೆಗೆ ಮಾಡುವ ಬಹಳ ದೊಡ್ಡ ದ್ರೋಹ. ಇದು ಸಂಸ್ಕಾರಯುತ ಭಾರತದ ಲಕ್ಷ್ಮಣ ಅಲ್ಲ. ಬದಲು ಸಂಸ್ಕಾರ ಹೀನರ ಲಕ್ಷಣವಾಗಿದೆ ಎಂದು ಅವರು ಟೀಕಿಸಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News